ಬೆಂಗಳೂರು: ಚಿತ್ರಕಲಾ ರಂಗದಲ್ಲಿ ವಿನೂತನ ಪ್ರಯತ್ನ ಎನ್ನುವಂತೆ ಚಿತ್ರ ಕಲಾ ಪರಿಷತ್ತಿನಲ್ಲಿ ಆಯೋಜನೆಗೊಂಡಿರುವ ಕಲಾ ಶಿಕ್ಷಕಿ ದೇವಿಪ್ರಿಯಾ ಅವರ ಚೊಚ್ಚಲ ಏಕವ್ಯಕ್ತಿ ಕಲಾ ಪ್ರದರ್ಶನ “ಅನ್ಸೀನ್ ಇಂಪ್ರೆಷನ್” ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಈ ಪ್ರದರ್ಶನದೊಂದಿಗೆ ಕಳೆದ 23 ವರ್ಷಗಳಿಂದ ರಾಷ್ಟ್ರೀಯ ಕಲಿಕಾ ಅಕಾಡೆಮಿಯಲ್ಲಿ (ನಾಫೆಲ್) ಚಿತ್ರಕಲೆ ಮತ್ತು ವಿನ್ಯಾಸವನ್ನು ವಿಷಯಗಳನ್ನು ಬೋಧಿಸುತ್ತಿರುವ ದೇವಿಪ್ರಿಯಾ ಅವರು ಚಿತ್ರಕಲಾ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ್ದಾರೆ. ಈ ಪ್ರದರ್ಶನಕ್ಕಾಗಿ ಅವರು ಸುಮಾರು ಒಂದು ವರ್ಷದಿಂದ ಸಿದ್ಧತೆ ನಡೆಸಿದ್ದು, ಅವರ ಶ್ರಮ ಪ್ರತಿಯೊಂದು ಚಿತ್ರಕಲಾಕೃತಿಯಲ್ಲಿ ಎದ್ದು ಕಾಣುತ್ತಿದೆ. ಡಿಜಿಟಲ್ ಮುದ್ರಣ ಅಥವಾ ಯಂತ್ರಗಳ ಬಳಕೆ ಮಾಡದೆ, ಮೋನೋ ಪ್ರಿಂಟ್ ಮತ್ತು ಪೇಂಟಿಂಗ್ ತಂತ್ರಗಳನ್ನು ಬಳಸಿ ಪ್ರದರ್ಶನಗೊಳ್ಳುತ್ತಿರುವ ಮಾಸ್ಟರ್ಪೀಸ್ಗಳನ್ನು ಸಿದ್ಧಪಡಿಸಿ ಪ್ರದರ್ಶಿಸುತ್ತಿರುವುದು ವಿಶೇಷವಾಗಿದೆ.
ಪ್ರದರ್ಶನದಲ್ಲಿ ಪ್ರಕೃತಿ, ನೀರು, ಗಾಳಿ ಮತ್ತು ವಿವಿಧ ಪ್ರಾಣಿ ಸಂಕುಲದ ವಿಶೇಷತೆಗಳನ್ನು ಆಧರಿಸಿದ ಈ ಚಿತ್ರಕಲಾಕೃತಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುತ್ತಿವೆ. ಇಂದಿನ ಚಾಟ್ಜಿಪಿಟಿ ಮತ್ತು ಕೃತಕ ಬುದ್ಧಿಮತ್ತೆಯ ಕಾಲದಲ್ಲಿಯೂ ಸಹ ಮಾನವನ ಕಲಾ ನೈಪುಣ್ಯತೆ ಮತ್ತು ಸ್ವಂತಿಕೆಯ ಮೌಲ್ಯ ಎಂದಿಗೂ ಅಳಿಯದು ಎಂಬುದನ್ನು ಈ ಕೃತಿಗಳು ನಿರೂಪಿಸಿವೆ. ಇಂತಹ ಚಿತ್ರಕಲಾ ಪ್ರದರ್ಶನವನ್ನು ರಾಜ್ಯ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾದ ಪಾ.ಸಾ ಕುಮಾರ್ ಅವರು ಉದ್ಘಾಟಿಸಿ, ಮಹಿಳಾ ಕಲಾವಿದೆಯರು ಸಮಾಜದಲ್ಲಿ ಕಲೆಯ ಮೂಲಕ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರ ಪ್ರಾಮುಖ್ಯತೆಯನ್ನು ಸಾರಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ. ಅಲ್ಲದೆ, ಹೆಸರಾಂತ ಪರಿಸರ ಸ್ನೇಹಿ ವಾಸ್ತುಶಿಲ್ಪಿ ಪ್ರೊ. ಸತ್ಯಪ್ರಕಾಶ್ ವಾರಣಾಸಿ ಕೂಡ ಅತಿಥಿಯಾಗಿ ಭಾಗವಹಿಸಿ ಚಿತ್ರಕಲಾಕೃತಿಗಳನ್ನು ಕೊಂಡಾಡಿದ್ದಾರೆ.
ಪ್ರಸಿದ್ಧ ಕಲಾವಿದ ರವಿಕುಮಾರ್ ಕಾಶಿ ಈ ಕಲಾ ಪ್ರದರ್ಶನದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ, ಮುದ್ರಣ ಕಲೆ ಹಾಗೂ ಪೇಂಟಿಂಗ್ ತಂತ್ರಗಳನ್ನು ಸಮರ್ಥವಾಗಿ ಬೆರೆಸಿ ಹೊಸ ದೃಶ್ಯ ಭಾಷೆಯನ್ನು ಇಲ್ಲಿ ಸೃಷ್ಟಿಸಲಾಗಿದೆ. ಪ್ರದರ್ಶನ ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಪ್ರಿಂಟ್ ಮೇಕಿಂಗ್ ತಂತ್ರದಲ್ಲಿ ಮಾರ್ಬಲ್ ಪ್ರಿಂಟ್ ಸೇರಿದಂತೆ ವಿವಿಧ ವಿಧಾನಗಳನ್ನು ಬಳಸಿಕೊಂಡು, ಒಂದೇ ಬಣ್ಣದ ವಿವಿಧ ಛಾಯೆಗಳನ್ನು ಅಳವಡಿಸಿಕೊಂಡು ಚಿತ್ರಕಲಾಕೃತಿಗಳನ್ನು ರೂಪಿಸಿರುವುದು ಬಹಳ ವಿಶೇಷವಾಗಿದೆ. ಪ್ರಕೃತಿಯಲ್ಲಿ ಕಾಣಸಿಗುವ ಎಲೆ ಹಾಗೂ ಹೂವುಗಳ ಆಕಾರಗಳನ್ನು ಅತ್ಯಂತ ಸುಂದರವಾಗಿ ಜೀವಂತಗೊಳಿಸಲಾಗಿದೆ. ಇಂತಹ ಸೃಜನಶೀಲ ಕಲಾಕೃತಿಗಳು ಮುಂಬರುವ ದಿನಗಳಲ್ಲಿಯೂ ನಿರಂತರವಾಗಿ ಮೂಡಿಬರಲಿ ಎಂದು ಹಾರೈಸಿದರು.
ಕೇವಲ ನಿರ್ದಿಷ್ಟ ರೀತಿಯ ಕಲೆಗಳು ಮಾತ್ರವಲ್ಲದೆ ಎಲ್ಲಾ ತರಹದ ಕಲೆಗಳೂ ಸಮಾಜಕ್ಕೆ ಅಷ್ಟೇ ಮುಖ್ಯವಾಗಿವೆ. ಚಿತ್ರಕಲಾ ಕೃತಿಗಳನ್ನು ವೀಕ್ಷಿಸುವುದು ಎಂದರೆ ಜೀವನವನ್ನು ಗ್ರಹಿಸುವ ಭಿನ್ನ ಬಗೆಗಳನ್ನು ಕಂಡುಕೊಳ್ಳುವುದಾಗಿದೆ. ಕಲೆಗಳ ಆಸ್ವಾದನೆಯು ನಮ್ಮಲ್ಲಿ ವಿಭಿನ್ನ ನೋಟಗಳು ಮತ್ತು ದೂರದೃಷ್ಟಿಯ ಅಭಿಪ್ರಾಯಗಳನ್ನು ಗೌರವಿಸುವ ಸಹಿಷ್ಣುತೆಯನ್ನು ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ದೇವಿಪ್ರಿಯಾ ಅವರು, ಸರ್ಜಾಪುರ ರಸ್ತೆಯಲ್ಲಿರುವ ಸುಮಾರು 5 ಸಾವಿರ ಅಡಿ ವಿಸ್ತೀರ್ಣದ ಸುಂದರವಾದ ‘ಧೀರ ಆರ್ಟ್’ ಸ್ಟುಡಿಯೋದಲ್ಲಿ ಸಹ ಈ ಚಿತ್ರಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ವಿಮಲ್ ನಾಥನ್ ಅವರಂತಹ ದಿಗ್ಗಜರ ಮಾರ್ಗದರ್ಶನದ ಈ ಕಲಾ ಕೃತಿಗಳ ಸಂಗ್ರಹವು ಈ ಸ್ಟುಡಿಯೋದ ವಿಶೇಷತೆಯಾಗಿದೆ. ಚಿತ್ರಕಲೆ ಸ್ವಯಂ ಅಭಿವ್ಯಕ್ತಿ ಮತ್ತು ಸೌಂದರ್ಯದ ಪ್ರತೀಕವಾಗಿದ್ದು, ಕಲಾ ಪ್ರೇಮಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಕಲಾ ಪರಿಷತ್ತಿಗೆ ಆಗಮಿಸಿ ಈ ವಿಶಿಷ್ಟ ಕಲಾ ಪ್ರದರ್ಶನವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದರು.















