ಬೆಂಗಳೂರು: ಭಾರತದ ಆರ್ಥಿಕತೆ, ಸಾಮಾಜಿಕ ಸುಧಾರಣೆ, ಶಿಕ್ಷಣ, ರಾಜಕೀಯ ಹಾಗೂ ವಿದೇಶಾಂಗ ನೀತಿಗಳಲ್ಲಿದ್ದ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿ ಪರಿಹಾರ ಸೂಚಿಸಿದ ನಿಜವಾದ ರಾಷ್ಟ್ರ ಚಿಕಿತ್ಸಕ ಡಾ ಬಿ.ಆರ್ ಅಂಬೇಡ್ಕರ್ ಅವರಾಗಿದ್ದರು. ಅವರು ಕೇವಲ ಭಾರತ ರತ್ನ ಮಾತ್ರವಲ್ಲದೆ ನಿಜವಾದ ಅರ್ಥದಲ್ಲಿ ವಿಶ್ವರತ್ನವಾಗಿದ್ದರು ಎಂದು ಕೇರಳ ರಾಜ್ಯದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರಳೇಕರ್ ಅಭಿಪ್ರಾಯಪಟ್ಟರು.
ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.ಎಸ್.ವಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಿ.ಎಸ್ ವೀರಯ್ಯ ವಿರಚಿತ ರಾಷ್ಟ್ರಚಿಕಿತ್ಸಕ ಅಂಬೇಡ್ಕರ್ ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಬ್ಬ ವೈದ್ಯನು ದೇಹದ ಪ್ರತಿಯೊಂದು ಅಂಗಾಂಗ ಹಾಗೂ ರಕ್ತಪರಿಚಲನೆಯನ್ನು ಪರೀಕ್ಷಿಸಿ ರೋಗನಿರ್ಣಯ ಮಾಡಿ ಸೂಕ್ತ ಔಷಧ ನೀಡುವಂತೆ ಅಂಬೇಡ್ಕರ್ ಅವರು ಜಿಡ್ಡು ಗಟ್ಟಿದ್ದ ಅಂದಿನ ಇಡೀ ಭಾರತೀಯ ಸಮಾಜಕ್ಕೆ ಚಿಕಿತ್ಸೆ ನೀಡಿದರು. ಸಮಾಜದ ಸಾಮಾನ್ಯ ಜನರಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ, ಬದಲಿಗೆ ನಾಯಕರ ಚಿಂತನೆ ಮತ್ತು ನಾಯಕತ್ವದಲ್ಲೇ ಲೋಪವಿತ್ತು ಎಂಬುದನ್ನು ಅವರು ಸ್ಪಷ್ಟವಾಗಿ ಮನಗಂಡು ಕಾರ್ಯಪ್ರವೃತ್ತರಾಗಿದ್ದರು ಎಂದು ಪ್ರತಿಪಾದಿಸಿದರು.
ದೇಶದ ಅಧಿಕೃತ ಭಾಷೆ ಇಂಗ್ಲಿಷ್ ಅಥವಾ ಹಿಂದಿಯಾಗುವ ಬದಲು, ಭಾರತದ ಎಲ್ಲಾ ಭಾಷೆಗಳಿಗೆ ಆಧಾರವಾಗಿರುವ ಸಂಸ್ಕೃತ ಭಾಷೆಯೇ ರಾಷ್ಟ್ರಭಾಷೆಯಾಗಬೇಕು ಎಂಬುದು ಅಂಬೇಡ್ಕರ್ ಅವರ ದೂರದೃಷ್ಟಿಯ ಚಿಂತನೆಯಾಗಿತ್ತು. ಅಂಬೇಡ್ಕರ್ ಅವರಿಗೆ ಸದಾ ರಾಷ್ಟ್ರವೇ ಮೊದಲು, ರಾಷ್ಟ್ರವೇ ಕೊನೆ ಎಂಬುದಾಗಿತ್ತು. ಅವರಲ್ಲಿ ರಾಷ್ಟ್ರೀಯತಾ ಭಾವನೆಯೇ ಪರಮೋಚ್ಚವಾಗಿತ್ತು ಎಂದು ನುಡಿದರು.
ವೀರಯ್ಯ ಅವರ ಈ ನೂತನ ಕೃತಿಯು ಅಂಬೇಡ್ಕರ್ ಅವರ ಬಹುಮುಖಿ ವ್ಯಕ್ತಿತ್ವ ಹಾಗೂ ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ಬೆಳಕಿಗೆ ತರುತ್ತಿದೆ. ಅಂಬೇಡ್ಕರ್ ಅವರು ಹಿಂದೂ ಸಮಾಜದ ಆಂತರಿಕ ಲೋಪಗಳನ್ನು ಸರಿಪಡಿಸಲು ಶ್ರಮಿಸಿದ್ದು, ಅಂತಹ ಮಹಾನ್ ಚೇತನಕ್ಕೆ ಭಾರತ ರತ್ನ ಪ್ರಶಸ್ತಿ ನೀಡಲು ದಶಕಗಳ ಕಾಲ ಕಾಯಿಸಿದ್ದರ ಸಂದರ್ಭಗಳ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಲ್ಲದೆ, ವಿದೇಶದಿಂದ ಬ್ಯಾರಿಸ್ಟರ್ ಪದವಿ ಪಡೆದು ಬಂದ ಅತ್ಯಂತ ಸುಶಿಕ್ಷಿತ ವ್ಯಕ್ತಿಯನ್ನು ಅಂದಿನ ರಾಜಕೀಯ ವ್ಯವಸ್ಥೆಯು ಚುನಾವಣೆಯಲ್ಲಿ ಸೋಲಿಸಿದ್ದರ ಕುರಿತು ದಾಖಲೆಗಳ ಸಮೇತ ವಿವರಿಸಲಾಗಿದೆ ಎಂದು ಉಲ್ಲೇಖಿಸಿದರು.
ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಸಂವಿಧಾನವು ಕೇವಲ ಕೈಯಲ್ಲಿ ಹಿಡಿಯುವ ವಸ್ತುವಲ್ಲ, ಪ್ರತಿಯೊಬ್ಬರ ಮನಸ್ಸು ಮತ್ತು ನಡವಳಿಕೆಯಲ್ಲಿ ಇರಬೇಕಾದ ಜೀವಂತ ಆಶಯವಾಗಿದೆ ಎನ್ನುವುದನ್ನು ಕೆಲವರು ಮರೆತಂತಿದೆ. ಈ ಪಟ್ಟಭದ್ರ ಹಿತಾಸಕ್ತಿಗಳನ್ನು ಸೋಲಿಸಲು ವೀರಯ್ಯ ಅವರು ಬರೆದಿರುವ ಈ ಮೌಲ್ಯಯುತ ಪುಸ್ತಕವು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಸೇರಿದಂತೆ ಭಾರತದ ಎಲ್ಲಾ ಭಾಷೆಗಳಿಗೂ ತಲುಪುವಂತಾಗಬೇಕು. ಇದರಿಂದ ಪ್ರತಿಯೊಬ್ಬ ನಾಗರಿಕನೂ ಮುಂಬರುವ ಒಂದು ವರ್ಷದೊಳಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚರಿತ್ರೆ ಮತ್ತು ಚಿಂತನೆಗಳನ್ನು ಆಳವಾಗಿ ಓದಿ ಆರಗಿಸಿಕೊಳ್ಳುವಂತಾಗಬೇಕು ಎಂದು ರಾಜೇಂದ್ರ ವಿಶ್ವನಾಥ್ ಅರಳೇಕರ್ ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಅಪ್ರತಿಮ ಕೊಡುಗೆ ನೀಡಿದ ಅಪರೂಪದ ಮಹಾ ನಾಯಕರಾಗಿದ್ದರು. ಡಾಕ್ಟರೇಟ್ ಪದವಿ ಪಡೆದ ದೇಶದ ಮೊಟ್ಟಮೊದಲ ಭಾರತೀಯರಾಗಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಉನ್ನತ ಶಿಕ್ಷಣ ಪೂರೈಸಿದ ಅವರು, 32 ಪ್ರಮುಖ ಪದವಿಗಳನ್ನು ಗಳಿಸುವ ಮೂಲಕ ಜ್ಞಾನದ ಭಂಡಾರವಾಗಿದ್ದರು ಎಂದು ತಿಳಿಸಿದರು.
ಸಮಾನತೆ, ಅಸ್ಪೃಶ್ಯತಾ ನಿವಾರಣೆ, ಸ್ತ್ರೀ ಸಮಾನತೆ ಹಾಗೂ ಹಿಂದೂ ಕೋಡ್ ಬಿಲ್ ವಿಷಯಗಳಲ್ಲಿ ಅಂಬೇಡ್ಕರ್ ಅವರು ಸ್ಪಷ್ಟ ಹಾಗೂ ಪ್ರಖರ ನಿಲುವುಗಳನ್ನು ಹೊಂದಿದ್ದರು. ಅವರ ಸಾಹಿತ್ಯ ಮತ್ತು ಚಿಂತನೆಗಳಲ್ಲಿ ಪ್ರತಿಯೊಂದು ಸಾಮಾಜಿಕ ಪ್ರಶ್ನೆಗೂ ಸೂಕ್ತ ಉತ್ತರವಿತ್ತು. ಸಂವಿಧಾನ ರಚನೆಯ ಜೊತೆಗೆ ಮಹಿಳೆಯರಿಗೆ ಹೆರಿಗೆಯ ನಂತರ ಪ್ರಸೂತಿ ರಜೆ ಕಡ್ಡಾಯವಾಗಿ ಸಿಗಬೇಕು ಎಂದು ಆಗಿನ ಕಾಲದಲ್ಲಿಯೇ ಆಗ್ರಹಿಸಿದ್ದರು. 1928 ರಲ್ಲಿಯೇ ದೇಶದಲ್ಲಿ ಕುಟುಂಬ ಯೋಜನೆಯ ಅಗತ್ಯತೆಯನ್ನು ಪ್ರತಿಪಾದಿಸಿದ್ದರು. ಇದರ ಜೊತೆಗೆ ಕಾರ್ಮಿಕರ ಹಿತರಕ್ಷಣೆಗಾಗಿ ಇಎಸ್ಐ ಮತ್ತು ಭವಿಷ್ಯನಿಧಿ ಯೋಜನೆಗಳನ್ನು ಪರಿಚಯಿಸಲು ಶ್ರಮಿಸಿದ ಮಹಾನ್ ಸಾಧಕರಾಗಿದ್ದಾರೆ ಎಂದು ಬಣ್ಣಿಸಿದರು.
ದೇಶದ ಆರ್ಥಿಕ ಹಾಗೂ ಮೂಲಸೌಕರ್ಯ ವಲಯದಲ್ಲೂ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದಾಗಿದೆ. ಸೆಂಟ್ರಲ್ ವಾಟರ್ ಕಮಿಷನ್ ಮತ್ತು ಕೇಂದ್ರೀಯ ವಿದ್ಯುತ್ ಮಂಡಳಿಯ ಸ್ಥಾಪನೆ, ದಾಮೋದರ್ ಕಣಿವೆ ಯೋಜನೆ, ಹೀರಾನಂದ್ ಯೋಜನೆ ಹಾಗೂ ಹಲವು ಜಲವಿದ್ಯುತ್ ಯೋಜನೆಗಳ ಹಿಂದೆಯೂ ಅವರ ದೂರದೃಷ್ಟಿಯ ಕೊಡುಗೆಯಿದೆ. 1935 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಯಾಗಲು ಅಂಬೇಡ್ಕರ್ ಅವರ ಪ್ರೌಢ ಪ್ರಬಂಧವೇ ಅಡಿಪಾಯವಾಗಿತ್ತು. ದೇಶದ ಸುಸೂತ್ರ ಆಡಳಿತಕ್ಕಾಗಿ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರದಂತಹ ಬೃಹತ್ ರಾಜ್ಯಗಳನ್ನು ವಿಭಜಿಸಿ ಸಣ್ಣ ರಾಜ್ಯಗಳನ್ನು ರಚಿಸಬೇಕೆಂದು ಅವರು ಅಂದೇ ನೀಡಿದ್ದ ಪ್ರಸ್ತಾವನೆಯನ್ನು ದೇಶವು ದಶಕಗಳ ನಂತರ ಕಾರ್ಯಗತಗೊಳಿಸಿತು ಎಂದು ಹೇಳಿದರು.
ಡಿ.ಎಸ್. ವೀರಯ್ಯ ಅವರು ತಮ್ಮ ಪುಸ್ತಕದಲ್ಲಿ ಅಂಬೇಡ್ಕರ್ ಅವರ 32 ಪದವಿಗಳು ಹಾಗೂ ಅವರ ವೈವಿಧ್ಯಮಯ ಸಾಧನೆಗಳನ್ನು ಸವಿಸ್ತಾರವಾಗಿ ದಾಖಲಿಸಿದ್ದು, ಈ ಕೃತಿಯನ್ನು ಪ್ರತಿಯೊಬ್ಬರೂ ಕೊಂಡು ಓದಬೇಕಾದ ಅಗತ್ಯವಿದೆ ಎಂದು ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.
ಈ ವೇಳೆ ಹಲವು ದಲಿತ ನಾಯಕರು, ಸಮಾಜ ಸುಧಾರಕರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಂಥ ರಚನೆಕಾರರು, ಡಿ.ಎಸ್.ವಿ ಫೌಂಡೇಶನ್ ಮುಖ್ಯಸ್ಥರಾದ ಡಿ.ಎಸ್ ವೀರಯ್ಯ, ಪ್ರಸಿದ್ಧ ವಿದ್ವಾಂಸರು, ಸಂಶೋಧಕರಾದ ಪ್ರೊ. ಮಲ್ಲೆಪುರಂ ಜಿ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.















