ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ)ಯನ್ನು ಪಠ್ಯಕ್ರಮದ ಒಂದು ಭಾಗವಾಗಿ ಅಳವಡಿಸಿಕೊಂಡಿದ್ದೇವೆ. ಆ ಮೂಲಕ ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಅವಶ್ಯಕವಾಗಿರುವ ಶಿಕ್ಷಣ, ಕೌಶಲವನ್ನು ಕಲಿಸಿಕೊಡುತ್ತಿದ್ದೇವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ಹೇಳಿದರು.
ಗುರುವಾರ ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಟೆಕ್ ಸಮ್ಮೀಟ್‌ನಲ್ಲಿ ಭಾರತ ತಂತ್ರಜ್ಞಾನ ಆಧಾರಿತ ‘ವಿಷ್ಯದ ಶಿಲ್ಪಿಯಾಗಿ ಶಿಕ್ಷಣದ ಪಾತ್ರ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ನಾವು ಎನ್‌ಇಪಿನ್ನು ಜಾರಿಗೊಳಿಸಿದ್ದೇವೆ. ಪ್ರತಿ ವಿದ್ಯಾರ್ಥಿಗಳಿಗೆ ಸಿ-ಪ್ರೋಗ್ರಾಂ ಕಲಿಸುತ್ತಿದ್ದೇವೆ. ಜತೆಗೆ ಎಐ ಆಧಾರಿತ ಕೌಶಲ ಶಿಕ್ಷಣ ನೀಡುತ್ತಿದ್ದೇವೆ ಎಂದರು.
ವಿದ್ಯಾರ್ಥಿಗಳಿಗೆ ಸೃಜನಾತ್ಮಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದಕ್ಕಾಗಿ ಅವಿಷ್ಕಾರ ಮತ್ತು ಡಿಸೈನ್ ಥಿಂಕಿಂಗ್ ಲ್ಯಾಬ್ ತೆರೆದಿದ್ದೇವೆ. ನಾವು ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗಕ್ಕೆ ಅರ್ಹರಾಗಿ ರೂಪಿಸುವುದರ ಜತೆಗೆ ಅವರನ್ನು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ, ಪರಿಹಾರಕರು, ಆವಿಷ್ಕಾರಕರು, ಭವಿಷ್ಯದ ನಾಯಕರನ್ನಾಗಿ ರೂಪಿಸುತ್ತಿದ್ದೇವೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಫ ಲಿತಾಂಶ ನೀಡುವ ಉದ್ದೇಶದಿಂದ ನಾವು ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ ಫಲಿತಾಂಶ ನೀಡಿದ್ದೇವೆ. ಭಾರತ ತಂತ್ರಜ್ಞಾನ ಚಾಲಿತ ಭವಿಷ್ಯವು ನಮ್ಮ ತರಗತಿಗಳಲ್ಲಿ ಪ್ರಯೋಗಾಲಯ, ಯುವ ಇಂಜಿನಿಯರ್‌ಗಳ ಮನಸಿನಲ್ಲಿ ರೂಪುಗೊಳ್ಳುತ್ತಿದೆ ಎಂದು ಡಾ.ಎಸ್.ವಿದ್ಯಾಶಂಕರ್ ತಿಳಿಸಿದರು.















