ಬೆಂಗಳೂರು: ನಿಷ್ಠಾವಂತ ನಿವೃತ್ತ ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಅವರಿಗೆ ಜೀವ ಬೆದರಿಕೆ ಹಾಕಿ, ಹಿರಿಯ ರಾಜಕಾರಣಿಗಳು ಹಾಗೂ ಕೆಲ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ನಿಂದನೀಯ ಮಾತುಗಳನ್ನು ಆಡಿದ್ದಾರೆ ಎಂದು ಖಾಸಗಿ ವಿದ್ಯುನ್ಮಾನ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಜೆಡಿಎಸ್ ಜಿಬಿಎ ಕಾರ್ಯಾಧ್ಯಕ್ಷ ಟಿ.ಆರ್. ತುಳಸಿರಾಮ್ ನೇತೃತ್ವದ ನಿಯೋಗವು ಈ ದೂರು ಸಲ್ಲಿಸಿದ್ದು, ಆರೋಪಿಯನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟುವಂತೆ ಆಗ್ರಹಿಸಿದೆ.
ಈ ಕುರಿತು ಟಿ.ಆರ್ ತುಳಸಿರಾಮ್ ಮಾಧ್ಯಮಗಳ ಜೊತೆ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂಭಾಷಣೆಯಲ್ಲಿ ಒಬ್ಬ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರು ಮಾಜಿ ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಅವರನ್ನು ‘ಮುಗಿಸುತ್ತೇನೆ, ಸಾಯಿಸುತ್ತೇನೆ’ ಎಂದು ನೇರವಾಗಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಇದರ ಜೊತೆಗೆ, ಹಿರಿಯ ಪತ್ರಕರ್ತರ ವಿರುದ್ಧ ಕೀಳುಮಟ್ಟದ ಶಬ್ದಗಳನ್ನು ಬಳಸಿದ್ದಾರೆ. ದೇಶದ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ 94 ವರ್ಷಗಳ ವಯಸ್ಸಿನ ಗೌರವಕ್ಕೂ ಧಕ್ಕೆ ತರುವಂತೆ ಏಕವಚನದಲ್ಲಿ ನಿಂದಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆಯೂ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ಈ ಆಡಿಯೋ ಸಂಭಾಷಣೆಯನ್ನು ಯಾವುದೋ ಒಬ್ಬ ಪ್ರಭಾವಿ ರಾಜಕೀಯ ನಾಯಕರಿಗೆ ಕಳುಹಿಸಿಕೊಟ್ಟಿರುವ ಶಂಕೆಯಿದೆ. ಎಲ್ಲರಿಗೂ ಗೌರವ ನೀಡದೆ ಮಾತನಾಡುವ ಈ ವ್ಯಕ್ತಿ, ಆಡಿಯೋದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರನ್ನು ‘ಅಣ್ಣಾ, ಅಣ್ಣಾ’ ಎಂದು ಕರೆಯುತ್ತಾ, ನಿಮಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇನೆ, ರವಿಕಾಂತೇಗೌಡರನ್ನು ಮುಗಿಸುತ್ತೇನೆ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಆರೋಪಿಯ ಮೊಬೈಲ್ ಫೋನ್‌ಗಳು ಹಾಗೂ ಡೇಟಾವನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿ ವರದಿ ಪಡೆಯಬೇಕು ಮತ್ತು ಸಾರ್ವಜನಿಕ ಶಾಂತಿ ಕದಡುವ ಇಂತಹ ಚಾನೆಲ್ ಅನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.
ದೂರು ಸಲ್ಲಿಕೆಯ ವೇಳೆ ಹಲಸೂರು ಗೇಟ್ ಠಾಣೆ ಹಾಗೂ ಸೈಬರ್ ಕ್ರೈಮ್ ಠಾಣೆಗಳ ನಡುವೆ ಅಲೆದಾಡಿಸಿ ವಿಳಂಬ ಧೋರಣೆ ಅನುಸರಿಸಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಅವರ ಸೂಚನೆ ಮೇರೆಗೆ ಅಂತಿಮವಾಗಿ ದೂರು ಸ್ವೀಕರಿಸಲಾಗಿದ್ದು, ಶೀಘ್ರದಲ್ಲೇ ಎಫ್‌ಐಆರ್ ದಾಖಲಿಸುವ ಭರವಸೆ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
ಹೈಕೋರ್ಟ್ ವಕೀಲ ಸೋಮಶೇಖರ್ ಮಾತನಾಡಿ, ಈ ಹಿಂದೆ ಇದೇ ವ್ಯಕ್ತಿ ರವಿಕಾಂತೇಗೌಡ ಅವರ ವಿರುದ್ಧ ಮಾನಹಾನಿಕರ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಈ ಸಂಬಂಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರೂ ಸಹ ಅದನ್ನು ಮುಂದುವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ನಿಂದನೆ ಪ್ರಕರಣದಡಿ ಮೂರು ತಿಂಗಳ ಜೈಲು ಶಿಕ್ಷೆಯಾಗಿತ್ತು. ಈ ಹಳೆಯ ವೈಷಮ್ಯದ ಹಿನ್ನೆಲೆಯಲ್ಲೇ ಇದೀಗ ಬೆದರಿಕೆ ಆಡಿಯೋ ಹೊರಬಿದ್ದಿದೆ. ಆದ್ದರಿಂದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ವಿಜಯನಗರ ಘಟಕದ ಅಧ್ಯಕ್ಷ ಪ್ರಕಾಶ್, ಎಸ್‌ಸಿ ಘಟಕದ ಜಿಬಿಎ ಅಧ್ಯಕ್ಷ ವೇಲು, ಚಿಕ್ಕಪೇಟೆ ಅಧ್ಯಕ್ಷ ಕುಮಾರ್ ಮುಖಂಡರುಗಳಾದ ಶಿವ, ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.















