ಬೆಂಗಳೂರು: ಜಿಬಿಎ ಮತ್ತು ಪಾಲಿಕೆಗಳ ಅಧಿಕಾರಿ, ನೌಕರರ ಹಾಜರಾತಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ಬಯೋಮೆಟ್ರಿಕ್ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಹಾಗೂ ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್ ರಮೇಶ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಆಗ್ರಹಿಸಿದರು.
ಸೋಮವಾರ ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಜಿಬಿಎ ಮತ್ತು ಬೆಂಗಳೂರಿನ 5 ನಗರ ಪಾಲಿಕೆಗಳ ಕಛೇರಿಗಳಲ್ಲಿ ಒಟ್ಟು 2,818 ವಿವಿಧ ಹುದ್ದೆಗಳನ್ನು ಹೊಂದಿರುವ ಅಧಿಕಾರಿ, ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ 2,818 ಮಂದಿ ಅಧಿಕಾರಿ, ನೌಕರರ ಪೈಕಿ, ಕನಿಷ್ಠ ಶೇ.50 ರಷ್ಟು ಮಂದಿ ಅಧಿಕಾರಿ, ನೌಕರರು ಪ್ರತೀ ನಿತ್ಯ ನಿಗದಿತ ಸಮಯಕ್ಕೆ ಅಂದರೆ ಬೆಳಿಗ್ಗೆ 10 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿ ಸಂಜೆ 5 ಗಂಟೆಯವರೆಗೆ ಕಾರ್ಯ ನಿರ್ವಹಿಸಬೇಕೆಂಬ ಕಡ್ಡಾಯ ನಿಯಮವಿದ್ದರೂ ಸಹ, ಬೆಳಿಗ್ಗೆ 11 ಗಂಟೆಯಿಂದ 12 ಗಂಟೆಯ ವರೆವಿಗೆ ತಮ್ಮ ತಮ್ಮ ಕಛೇರಿಗಳಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಭಾರಿ ಪ್ರಮಾಣದ ಕರ್ತವ್ಯ ಲೋಪವನ್ನು ಎಸಗುತ್ತಿದ್ದಾರೆ. ಇದರಿಂದಾಗಿ ಜಿಬಿಎ ಸೇರಿದಂತೆ 05 ನಗರ ಪಾಲಿಕೆಗಳಿಗೆ ಬೃಹತ್ ಪ್ರಮಾಣದ ಮಾನವ ಸಂಪನ್ಮೂಲದ ವಂಚನೆ ಕಾರ್ಯ ನಿರಂತರವಾಗಿ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿಂದೆ 2014 ರ ಸೆಪ್ಟೆಂಬರ್ ತಿಂಗಳ 29 ರಂದು ನಡೆದ ಪಾಲಿಕೆಯ ಮಾಸಿಕ ಸಭೆಯಲ್ಲಿ ನಿರ್ಣಯವಾದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಲಯಗಳ, ವಿಭಾಗಗಳ ಮತ್ತು ಕೇಂದ್ರ ಕಛೇರಿಯ ಕಛೇರಿಗಳಲ್ಲಿ ಬಯೋಮೆಟ್ರಿಕ್ ಪದ್ಧತಿಯನ್ನು ಕಡ್ಡಾಯಗೊಳಿಸಲಾಗಿತ್ತು. ಅದರಂತೆ, ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬ ನೌಕರ ಮತ್ತು ಕಛೇರಿಯಿಂದ ಕಾರ್ಯ ನಿಮಿತ್ತ ಹೊರಗಡೆ ಹೋಗುವ ಸಂದರ್ಭಗಳಲ್ಲಿ ಹಾಗೂ ಕರ್ತವ್ಯ ಮುಗಿಸಿ ಮನೆಗೆ ತೆರಳುವ ಸಂದರ್ಭಗಳಲ್ಲಿ ಬಯೋಮೆಟ್ರಿಕ್ ಪದ್ಧತಿಯ ಮೂಲಕ ತಮ್ಮ ಹಾಜರಾತಿಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಕಡ್ಡಾಯವಾಗಿ ನಮೂದು ಮಾಡಬೇಕಿತ್ತು. ಆದರೆ, ಈ ಪದ್ಧತಿ ಜಾರಿಗೆ ಬಂದ ಒಂದೇ ವರ್ಷದ ಅವಧಿಯಲ್ಲಿ ಅನುಮಾನಾಸ್ಪದ ಕಾರಣಗಳಿಂದ ಬಯೋಮೆಟ್ರಿಕ್ ಪದ್ಧತಿಯನ್ನು ನಿಲ್ಲಿಸಲಾಗಿತ್ತು. ಅಲ್ಲದೇ, ಪಾಲಿಕೆಯ ಆಯುಕ್ತರು ಮತ್ತು ಆಡಳಿತ ವಿಭಾಗದ ವಿಶೇಷ ಆಯುಕ್ತರು ಅಂದಿನ 8 ವಲಯಗಳ ಕಛೇರಿಗಳು, ವಿಭಾಗಗಳ ಕಛೇರಿಗಳು, ಉಪ ವಿಭಾಗಗಳ ಕಛೇರಿಗಳು ಹಾಗೂ ಕೇಂದ್ರ ಕಛೇರಿಯಲ್ಲಿರುವ ಇಲಾಖೆಗಳ ಕೊಠಡಿಗಳಿಗೆ ಯಾವುದೇ ಮುನ್ಸೂಚನೆ ಇಲ್ಲದೇ ದಿಢೀರ್ ಎಂದು ತಪಾಸಣೆಗೆ, ಪರಿಶೀಲನೆ ಕಾರ್ಯಕ್ಕೆ ತೆರಳಿ ನಿಗದಿತ ಸಮಯಕ್ಕೆ ಹಾಜರಾಗದ ಅಧಿಕಾರಿ, ನೌಕರರ ಹಾಜರಾತಿ ಪುಸ್ತಕದಲ್ಲಿ ಗೈರು ಎಂದು ನಮೂದಿಸುವುದಲ್ಲದೇ, ಮಾಧ್ಯಮಗಳ ಸಮಕ್ಷಮದಲ್ಲಿಯೇ ಎಚ್ಚರಿಕೆಗಳನ್ನು ನೀಡುವ ಕೆಲಸವನ್ನೂ ಸಹ ಮಾಡುತ್ತಿದ್ದರು. ಆದರೆ, ಕಳೆದ ಎರಡು ಮೂರು ವರ್ಷಗಳಿಂದ ಅಂತಹ ಪದ್ಧತಿಗೆ ತಿಲಾಂಜಲಿ ಇಡಲಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.
ಪ್ರತೀ ತಿಂಗಳು ತಪ್ಪದೇ ಪೂರ್ಣ ಪ್ರಮಾಣದ ವೇತನ ಪಡೆಯುವ ಅಧಿಕಾರಿ, ನೌಕರರು ತಾವು ಪಡೆಯುವ ವೇತನಕ್ಕೆ ನ್ಯಾಯ ಒದಗಿಸಬೇಕಿರುವ ದೃಷ್ಟಿಯಿಂದ ನಿಗದಿತ ಸಮಯಕ್ಕೆ ಅಂದರೆ, ಬೆಳಿಗ್ಗೆ 10 ಗಂಟೆಗೆ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಸಂಜೆ 5 ಗಂಟೆಯ ನಂತರವಷ್ಟೇ ತಮ್ಮ ಕಾರ್ಯವನ್ನು ಮುಗಿಸಿ ಮನೆಗೆ ಹೊರಡುವ ಕೆಲಸವನ್ನು ಮಾಡಬೇಕಿರುತ್ತದೆ. ಆದರೆ ಜಿಬಿಎ ಮುಖ್ಯ ಆಯುಕ್ತರು ಹಾಗೂ 5 ನಗರ ಪಾಲಿಕೆಗಳ ಆಯುಕ್ತರು ಖುದ್ದಾಗಿ ಯಾವುದೇ ಮುನ್ಸೂಚನೆ ಇಲ್ಲದೇ ವಾರಕ್ಕೆ ಕನಿಷ್ಠ ಒಂದು ಬಾರಿಯಾದರೂ ದಿಢೀರನೇ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇ ಆದಲ್ಲಿ, ಪಾಲಿಕೆಗಳ 17 ಇಲಾಖೆಗಳ ಕಛೇರಿಗಳಲ್ಲಿ ನಡೆಯುತ್ತಿರುವ ಹಾಜರಾತಿ ಪುಸ್ತಕದಲ್ಲಿನ ವಂಚನೆ ಕಾರ್ಯ ಅವರಿಗೆ ಸ್ಪಷ್ಟವಾಗಿ ಅರಿವಾಗುತ್ತದೆ ಎಂಬ ಸತ್ಯವನ್ನು ತಿಳಿಸಲಾಗಿದ್ದು, ಕೂಡಲೇ ಎಲ್ಲಾ 5 ಪಾಲಿಕೆಗಳು ಮತ್ತು ಜಿಬಿಎ ಕೇಂದ್ರ ಕಛೇರಿಯ ಅಧಿಕಾರಿ, ನೌಕರರುಗಳು ಕಡ್ಡಾಯವಾಗಿ ಬಯೋಮೆಟ್ರಿಕ್ ಪದ್ಧತಿಯಲ್ಲಿ ಹಾಜರಾತಿಯನ್ನು ನಮೂದು ಮಾಡಬೇಕೆಂಬ ಕಡ್ಡಾಯ ನಿಯಮವನ್ನು ಜಾರಿಗೆ ತರಬೇಕು ಮತ್ತು ಆ ಮೂಲಕ ಇವರುಗಳು ಪಾಲಿಕೆಗೆ ಮಾಡುತ್ತಿರುವ ಮಹಾ ವಂಚನೆ ಕಾರ್ಯಕ್ಕೆ ಇತಿಶ್ರೀ ಹಾಡಬೇಕು ಬೆಂಗಳೂರಿನ ನಾಗರಿಕರ ಮತ್ತು ತೆರಿಗೆದಾರರ ಪರವಾಗಿ ಜಿಬಿಎ ಮುಖ್ಯ ಆಯುಕ್ತರನ್ನು ಹಾಗೂ 5 ನಗರ ಪಾಲಿಕೆಗಳ ಆಯುಕ್ತರುಗಳನ್ನು ಆಗ್ರಹಿಸಲಾಗಿದೆ ಎಂದು ಎನ್.ಆರ್. ರಮೇಶ್ ಮಾಹಿತಿ ನೀಡಿದರು.















