ವಿಶೇಷ ಚೇತನ ವಿದ್ಯಾರ್ಥಿಗಳಿಗಾಗಿ ಓಶಿಯಾನಿಕ್ ಪ್ರೀಮಿಯರ್ ಲೀಗ್ ಆಯೋಜನೆ

WhatsApp
Telegram
Facebook
Twitter
LinkedIn

ಬೆಂಗಳೂರು: ವಿಶೇಷ ಚೇತನ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸಮಾನ ಅವಕಾಶ ಹಾಗೂ ಪ್ರೋತ್ಸಾಹ ನೀಡುವ ಉದ್ದೇಶದಿಂದ ಓಶಿಯಾನಿಕ್ ಎಜುಕೇಷನ್ ಸೊಸೈಟಿ ವತಿಯಿಂದ  ಬೆಂಗಳೂರಿನ ಬಿಇಎಲ್ ಕಾಲೇಜು ಮೈದಾನದಲ್ಲಿ ‘ಓಶಿಯಾನಿಕ್ ಪ್ರೀಮಿಯರ್ ಲೀಗ್’ (ಒಪಿಎಲ್) ಅಂತರ್ ಕಾಲೇಜು ಕ್ರೀಡಾಕೂಟ ಆಯೋಜಿಸಲಾಗಿತ್ತು.

ಕಿವುಡ ಮತ್ತು ಶ್ರವಣದೋಷವುಳ್ಳ ವಿದ್ಯಾರ್ಥಿಗಳು ಹಾಗೂ ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಕ್ರೀಡಾಕೂಟದಲ್ಲಿ ಅಂಧರ ಕ್ರಿಕೆಟ್, ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಸ್ಪರ್ಧೆಗಳು ನಡೆದವು. ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಸಂಘಟನೆಗಳಿಂದ ತಂಡಗಳು ಭಾಗವಹಿಸಿ ತಮ್ಮ ಕ್ರೀಡಾ ಕೌಶಲ ಪ್ರದರ್ಶಿಸಿದವು.

ಓಶಿಯಾನಿಕ್ ಎಜುಕೇಷನ್ ಸೊಸೈಟಿಯ ಸಹ ಸಂಸ್ಥಾಪಕಿ ಶೋಭಾ ಕ್ರೀಡಾಕೂಟದ ಕುರಿತು ಮಾದ್ಯಮಗಳ ಜೊತೆ ಮಾತನಾಡಿ, ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು ದೊರೆಯಬೇಕು. ಅವರಲ್ಲಿರುವ ಸಾಮರ್ಥ್ಯವನ್ನು ಸಮಾಜ ಗುರುತಿಸಿ ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ತಿಳಿಸಿದರು.

2020ರ ಕೋವಿಡ್ ನಂತರ ಶ್ರವಣದೋಷವುಳ್ಳ ಅನೇಕ ವಿದ್ಯಾರ್ಥಿಗಳು ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆಯಲು ಕಾಲೇಜುಗಳ ಕೊರತೆ ಹಾಗೂ ಕಲಿಕಾ ವಾತಾವರಣದ ಸಮಸ್ಯೆಗಳನ್ನು ಎದುರಿಸುತ್ತಿರುವುದು ಗಮನಕ್ಕೆ ಬಂದಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶ್ರವಣದೋಷವುಳ್ಳ ಮಕ್ಕಳಿಗಾಗಿ ಶಾಲೆಗಳಿದ್ದರೂ, ಉನ್ನತ ಶಿಕ್ಷಣ ಪಡೆಯಲು ಸೂಕ್ತ ವ್ಯವಸ್ಥೆಗಳ ಕೊರತೆ ಇದೆ ಎಂಬುದನ್ನು ಸಮೀಕ್ಷೆಯ ಮೂಲಕ ಗುರುತಿಸಲಾಯಿತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಅಂತರ್ಗತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಸಂಸ್ಥೆ ಮುಂದಾಯಿತು ಎಂದು ಶೋಭಾ ಮಾಹಿತಿ ನೀಡಿದರು.

ಓಶಿಯಾನಿಕ್ ಎಜುಕೇಷನ್ ಸೊಸೈಟಿಯ ಸಂಸ್ಥಾಪಕರಾದ ಡಾ ಪೂವಯ್ಯ ಮಾತನಾಡಿ,  ಸಂಸ್ಥೆಯಲ್ಲಿ ಸಾಮಾನ್ಯ ಶಿಕ್ಷಕರೊಂದಿಗೆ ಸಂಕೇತ ಭಾಷೆಯ ಮೂಲಕ ಪಾಠಗಳನ್ನು ವಿವರಿಸುವ ಶಿಕ್ಷಕರನ್ನೂ ನೇಮಿಸಲಾಗಿದೆ. ಇದರಿಂದ ಶ್ರವಣದೋಷವುಳ್ಳ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳೊಂದಿಗೆ ಒಂದೇ ತರಗತಿಯಲ್ಲಿ ಕಲಿಯಲು ಅನುಕೂಲವಾಗುತ್ತಿದೆ. ಔಪಚಾರಿಕ ಶಿಕ್ಷಣದ ಜೊತೆಗೆ ಕೌಶಲಾಧಾರಿತ ತರಬೇತಿಗೂ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಣ ಮತ್ತು ಕೌಶಲಗಳ ಮೂಲಕ ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿಸಿ ಉದ್ಯೋಗಾವಕಾಶಗಳನ್ನು ಪಡೆಯಲು ಸಜ್ಜುಗೊಳಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.

ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಉತ್ತಮ ಅವಕಾಶಗಳಿವೆ ಎಂಬ ಅರಿವು ಮೂಡಿಸುವುದು, ಅವರ ಆತ್ಮವಿಶ್ವಾಸ ಹೆಚ್ಚಿಸುವುದು ಹಾಗೂ ಉನ್ನತ ಶಿಕ್ಷಣದ ಮಹತ್ವವನ್ನು ಸಾರುವುದು ಈ ಕ್ರೀಡಾಕೂಟದ ಪ್ರಮುಖ ಆಶಯವಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವುದರ ಜತೆಗೆ ಸಮಾನತೆ ಮತ್ತು ಒಳಗೊಳ್ಳುವಿಕೆಯ ಸಂದೇಶವನ್ನು ಸಮಾಜಕ್ಕೆ ತಲುಪಿಸಲಿವೆ ಎಂದು ತಿಳಿಸಿದರು.

ಕ್ರೀಡಾಕೂಟದ ಸಂಯೋಜಕರಾದ ಬೆನ್ನೋ ರಾಜ್ ಈ ವೇಳೆ ಉಪಸ್ಥಿತರಿದ್ದರು.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon