ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ನೇಮಕ: ಸಿಎಂ ಸಿದ್ದರಾಮಯ್ಯ

WhatsApp
Telegram
Facebook
Twitter
LinkedIn

ಬೆಂಗಳೂರು: ಮುಂದಿನ ವರ್ಷ ಜನವರಿ 29ರಿಂದ ಫೆಬ್ರವರಿ 6ರ ವರೆಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದ್ದು, ಹಿರಿಯ ಚಲನಚಿತ್ರ ಕಲಾವಿದ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರಾಜ್ ರನ್ನು ಚಲನಚಿತ್ರೋತ್ಸವದ ರಾಯಭಾರಿಯಾಗಿ ಆಗಿ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಮಂಗಳವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಯೋಜಿಸಲಾದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿಯ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಉದ್ಘಾಟನೆಯು ವಿಧಾನಸೌಧದ ಮುಂಭಾಗದಲ್ಲಿ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದೆ ಎಂದು ತಿಳಿಸಿದರು.

ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಮಹಿಳಾ ಸಬಲೀಕರಣ ಕುರಿತಾದ ಥೀಮ್ ಇರಲಿದೆ. ರಾಜಾಜಿನಗರದ ಲುಲುಮಾಲ್‍ನಲ್ಲಿರುವ ಸಿನಿಪೋಲಿಸ್ ನ 11 ಸ್ಕ್ರೀನ್‍ಗಳಲ್ಲಿ ಚಿತ್ರೋತ್ಸವದ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ. ಏಷಿಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ಗಳ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಈ ಮೂರು ಸ್ಪರ್ಧಾ ವಿಭಾಗಗಳಿಗೆ ಇದುವರೆಗೆ 110ಕ್ಕೂ ಹೆಚ್ಚು ಚಲನಚಿತ್ರಗಳು ಸಲ್ಲಿಕೆಯಾಗಿವೆ ಎಂದರು.

ಚಲನಚಿತ್ರಗಳ ಸ್ಪರ್ಧಾತ್ಮಕ ವಿಭಾಗಗಳ ಅರ್ಜಿ ಸಲ್ಲಿಕೆಗೆ ಇದೆ ತಿಂಗಳ 31 ಕಡೆಯ ದಿನಾಂಕವಾಗಿದೆ. 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು, ರಾಜಾಜಿನಗರದ ಲುಲು ಮಾಲ್, ಜೊತೆಗೆ ಡಾ. ರಾಜ್ ಕುಮಾರ್ ಭವನ, ಕಲಾವಿದರ ಸಂಘ ಚಾಮರಾಜಪೇಟೆ ಹಾಗೂ ಬನಶಂಕರಿಯಲ್ಲಿರವ ಸುಚಿತ್ರ ಫಿಲಂ ಸೊಸೈಟಿಯಲ್ಲಿಯೂ ಚಲನಚಿತ್ರಗಳ ಪ್ರದರ್ಶನವಿರಲಿದೆ. ಕನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ ಎಂದು ಮಾಹಿತಿ ನೀಡಿದರು.

ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ವಿವಿಧ ಪ್ರಶಸ್ತಿಗಳನ್ನು ಪಡೆದ ಮತ್ತು ಜನಮನ್ನಣೆಗಳಿಸಿದ ದೇಶ-ವಿದೇಶದ ಅತ್ಯುತ್ತಮ ಚಲನಚಿತ್ರಗಳು 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ. ಕಾನ್ಸ್ (ಫ್ರಾನ್ಸ್), ಬರ್ಲಿನ್ (ಜರ್ಮನಿ, ವೆನಿಸ್ (ಇಟಲಿ), ಕಾರ್ಲೋವಿ ವೇರಿ (ಜೆಕ್ ರಿಪಬ್ಲಿಕ್, ಲೊಕಾರ್ನೂ (ಸಿಟ್ಟಲೆರ್ಂಡ್), ರಾಟರ್‍ಡ್ಯಾಮ್ (ನೆದರ್ ಲ್ಯಾಂಡ್), ಬೂಸಾನ್ (ದಕ್ಷಿಣ ಕೂರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಒಂದೇ ಕಡೆ ಸಿನಿಮಾ ಪ್ರಿಯರಿಗೆ ವೀಕ್ಷಿಸಲು ದೊರೆಯಲಿವೆ. ಜೊತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶದ ಅತ್ಯುತ್ತಮ ಚಲನಚಿತ್ರಗಳು ಸಹ ಇಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.

ಇದರೊಂದಿಗೆ ಅಲಿಯಾನ್ಸ್ ಫ್ರಾಂಸೇ ಬೆಂಗಳೂರು ಹಾಗೂ ಫ್ರೆಂಚ್ ಇನ್ಸಿಟ್ಯೂಟ್ ಇನ್ ಇಂಡಿಯಾ ಸಹಯೋಗದಲ್ಲಿ ಆಫ್ರಿಕಾ ಸಿನಿಮಾಗಳ ಇತಿಹಾಸವನ್ನು ದಾಖಲಿಸುವ ವಿಶೇಷ ಚಲನಚಿತ್ರಗಳ ಸರಣಿಯನ್ನೂ ಈ ವರ್ಷದ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಬಾರಿ ಚಿತ್ರೋತ್ಸವದ ಫಿಲಂ ಅಕಾಡೆಮಿಕ್ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಲು ಅನುಕೂಲವಾಗುವಂತೆ ಚಿತ್ರೋತ್ಸವದ ಪ್ರಧಾನ ಕೇಂದ್ರದಲ್ಲಿ ವಿಶೇಷ ವೇದಿಕೆ ಇರಲಿದೆ ಎಂದರು.

ಇದೇ ವೇದಿಕೆಯ ಆವರಣದಲ್ಲಿ 91 ವರ್ಷಗಳ ವರ್ಣ ರಂಜಿತ, ಸ್ಮರಣೀಯ ಸಿನಿಮಾ ಸಮಸ್ಕೃತಿಯ ಇತಿಹಾಸವಿರುವ ಕನ್ನಡ ಚಿತ್ರರಂಗದ ಮೈಲಿಗಲ್ಲುಗಳನ್ನು ಬಿಂಬಿಸುವ ವೈವಿಧ್ಯಮಯ ಛಾಯಾಚಿತ್ರ ಪ್ರದರ್ಶನವನ್ನು ಸಹ ಏರ್ಪಡಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಚಿತ್ರೋತ್ಸವ ಆಯೋಜನೆಗೆ ಅನುದಾನ:

2025-26 ನೇರ ಸಾಲಿನ 17ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಏರ್ಪಡಿಸಲು ರೂ. 7ಕೋಟಿ ರೂಪಾಯಿಗಳ ಅಗತ್ಯವಿರುವ ಅನುದಾನ ಒದಗಿಸಲಾಗಿದೆ. ಅಂತಿಮ ದಿನದ ಸಮಾರೋಪ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಬಿ ಬಿ ಕಾವೇರಿ, ಆಯುಕ್ತ ಹೇಮಂತ್ ನಿಂಬಾಳ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಅಕಾಡೆಮಿ ಸದಸ್ಯರು, ಸಂಘಟನಾ ಸಮಿತಿ ಸದಸ್ಯರು, ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon