ಬೆಂಗಳೂರು: ಬಾಗಲಕೋಟೆ ಬಸವಣ್ಸನ ಐಕ್ಯ ನಾಡು, ಇಲ್ಲಿ ಎಲ್ಲ ಸಮಾಜದವರು ಸಾಮರಸ್ಯದಿಂದ ಇದ್ದಾರೆ. ಇಂತಹ ಹಿನ್ನೆಲೆ ಇರುವ ಜಿಲ್ಲೆಯಲ್ಲಿ ಧಾರ್ಮಿಕ ಅಂಧತ್ವ ಹೊಂದಿರುವವರಿಗೆ ಸರ್ಕಾರದ ಆಶ್ರಯ ಸಿಗುವಂತದ್ದು ಅತ್ಯಂತ ಕೇಡಿನ ಸಂಗತಿ. ಇಲ್ಲಿ ನಡೆದಿರುವ ಘಟನೆ ಕಲ್ಲು ತೂರಾಟ ಮಾಡುವ, ಚಪ್ಪಲಿ ತೂರುವ, ಶಿವಾಜಿ ಮಹಾರಾಜರಿಗೆ ಅಗೌರವ ತೋರುವವರಿಗೆ ಈ ಸರ್ಕಾರ ಸಂಪೂರ್ಣ ಬೆಂಬಲಕ್ಕೆ ನಿಂತಿರುವುದು ಬಹಳ ಸ್ಪಷ್ಟ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಶಿವಾಜಿ ಮಹಾರಾಜ ಭಾರತ ದೇಶ ಕಂಡ ಒಬ್ಬ ಅಪ್ರತಿಮ ನಾಯಕ. ಇಡೀ ದೇಶ ಅವರನ್ನು ಗೌರವದಿಂದ ಕಾಣುತ್ತದೆ. ಅವರಿಗೆ ಕಿಡಿಗೇಡಿಗಳು ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ. ಬಾಗಲಕೋಟೆಯ ಎಸ್.ಪಿ ಗೆ ಕಲ್ಲೇಟು ಬಿದ್ದು ರಕ್ತ ಬೀಳುತ್ತಿರುವ ದೃಶ್ಯಗಳು ಇದ್ದರೂ ಕೂಡ ನನಗೇನು ಆಗಿಲ್ಲಾ ಅಂತ ಹೇಳಿದ್ದಾರೆ. ಕಲ್ಲು ತೂರಿದವರಿಗೆ, ಚಪ್ಪಲಿ ತೂರಿದವರಿಗೆ ಇದರ ಹಿಂದೆ ಷಡ್ಯಂತ್ರ ಮಾಡಿದವರಿಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ನಾಮಕಾಸ್ತೆ ಬಂಧನ ತೋರಿಸುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ತುಷ್ಟಿಕರಣದ ಪರಾಕಾಷ್ಟೆಗೆ ರಾಜ್ಯ ಸರ್ಕಾರ ಮುಟ್ಟಿದೆ. ಇಲ್ಲಿ ನ್ಯಾಯಕ್ಕೆ, ಧರ್ಮಕ್ಕೆ ನೀತಿಗೆ ಯಾವುದೇ ಬೆಲೆ ಇಲ್ಲ. ಕೇವಲ ತುಷ್ಟೀಕರಣ, ಭಷ್ಟಾಚಾರ, ವಿಭಜಿಸುವಕರಣಕ್ಕೆ ಮಾತ್ರ ಬೆಲೆ ಇರುವುದು ಬಹಳ ಸ್ಪಷ್ಟವಾಗಿದೆ. ಈ ಸರ್ಕಾರ ತಮ್ಮ ಕರ್ತವ್ಯಗಳನ್ನು ಮರೆತು ರಾಜ್ಯಕ್ಕೆ ದೀರ್ಘಕಾಲ ಹಾನಿಯಾಗುವ ಕೆಲಸ ಮಾಡುವುದನ್ನು ನೋಡಿದರೆ ಜನರು ಇದರ ವಿರುದ್ದ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಈ ಘಟನೆಯಂತೂ ಅತ್ಯಂತ ಖಂಡನಾರ್ಹ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.















