ಭಾರತ, ಜಪಾನ್ ಒಟ್ಟಾಗಿ ಮುಂದಿನ ಸಾರಿಗೆ ಕ್ಷೇತ್ರವನ್ನು ವಿನ್ಯಾಸ ಮಾಡಬಲ್ಲದು: ವಿ. ಕೆ. ಸಾರಸ್ವತ್

WhatsApp
Telegram
Facebook
Twitter
LinkedIn

ಬೆಂಗಳೂರು: ಸಾರಿಗೆ ಕ್ಷೇತ್ರದ ಭವಿಷ್ಯವು ತಂತ್ರಜ್ಞಾನ, ನೀತಿ, ಆರ್ಥಿಕತೆ, ಪರಿಸರ ಮತ್ತು ಮಾನವನ ವರ್ತನೆಯನ್ನು ಆಧಾರಿಸಿರುತ್ತದೆ. ಭಾರತ ಮತ್ತು ಜಪಾನ್ ಒಟ್ಟಾಗಿ ಮುಂದಿನ ಸಾರಿಗೆ ಕ್ಷೇತ್ರವನ್ನು ವಿನ್ಯಾಸ ಮಾಡಬಲ್ಲದು ಎಂದು ನೀತಿ ಆಯೋಗದ ಸದಸ್ಯ ವಿ. ಕೆ. ಸಾರಸ್ವತ್ ಹೇಳಿದರು.

ಸೋಮವಾರ ಖಾಸಗಿ ಹೋಟೆಲ್ ಒಂದರಲ್ಲಿ ನೀತಿ ಆಯೋಗ, ಜಪಾನ್ ನ ಕೈಗಾರಿಕೆ, ವ್ಯಾಪಾರ ಮತ್ತು ಆರ್ಥಿಕ ಇಲಾಖೆ, ಜಪಾನ್ ನ ಬಾಹ್ಯ ವ್ಯಾಪಾರ ಸಂಸ್ಥೆಯು ಆಯೋಜಿಸಿದ ಭಾರತ ಜಪಾನ್ ಮೊಬಿಲಿಟಿ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸರಕು ಸರಂಜಾಮುಗಳ ಸಾಗಾಟ ವೆಚ್ಚ, ವೇಗವಾಗಿ ಆಗುತ್ತಿರುವ ನಗರೀಕರಣ, ಹೆಚ್ಚುತ್ತಿರುವ ಇಂಧನ ದರ, ನಿರಂತರವಾಗಿ ಆಗುತ್ತಿರುವ ಭೂ ರಾಜಕೀಯ ಬದಲಾವಣೆ, ನಮ್ಮಲ್ಲಿ ಇಂಧನಕ್ಕಿರುವ ಬೇಡಿಕೆ ಮುಂತಾದವುಗಳ ಗಮನಿಸಿ ಭಾರತವು ತನ್ನ ಮೂಲಸೌಕರ್ಯವನ್ನು ನವೀಕರಿಸುವ ಮತ್ತು ವಿಶೇಷವಾಗಿ ಎಲೆಕ್ಟ್ರಿಕ್ ವಾಹನ ವಲಯಕ್ಕೆ  ಪ್ರೋತ್ಸಾಹ ನೀಡುತ್ತಿದೆ ಎಂದರು.

ಭಾರತ ಮತ್ತು ಜಪಾನ್ ಸಾರಿಗೆಯ ಭವಿಷ್ಯಕ್ಕಾಗಿ ಪರಸ್ಪರ ಪೂರಕವಾದ ಸಾಮರ್ಥ್ಯಗಳನ್ನು ಹೊಂದಿವೆ. ಭಾರತವು ಮಾರುಕಟ್ಟೆ ವಿಸ್ತರಣೆ, ಬೆಳವಣಿಗೆ ಮತ್ತು ಸಾಫ್ಟ್‌ವೇರ್ ಹಾಗೂ ಎಐ ನಲ್ಲಿ ವಿಕಸನಗೊಳ್ಳುತ್ತಿರುವ ಸಾಮರ್ಥ್ಯಗಳನ್ನು ನೀಡಿದರೆ, ಜಪಾನ್ ಸುಧಾರಿತ ತಾಂತ್ರಿಕ ಆಳ, ಎಂಜಿನಿಯರಿಂಗ್ ಶ್ರೇಷ್ಠತೆ ಮತ್ತು ಸುರಕ್ಷತೆ ಹಾಗೂ ಸಾರಿಗೆ ವ್ಯವಸ್ಥೆಗಳಲ್ಲಿ ಜಾಗತಿಕ ನಾಯಕತ್ವವನ್ನು ನೀಡುತ್ತದೆ. ನಮ್ಮ ಪಾಲುದಾರಿಕೆಯ ಮುಂದಿನ ಹಂತವು ಕೇವಲ ಮೂಲಸೌಕರ್ಯದಿಂದ ತಂತ್ರಜ್ಞಾನದ ಸಹ-ಸೃಷ್ಟಿಯತ್ತ ಸಾಗಬೇಕು. ಹೈಡ್ರೋಜನ್ ಸಾರಿಗೆ ಮತ್ತು ಸ್ಮಾರ್ಟ್ ಸಾರಿಗೆ ವ್ಯವಸ್ಥೆಗಳಿಂದ ಹಿಡಿದು ಮುಂದಿನ ಪೀಳಿಗೆಯ ವಾಹನಗಳು ಮತ್ತು ಸಮಗ್ರ ಸಾರಿಗೆ ವೇದಿಕೆಗಳವರೆಗೆ ಸಾಗಬೇಕು ಎಂದು ಅಭಿಪ್ರಾಯಪಟ್ಟರು.

ಇಂದಿನ ಸಾರಿಗೆ ರೂಪಾಂತರವು ಕೇವಲ ಒಂದು ವಲಯದ ಸುಧಾರಣೆಯಲ್ಲ; ಇದು ಇಂಧನ, ಮೂಲಸೌಕರ್ಯ, ದತ್ತಾಂಶ ಮತ್ತು ಉದ್ಯಮದ ರಚನಾತ್ಮಕ ಮರುವಿನ್ಯಾಸವಾಗಿದೆ. ಪ್ರಾಯೋಗಿಕ ಮಾರ್ಗಗಳು ಮತ್ತು ನಿರಂತರ ಸಹಯೋಗದ ಮೂಲಕ, ಭಾರತ ಮತ್ತು ಜಪಾನ್ ಒಟ್ಟಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಜಾಗತಿಕ ಮಾನದಂಡವನ್ನು ಸ್ಥಾಪಿಸಬಹುದು ಎಂದು ಹೇಳಿದರು.

ಭಾರತವು ಮಾರುಕಟ್ಟೆ ಪ್ರಮಾಣ ಮತ್ತು ಎಐ ಪರಿಣತಿಯನ್ನು ನೀಡಿದರೆ, ಜಪಾನ್ ಸೆಮಿಕಂಡಕ್ಟರ್‌ಗಳು, ಹೈ-ಸ್ಪೀಡ್ ರೈಲು ಮತ್ತು ಸುರಕ್ಷತಾ ಎಂಜಿನಿಯರಿಂಗ್‌ನಲ್ಲಿ ಸುಧಾರಿತ ತಂತ್ರಜ್ಞಾನವನ್ನು ಒದಗಿಸುತ್ತದೆ. ನಿವ್ವಳ ಶೂನ್ಯ ಕಾರ್ಬನ್ ಹೊರಸೂಸುವಿಕೆಯನ್ನು ಸಾಧಿಸುವುದು ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವುದು ನಮ್ಮ ಸಹಭಾಗಿತ್ವದ ಗುರಿ ಎಂದರು.

ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮಾತನಾಡಿ, ಸುಧಾರಿತ ಉತ್ಪಾದನೆ, ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಮತ್ತು ದೇಶದ ಪ್ರಬಲ ಆಟೋಮೋಟಿವ್ ಎಂಜಿನಿಯರಿಂಗ್ ಹಾಗೂ ಡಿಜಿಟಲ್ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಒಟ್ಟುಗೂಡಿಸುವ ಮೂಲಕ ಕರ್ನಾಟಕವು ಭಾರತದ ಅತ್ಯಂತ ಕ್ರಿಯಾತ್ಮಕ ಸಾರಿಗೆ ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮಿದೆ. ಕ್ಲೀನ್ ಮೊಬಿಲಿಟಿ ಪಾಲಿಸಿ 2025-2030 ರಂತಹ ಪ್ರಗತಿಪರ ನೀತಿಗಳೊಂದಿಗೆ, ರಾಜ್ಯವು ವಿನ್ಯಾಸ ಮತ್ತು ಎಂಜಿನಿಯರಿಂಗ್‌ನಿಂದ ಹಿಡಿದು ಉತ್ಪಾದನೆ ಮತ್ತು ನಿಯೋಜನೆಯವರೆಗೆ ಸಂಪೂರ್ಣ ಸಾರಿಗೆ ಮೌಲ್ಯ ಸರಪಳಿಯನ್ನು ಬೆಂಬಲಿಸುವ ಸಮಗ್ರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಮುಂದಿನ ಪೀಳಿಗೆಯ ಸಾರಿಗೆ ಪರಿಹಾರಗಳಿಗೆ ವೇಗ ನೀಡಲು ಜಪಾನಿನ ಉದ್ಯಮ ಮತ್ತು ತಂತ್ರಜ್ಞಾನದ ನಾಯಕರೊಂದಿಗೆ ನಮ್ಮ ಸಂಂಬಧವನ್ನು ಗಾಢಗೊಳಿಸಲು ನಾವು ಸಮರ್ಥರಿದ್ದೇವೆ ಎಂದು ಹೇಳಿದರು.

ಜಪಾನ್ ಮತ್ತು ಭಾರತದ ನಡುವಿನ ಸಂಬಂಧವು ಕೇವಲ ವ್ಯಾಪಾರ ಅಥವಾ ಹೂಡಿಕೆಗೆ ಸೀಮಿತವಾಗಿಲ್ಲ ಇದು ವಿಶ್ವಾಸ, ತಂತ್ರಜ್ಞಾನ ಮತ್ತು ದೀರ್ಘಕಾಲೀನ ದೃಷ್ಟಿಕೋನದ ಮೇಲೆ ನಿರ್ಮಿತವಾದ ಭಾಗೀದಾರಿಕೆಯಾಗಿದೆ. ಭವಿಷ್ಯದ ಮೊಬಿಲಿಟಿಯು ಇವಿ, ಎಥೆನಾಲ್ ಮತ್ತು ಬಯೋಗ್ಯಾಸ್ ನಂತಹ ಜೈವಿಕ ಇಂಧನಗಳು, ಹೈಡ್ರೋಜನ್ ಮತ್ತು ಹೈಡ್ರೋಜನ್ ಉತ್ಪನ್ನಗಳು, ಅತ್ಯಾಧುನಿಕ ಬ್ಯಾಟರಿ ತಂತ್ರಜ್ಞಾನ, ಸಾಫ್ಟ್‌ವೇರ್ ಆಧಾರಿತ ವಾಹನಗಳ ಸಂಯೋಜನೆಯಿಂದ ರೂಪುಗೊಳ್ಳಲಿದೆ ಎಂದರು.

ಸ್ವಚ್ಛ ಮೊಬಿಲಿಟಿ ನೀತಿ (2025–30)ಯು ರಾಜ್ಯದಲ್ಲಿ 50,000 ಕೋಟಿ ರೂ ಹೂಡಿಕೆ ಮತ್ತು 1 ಲಕ್ಷ ಉದ್ಯೋಗ ಗುರಿ ಹೊಂದಿದೆ. ಮೊಬಿಲಿಟಿಯನ್ನು ಯಾವುದೇ ಒಂದು ದೇಶ ಒಂಟಿಯಾಗಿ ನಿರ್ಮಿಸಲಾಗದು. ಅದು ಭಾಗೀದಾರಿಕೆಗಳಿಂದ ನಿರ್ಮಿಸಲ್ಪಡುತ್ತದೆ. ಜಪಾನ್‌ನ ತಂತ್ರಜ್ಞಾನ ಶ್ರೇಷ್ಠತೆ ಮತ್ತು ಭಾರತದ ಮಾರುಕಟ್ಟೆ ವ್ಯಾಪ್ತಿ ಒಟ್ಟಾಗಿ ಜಗತ್ತಿಗೆ ಸುಸ್ಥಿರ ಮತ್ತು ಬುದ್ಧಿವಂತ ಮೊಬಿಲಿಟಿಯ ಭವಿಷ್ಯವನ್ನು ರೂಪಿಸಬಲ್ಲವು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಟೋಮೋಟಿವ್ ಅಂತರಾಷ್ಟ್ರೀಯ ವ್ಯಾಪಾರ ನೀತಿಯ ನಿರ್ದೇಶಕ ಕೀಸುಕೆ ಹೊಸೋನುಮಾ ಮಾತನಾಡಿ, ಸಾರಿಗೆ ಕ್ಷೇತ್ರದಲ್ಲಿ ಇಂಗಾಲದ ತಟಸ್ಥತೆಯ ಬದಲಾವಣೆಯು ಕೇವಲ ಒಂದು ಹಾದಿಯನ್ನು ಅನುಸರಿಸುವುದಿಲ್ಲ. ಆಯಾ ಮಾರುಕಟ್ಟೆಗಳ ಆರ್ಥಿಕ ವಾಸ್ತವತೆಗಳು, ನೀತಿ ಪರಿಸರಗಳು ಮತ್ತು ಗ್ರಾಹಕರ ಆದ್ಯತೆಗಳ ಆಧಾರದ ಮೇಲೆ ವಿಭಿನ್ನ ಪರಿಹಾರಗಳ ಅಗತ್ಯವಿರುತ್ತದೆ. ಆದ್ದರಿಂದ ಜಪಾನ್‌ನ ಬಹುಮುಖಿ ಕಾರ್ಯತಂತ್ರವು ಎಲೆಕ್ಟ್ರಿಫಿಕೇಶನ್, ಹೈಬ್ರಿಡ್ ತಂತ್ರಜ್ಞಾನಗಳು ಮತ್ತು ಮುಂದಿನ ಪೀಳಿಗೆಯ ಇಂಧನ ಪರಿಹಾರಗಳನ್ನು ಅಂತರಾಷ್ಟ್ರೀಯ ಸಹಯೋಗದೊಂದಿಗೆ ಕಲ್ಪಿಸಲಿದೆ. ಈ ಪ್ರಯಾಣದಲ್ಲಿ ಭಾರತವು ಒಂದು ನಿರ್ಣಾಯಕ ಪಾಲುದಾರನಾಗಿದ್ದು, ನಾವೀನ್ಯತೆ, ವಿಸ್ತರಣೆ ಮತ್ತು ಸುಸ್ಥಿರ ಸಾರಿಗೆ ಅಭಿವೃದ್ಧಿಗೆ ಅಪಾರ ಅವಕಾಶಗಳನ್ನು ನೀಡುತ್ತದೆ ಎಂದು ಹೇಳಿದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon