ಬೆಂಗಳೂರು: ಬೆಸ್ಕಾಂ ನಿಂದ ಸಮಯಕ್ಕೆ ಸರಿಯಾಗಿ ಪ್ರತಿ ತಿಂಗಳು ವಿದ್ಯುತ್ ಬಿಲ್ ಗಳನ್ನು ನಗರ ಪಾಲಿಕೆಗೆ ಕಡ್ಡಾಯವಾಗಿ ನೀಡಿ, ಬಾಕಿ ಬಿಲ್ ಗಳ ಮೇಲೆ ಬಡ್ಡಿ ದರಗಳನ್ನು ವಿಧಿಸದಂತೆ ಕ್ರಮ ವಹಿಸಲು ಬೆಸ್ಕಾಂ ಅಧಿಕಾರಿಗಳಿಗೆ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಬ್ಯಾಟರಾಯನಪುರದ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ 5ನೇ ರಾಜ್ಯ ಹಣಕಾಸು ಆಯೋಗದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೀದಿ ದೀಪಗಳು, ಉದ್ಯಾನವನ, ಗ್ರಂಥಾಲಯಗಳು, ಸಭಾಂಗಣಗಳು, ಶಾಲೆಗಳು ಹಾಗೂ ಪಾಲಿಕೆಗೆ ಸಂಬಂಧಿಸಿದ ಇತರ ಸ್ಥಳಗಳಲ್ಲಿನ ವಿದ್ಯುತ್ ಪೂರೈಕೆಯ ಬಿಲ್ ಗಳನ್ನು ಪಾಲಿಕೆಗೆ ತ್ರೈಮಾಸಿಕವಾಗಿ ಸಲ್ಲಿಸುತ್ತಿರುವುದರಿಂದ ಬಿಲ್ ಗಳ ಮೇಲಿನ ಬಡ್ಡಿದರ ಪಾಲಿಕೆಗಳಿಗೆ ಹೊರೆಯಾಗುತ್ತಿರುವುದು ಗಮನಕ್ಕೆ ಬಂದಿದೆ, ಆದ್ದರಿಂದ ಬೆಸ್ಕಾಂ ವತಿಯಿಂದ ಪ್ರತಿ ತಿಂಗಳು ವಿದ್ಯುತ್ ಬಿಲ್ ಗಳನ್ನು ನಗರ ಪಾಲಿಕೆಗೆ ಸಲ್ಲಿಸಿ, ಸಮನ್ವಯದೊಂದಿಗೆ ಬಡ್ಡಿ ದರಗಳನ್ನು ನಿಯಂತ್ರಿಸಲು ಕ್ರಮ ವಹಿಸುವಂತೆ ತಿಳಿಸಿದರು.
ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಏರ್ಪೋರ್ಟ್ ರಸ್ತೆಯಲ್ಲಿ ರಾತ್ರಿಯಿಡೀ ಕೈಗೊಳ್ಳಲಾಗುತ್ತಿರುವ ಸ್ವಚ್ಛತೆ, 30 ಕಿಮೀ ಪೂರ್ಣಗೊಂಡಿರುವ ಫುಟ್ ಪಾತ್ ವಾಕ್, ಮೆಗಾ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಂಡು ಒಂದೇ ದಿನದಲ್ಲಿ 599 ಟನ್ ತ್ಯಾಜ್ಯ ತೆರವುಗೊಳಿಸಿದ ಅಧಿಕಾರಿಗಳನ್ನು ಉತ್ತೇಜಿಸುವ ಸಲುವಾಗಿ ಬಹುಮಾನ ವಿತರಣಾ ಕಾರ್ಯಕ್ರಮದ ಕುರಿತು ಸಭೆಯಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು. 5 ನಗರ ಪಾಲಿಕೆಗಳ ಪೈಕಿ ಉತ್ತರ ನಗರ ಪಾಲಿಕೆಯಲ್ಲಿ ಪ್ರಪ್ರಥಮವಾಗಿ ಫೋನ್ ಇನ್ ಕಾರ್ಯಕ್ರಮ ಪ್ರಾರಂಭಿಸಲಾಗಿದೆ, ಈ ಕಾರ್ಯಕ್ರಮ ನಿರಂತರವಾಗಿ ಒಟ್ಟು 15 ವಾರ ನಡೆದ್ದಿದ್ದು, 831 ಆಹವಾಲುಗಳನ್ನು ಸ್ವೀಕರಿಸಿ ಬಹುತೇಕ ಶೇಕಡಾ 70 ರಷ್ಟು ಇತ್ಯರ್ಥ ಪಡಿಸಿರುವುದು ಉತ್ತಮ ಕೆಲಸವಾಗಿದೆ. ಇತರೆ ಅಭಿವೃದ್ಧಿ ಕಾರ್ಯಗಳು ಸಹ ಉತ್ತಮ ರೀತಿಯಲ್ಲಿ ನಡೆಯುತ್ತಿವೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಹಾಗೂ ಅಭಿವೃದ್ಧಿ ಅಪರ ಆಯುಕ್ತೆ ಲತಾ ಮಾತನಾಡಿ, ಮುಂದಿನ ಹಣಕಾಸು ವರ್ಷದಲ್ಲಿ ಉದ್ಯಾನವನಗಳು ಹಾಗೂ ಕೆರೆಗಳ ಸುತ್ತ ಮುತ್ತ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಅವಶ್ಯಕತೆ ಇದ್ದು, ಇದಕ್ಕೆ ಸುಮಾರು 75 ಕೋಟಿ ರೂಪಾಯಿಗಳು ಬೇಕಾಗಿದೆ. ಹೊಸದಾಗಿ ಬೃಹತ್ ಮಳೆ ನೀರು ಕಾಲುವೆಗಳ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಕ್ಕೆ 500 ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಹೊಸ ರಸ್ತೆಗಳ ನಿರ್ಮಾಣ, ಅಗಲೀಕರಣ ಮತ್ತು ದುರಸ್ಥಿ ಸಂಬಂಧಿತ ಕಾರ್ಯಕ್ಕೆ 500 ಕೋಟಿ ರೂಪಾಯಿಗಳ ಅಗತ್ಯವಿದೆ. ಉಳಿದಂತೆ ಘನ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಅನ್ವಯ ಬೀದಿ ನಾಯಿಗಳ ಸ್ಥಳಾಂತರ, ಲಸಿಕೆ ಮತ್ತು ಅವುಗಳಿಗೆ ಸೂಕ್ತ ಆಶ್ರಯ ತಾಣ ಕಲ್ಪಿಸಲು 25 ಕೋಟಿಗಳ ರೂಪಾಯಿಗಳನ್ನು ಮೀಸಲಿಡಬೇಕಿದೆ. ಈ ಎಲ್ಲಾ ಕಾರ್ಯಗಳಿಗೆ ಸೂಕ್ತ ಅನುದಾನವನ್ನು ಹಣಕಾಸು ಆಯೋಗ ಒದಗಿಸಬೇಕು ಎಂದು ವಿನಂತಿಸಿದರು.
ಇಂದಿರಾ ಕ್ಯಾಂಟೀನ್ ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ 10 ಕೋಟಿ ರೂಪಾಯಿಗಳ ಅವಶ್ಯಕತೆ ಇದೆ. ಬಿಬಿಎಂಪಿಯನ್ನು 5 ನಗರ ಪಾಲಿಕೆಗಳಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಮುಖ್ಯವಾಗಿ ನಮ್ಮ ಉತ್ತರ ನಗರ ಪಾಲಿಕೆ ಮುಖ್ಯ ಕಚೇರಿ ತೀವ್ರ ಸ್ಥಳಾವಕಾಶದ ಕೊರತೆಯನ್ನು ಎದುರಿಸುತ್ತಿದೆ. ಇನ್ನು ಇತರ ವಲಯ ಕಚೇರಿಗಳು ಸಹ ಇಕ್ಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಚುನಾವಣೆಗಳು ಸಹ ಇನ್ನೇನು ಘೋಷಣೆಯಾಗಲಿದ್ದು, ಕೌನ್ಸಿಲ್ ಸಭೆ ನಡೆಸಲು ಸಹ ಸೂಕ್ತ ವ್ಯವಸ್ಥೆ ಇಲ್ಲದಾಗಿದೆ. ಈ ಎಲ್ಲಾ ಕಾರ್ಯಗಳಿಗೆ ಒಟ್ಟಾರೆಯಾಗಿ ಸುಮಾರು 100 ಕೋಟಿಗಳ ಖರ್ಚು ವೆಚ್ಚವನ್ನು ಅಂದಾಜಿಸಲಾಗಿದ್ದು, ಈ ಸಂಬಂಧ ಹಣಕಾಸು ಆಯೋಗ ಸೂಕ್ತ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಕೋರಿದರು.
ಆರ್ಥಿಕ ಸ್ಥಿತಿಗಳ ಕುರಿತು ಚರ್ಚೆ:
ಸಭೆಯಲ್ಲಿ ಸಂಪನ್ಮೂಲ ಕ್ರೂಢೀಕರಣ ಮತ್ತು ಬಳಕೆ ಹಾಗೂ ಸ್ಥಳೀಯ ಆಡಳಿತ ಆರ್ಥಿಕ ಸ್ಥಿತಿಗಳ ಕುರಿತು ಚರ್ಚೆ ನಡೆಯಿತು. ನಗರ ಪಾಲಿಕೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಹಾಗೂ ಅನುದಾನದ ಅವಶ್ಯಕತೆಯ ಕುರಿತು ಸಮಾಲೋಚನೆ ನಡೆಸಲಾಯಿತು. ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕಲ್ಯಾಣ ಕಾರ್ಯಕ್ರಮಗಳು, ಸ್ಲಂ ಗಳ ಅಭಿವೃದ್ಧಿ, ಘನ ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆ, ರಸ್ತೆಗಳ ದುರಸ್ಥಿ ಮತ್ತು ಅಗಲೀಕರಣ, ಬೀದಿ ದೀಪಗಳ ನಿರ್ವಹಣೆ, ಸೋಲಾರ್ ದೀಪಗಳ ಅಳವಡಿಕೆ, ಸಂಪನ್ಮೂಲ ಕ್ರೋಢೀಕರಣ, ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಗತಿವ ಪರಿಶೀಲನೆಯನ್ನು ಕೂಡ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಂಟಿ ಆಯುಕ್ತೆ ಪಲ್ಲವಿ, ರಾಜ್ಯ ಹಣಕಾಸು ಆಯೋಗದ ಸದಸ್ಯ ಮೊಹಮ್ಮದ್ ಸನಾ ಉಲ್ಲಾ, ನಿವೃತ್ತ ನಿಯಂತ್ರಕ ಆರ್.ಎಸ್. ಪೋಂಡೆ, ರಾಜ್ಯ ಲೆಕ್ಕಪತ್ರ ಇಲಾಖೆ ಸಮಾಲೋಚಕಿ ಸ್ಮಿತಾ ಬಿರಾದರ್, ಬೆಸ್ಕಾಂ, ಜಲ ಮಂಡಳಿ, ಸ್ಲಂ ಬೋರ್ಡ್ ಅಧಿಕಾರಿಗಳು ಸೇರಿದಂತೆ ನಗರ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.














