ಬೆಂಗಳೂರು: ವಕೀಲ ವೃತ್ತಿಯಲ್ಲಿ ಯಶಸ್ಸು ಗಳಿಸಲು ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ದೃಢ ಸಂಕಲ್ಪ ಅತ್ಯಗತ್ಯ ಎಂದು ಪದಾಂಕಿತ ಹಿರಿಯ ವಕೀಲರಾದ ವಿಘ್ನೇಶ್ವರ ಶಾಸ್ತ್ರಿ ತಿಳಿಸಿದರು.
ವಕೀಲರ ಸಾಹಿತ್ಯ ಕೂಟದಿಂದ ಆಯೋಜಿಸಲಾಗಿದ್ದ ಅನುಭವಾಮೃತ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಲಯಕ್ಕೆ ಕಕ್ಷಿದಾರರು ಮನೋವೇದನೆಯಲ್ಲಿ ಮತ್ತು ಸಂಕಷ್ಟದಲ್ಲಿ ಇರುತ್ತಾರೆ. ಮೊದಲು ಅವರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸುವ ಶಕ್ತಿ ಪ್ರತಿಯೊಬ್ಬ ವಕೀಲರಿಗೂ ಇರಬೇಕು. ಸಮಸ್ಯೆಯನ್ನು ಪೂರ್ಣವಾಗಿ ಅರ್ಥೈಸಿಕೊಂಡ ನಂತರವೇ ಸೂಕ್ತ ಕಾನೂನು ಸಲಹೆ ನೀಡಬೇಕು. ವಕೀಲ ವೃತ್ತಿಯು ಜವಾಬ್ದಾರಿಯುತ ಕೆಲಸವಾಗಿದ್ದು, ಇದಕ್ಕೆ ಕುಟುಂಬದ ಸಂಪೂರ್ಣ ಬೆಂಬಲ ಕೂಡ ಅತ್ಯಗತ್ಯವಾಗಿದೆ. ಪ್ರಕರಣಗಳ ಕಡತಗಳಲ್ಲೇ ಮುಳುಗಿರುವಾಗ ಕುಟುಂಬದವರು ನೀಡುವ ತ್ಯಾಗ ಮತ್ತು ಸಹಕಾರವೇ ವಕೀಲರ ಯಶಸ್ಸಿನ ಹಿಂದಿನ ಶಕ್ತಿ ಎಂದು ಅಭಿಪ್ರಾಯಪಟ್ಟರು.
ನಾನು ಯಾವುದೇ ಗಾಡ್‌ಫಾದರ್ ಬೆಂಬಲವಿಲ್ಲದೆ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿ ವಕೀಲ ವೃತ್ತಿ ಆರಂಭಿಸಿದೆ. ಕೇವಲ ಪ್ರಾಮಾಣಿಕತೆ, ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಯಾರು ಬೇಕಾದರೂ ವೃತ್ತಿಜೀವನದ ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ ನಾನೇ ಜೀವಂತ ಉದಾಹರಣೆ. ಅನುಭವವಿರುವಲ್ಲಿ ಅಮೃತತ್ವವಿದೆ ಹಾಗೂ ಅನುಭವವೇ ನಿಜವಾದ ಆದ್ದರಿಂದ ಹಿರಿಯ ವಕೀಲರ ಅನುಭವಗಳನ್ನು ಯುವ ವಕೀಲರು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪೊಲೀಸ್ ಸಿಬ್ಬಂದಿಯ ನೈತಿಕ ಸ್ಥೈರ್ಯ ಹೆಚ್ಚಿಸಲು ಸರ್ಕಾರ ತಂದಿದ್ದ ಯೋಜನೆಯನ್ವಯ ಟ್ರಿಬ್ಯೂನಲ್‌ನಲ್ಲಿ ಸಲ್ಲಿಸಿದ್ದ ಅರ್ಜಿಯು ತಿರಸ್ಕೃತಗೊಂಡಾಗ, ಅದನ್ನು ಸವಾಲಾಗಿ ಸ್ವೀಕರಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಹೈಕೋರ್ಟ್‌ನಲ್ಲಿ ಸುದೀರ್ಘ ವಾದ ಮಂಡಿಸಿ, ನಿಯಮಿತ ಸಮಯಬದ್ಧ ಬಡ್ತಿ ಹಾಗೂ ಇತರೆ ಸೇವಾ ಸೌಲಭ್ಯಗಳನ್ನು ಸಿಬ್ಬಂದಿಗೆ ವಿಸ್ತರಿಸುವಂತೆ ಆದೇಶ ಪಡೆಯುವಲ್ಲಿ ಯಶಸ್ವಿಯಾದೆವು. ಈ ತೀರ್ಪಿನಿಂದ ನೂರಾರು ಪೊಲೀಸ್ ನೌಕರರಿಗೆ ನ್ಯಾಯ ಸಿಕ್ಕಿದಂತಾಯಿತು. ಇದು ನನ್ನ ವೃತ್ತಿಜೀವನದಲ್ಲಿ ಅಪಾರ ತೃಪ್ತಿ ತಂದಿದ ಪ್ರಕರಣವಾಗಿದೆ ಎಂದು ಹೇಳಿದರು.
ಸಾಹಿತ್ಯ ಕೂಟವು ಸಮಾಜಮುಖಿ ಹಾಗೂ ವಕೀಲ ಸ್ನೇಹಿ ಕಾರ್ಯಗಳನ್ನು ಅತ್ಯಂತ ಅದ್ಭುತವಾಗಿ ನಿರ್ವಹಿಸುತ್ತಿದೆ. ನಿಯಮಿತವಾಗಿ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ ವಿತರಣೆ ಹಾಗೂ ಪ್ರಕಟಣೆಗಳಂತಹ ಶ್ಲಾಘನೀಯ ಕೆಲಸಗಳನ್ನು ಮಾಡುತ್ತಿದೆ. ಇಂತಹ ಕಾರ್ಯಕ್ರಮಗಳು ವಕೀಲ ಸಮುದಾಯದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಳಕಳಿಯನ್ನು ಬೆಳೆಸಲು ಪೂರಕವಾಗಿವೆ ಎಂದು ವಿಘ್ನೇಶ್ವರ ಶಾಸ್ತ್ರಿಅಭಿಪ್ರಾಯಪಟ್ಟರು.
ಈ ವೇಳೆ ಸಾಹಿತ್ಯ ಕೂಟದ ಅಧ್ಯಕ್ಷ ಮಂಜುನಾಥ ಗೌಡ, ಪ್ರಧಾನ ಕಾರ್ಯದರ್ಶಿ ಆನಂದ್ ವಿ, ಖಜಾಂಚಿ ಹರೀಶ ಜೆ ಸೇರಿದಂತೆ ಇತರ ಪದಾಧಿಕಾರಿಗಳು, ಹಿರಿಯ ಮತ್ತು ಕಿರಿಯ ವಕೀಲರು ಹಾಜರಿದ್ದರು.















