ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿ ಆದೇಶಿದೆ.
ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ಘೋಷಣೆ ಮಾಡಿಲ್ಲ. ಅಪರಾಧ ಪ್ರಕರಣಗಳ ಮಾಹಿತಿಗಳನ್ನೂ ಮರೆಮಾಚಿದ್ದಾರೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ವರು 2023ರ ಜೂ.24ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಉಲ್ಲಂಘನೆ ಮಾಡಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಹೈಕೋರ್ಟ್ ಅಸಿಂಧುಗೊಳಿಸಿ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಇದೇ ವೇಳೆ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಅವರನ್ನು ವಿಜಯಿ ಎಂದು ಘೋಷಿಸಲು ಏಕಸದಸ್ಯ ನ್ಯಾಯಪೀಠ ನಿರಾಕರಿಸಿದೆ. ಅಸಿಂಧುಗೊಳಿಸಿದ ಆದೇಶವನ್ನು ಚುನಾವಣಾ ಆಯೋಗಕ್ಕೆ ಮತ್ತು ವಿಧಾನಸಭೆ ಕಾರ್ಯದರ್ಶಿಗೆ ರವಾನಿಸಲು ಆದೇಶಿಸಲಾಗಿದೆ. ಆದೇಶ ಪ್ರಕಟವಾಗುತ್ತಿದ್ದಂತೆ ಸುಬ್ಬಾರೆಡ್ಡಿ ಪರ ವಕೀಲರು, ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ತಡೆಯಾಜ್ಞೆ ನೀಡಲು ಮನವಿ ಮಾಡಿದ್ದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ಅಂತಿಮವಾಗಿ ಮನವಿಯನ್ನು ಪೀಠವು ತಿರಸ್ಕಿರಿಸಿತು.
ಏನಿದು ಪ್ರಕರಣ?
ಬಾಗೇಪಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಸುಬ್ಬಾರೆಡ್ಡಿ ಚುನಾವಣೆಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಆಸ್ತಿ ಘೋಷಣೆ ವೇಳೆ ಮಾಹಿತಿಯನ್ನು ಮರೆಮಾಚುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದು ಚುನಾವಣಾ ಅಕ್ರಮವಾಗಿದ್ದು ಸುಬ್ಬಾರೆಡ್ಡಿ ಆಯ್ಕೆ ರದ್ದುಮಾಡಬೇಕು ಎಂದು ಬಿಜೆಪಿಯ ಪರಾಜಿ ಅಭ್ಯರ್ಥಿ ಸಿ. ಮುನಿರಾಜು ಅರ್ಜಿ ದಾಖಲಿಸಿದ್ದರು. ಅಲ್ಲದೇ, ಎರಡನೇ ಸ್ಥಾನಗಳಿಸಿದ್ದ ತಮ್ಮನ್ನು ಜಯಶೀಲರನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಮುಂದೇನು?
ಮುಂದೆ ಸುಬ್ಬಾರೆಡ್ಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು. ಹೈಕೋರ್ಟ್‌ನ ಅಸಿಂಧು ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದರೆ ಮಾತ್ರ ಶಾಸಕ ಸ್ಥಾನ ಉಳಿಯಲಿದೆ. ಇಲ್ಲವಾದರೆ 6 ತಿಂಗಳ ಬಳಿಕ ಮರು ಚುನಾವಣೆ ನಡೆಯಲಿದೆ.















