ದೀಕ್ಷಿತರ ಕೃತಿಗಳಲ್ಲಿ ಆಧ್ಯಾತ್ಮಿಕ ಶಕ್ತಿ ಅಡಗಿದೆ: ಡಾ. ಆರ್.ಕೆ. ಪದ್ಮನಾಭ

WhatsApp
Telegram
Facebook
Twitter
LinkedIn

ಬೆಂಗಳೂರು: ಕರ್ನಾಟಕ ಸಂಗೀತದ ಮಹಾನ್ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳು ಸಂಗೀತದ ಜತೆಗೆ ಆಧ್ಯಾತ್ಮಿಕ ಶಕ್ತಿಯನ್ನೂ ಒಳಗೊಂಡಿವೆ ಎಂದು ಗಾನಕಲಾಭೂಷಣ ವಿದ್ವಾನ್ ಡಾ ಆರ್.ಕೆ ಪದ್ಮನಾಭ ಹೇಳಿದರು.

ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಗುರುಗುಹಾಮೃತ’ ಸಂಗೀತ ನಾಟಕದ ಪ್ರದರ್ಶನ ಹಾಗೂ ‘ಮುತ್ತುಸ್ವಾಮಿ ಕೃತಿ ಗಾನ ಗಂಗಾ’ ಲೋಕಾರ್ಪಣೆ ಕಾರ್ಯಕ್ರಮದ ನಂತರ ಮಾದ್ಯಮಗಳ ಜೊತೆ ಮಾತನಾಡಿದ ಅವರು, ದೀಕ್ಷಿತರ ಬಗ್ಗೆ ತನಗೆ ಅಪಾರ ಗೌರವ ಮತ್ತು ಪ್ರೀತಿ ಇದೆ. ಪ್ರತಿದಿನ ಅವರ ಒಂದೊಂದು ಕೃತಿಯನ್ನು ಹಾಡಿಕೊಳ್ಳುವಾಗಲೂ ವಿಶಿಷ್ಟ ಅನುಭವವಾಗುತ್ತದೆ. ತ್ಯಾಗರಾಜರನ್ನು ಹಿಮಾಲಯ ಪರ್ವತಕ್ಕೆ ಹೋಲಿಸಿದರೆ, ದೀಕ್ಷಿತರನ್ನು ಬೃಹತ್ ಗಂಗಾ ನದಿಗೆ ಹೋಲಿಸಬಹುದು ಎಂದರು.

ದೀಕ್ಷಿತರ 200 ಕೃತಿಗಳನ್ನು ಸಂಗ್ರಹಿಸಿ, ಸಾಹಿತ್ಯ, ಪದಪದಾರ್ಥ, ಭಾವಾರ್ಥ ಹಾಗೂ ಸಂಗೀತ ಸ್ವರಲಿಪಿಯೊಂದಿಗೆ ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯಕ್ಕೆ ಒಂದು ವರ್ಷಕ್ಕೂ ಹೆಚ್ಚು ಕಾಲ ಶ್ರಮಿಸಲಾಗಿದೆ. ಈಗಾಗಲೇ 100 ಕೃತಿಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದ್ದು, ಇನ್ನೂ 100 ಕೃತಿಗಳನ್ನು ಕೈಬರಹದಲ್ಲಿ ಸಿದ್ಧಪಡಿಸಲಾಗಿದೆ. ‘ಮುತ್ತುಸ್ವಾಮಿ ಕೃತಿ ಗಾನ ಗಂಗಾ’ ದಲ್ಲಿ ದೀಕ್ಷಿತರ ಎಲ್ಲಾ ಕೃತಿಗಳು ಒಳಗೊಂಡಿವೆ. ಸಂಗೀತಾಸಕ್ತರು ಈ ಕೃತಿಯನ್ನು ಕೊಂಡು ಮನೆಯಲ್ಲಿ ಇಟ್ಟುಕೊಳ್ಳಬೇಕು. ಪುಸ್ತಕದ ಮೂಲಕ ದೀಕ್ಷಿತರ ಪವಿತ್ರ ಶಕ್ತಿ ನಮ್ಮಲ್ಲಿದ್ದಂತೆ ಆಗುತ್ತದೆ ಎಂದು ಡಾ ಆರ್.ಕೆ ಪದ್ಮನಾಭ ಹೇಳಿದರು.

ಸಂಗೀತಗಾರ್ತಿ ಹಾಗೂ ನೃತ್ಯ ಕಲಾವಿದೆಯಾದ ಸರ್ವಮಂಗಳ ಅವರು ಮಾತನಾಡಿ, ಸಭಾಂಗಣ ಸಂಪೂರ್ಣ ಭರ್ತಿಯಾಗಿದ್ದರಿಂದ ಆರಂಭದಲ್ಲಿ ಹೊರಗಡೆ ಕುಳಿತು ಯೂಟ್ಯೂಬ್ ಮೂಲಕವೇ ಕಾರ್ಯಕ್ರಮ ವೀಕ್ಷಿಸಬೇಕಾಯಿತು. ಕಾರ್ಯಕ್ರಮದ ಕೊನೆಯ ಕಮಲಾಂಬಿಕಾ ಕೃತಿಯ ಬಿಡುಗಡೆ ವೇಳೆಗೆ ಒಳಬರಲು ಅವಕಾಶ ಸಿಕ್ಕಿತು. ನಾನು ಪ್ರಸಿದ್ಧ ವಯಲಿನ್ ವಾದಕ ಎಂ.ಎಸ್. ಗೋವಿಂದಸ್ವಾಮಿ ಅವರ ಪುತ್ರಿಯಾಗಿದ್ದು, ನಮ್ಮ ತಂದೆಯವರಿಗೂ ಹಾಗೂ ಆರ್.ಕೆ. ಪದ್ಮನಾಭ ಅವರಿಗೂ ಸುಮಾರು 60 ವರ್ಷಗಳ ಸುದೀರ್ಘ ಸಂಗೀತ ಬಾಂಧವ್ಯವಿತ್ತು ಎಂದು ತಿಳಿಸಿದರು.

ಶಿಷ್ಯೆಯಾದ ಜಯಂತಿ ದ್ವಾರಕಾನಾಥ್ ಅವರು ಮಾತನಾಡಿ, ಕಳೆದ 20 ವರ್ಷಗಳಿಂದ ಆರ್.ಕೆ.ಪಿ. ಅವರ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದೇನೆ, ನಾವು ಇಂತಹ ಮಹಾನ್ ಗುರುಗಳ ಕಾಲದಲ್ಲೇ ಜನ್ಮ ತಾಳಿರುವುದು ನಮ್ಮ ಅನಂತ ಜನ್ಮಗಳ ಸಾಧನೆಯ ಫಲವಾಗಿದೆ. ಮುಂದಿನ ಜನ್ಮದಲ್ಲೂ ಅವರ ಶಿಷ್ಯೆಯಾಗಿಯೇ ಹುಟ್ಟಲು ಬಯಸುತ್ತೇನೆ ಎಂದು ನುಡಿದರು.

ಅಭಿಮಾನಿ ವಸುಂಧರಾ ಅವರು ಮಾತನಾಡಿ, ಆರ್.ಕೆ.ಪಿ. ಅವರ ಕಾರ್ಯಕ್ರಮಗಳನ್ನು ಕೇಳುವಾಗ ಸಂಸಾರದ ಸಕಲ ತಾಪತ್ರಯಗಳನ್ನು ಮರೆತು ಬೇರೆಯದೇ ಸಂಗೀತ ಸಾಮ್ರಾಜ್ಯದಲ್ಲಿ ತೇಲುತ್ತಿರುವ ಅನುಭವವಾಗುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಸಾಕ್ಷಾತ್ ಮುದ್ದುಸ್ವಾಮಿ ದೀಕ್ಷಿತರೇ ಅವರಲ್ಲಿ ಆವಿರ್ಭವಿಸಿದ್ದಾರೋ ಎನ್ನುವಂತೆ ರೋಮಾಂಚನವಾಯಿತು ಎಂದು ಬಣ್ಣಿಸಿದರು.

ಪ್ರೇಕ್ಷಕರಾದ ರಾಮಚಂದ್ರ ಅವರು ಮಾತನಾಡಿ, ರುದ್ರಪಟ್ಟಣದಲ್ಲಿ ನಡೆಯುವ ವಾರ್ಷಿಕ ಸಂಗೀತೋತ್ಸವ ಸೇರಿದಂತೆ ಹಲವು ವರ್ಷಗಳಿಂದ ಅವರ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸಿದ್ದೇನೆ. ನಾನು ಸಂಗೀತದ ಆಳವಾದ ಜ್ಞಾನವಿಲ್ಲದಿದ್ದರೂ ಅವರ ಗಾನಕ್ಕೆ ನಾವು ಮರುಳಾಗಿದ್ದೇನೆ. ಡಾ ಆರ್.ಕೆ ಪದ್ಮನಾಭ ಅವರು ಶ್ರೇಷ್ಠ ಗಾಯಕರಷ್ಟೇ ಅಲ್ಲದೆ, ವೇದಿಕೆಯ ಮೇಲೆ ಅದ್ಭುತ ಅಭಿನಯದ ಮೂಲಕವೂ ರಂಜಿಸುವ ದಂತಕಥೆಯಾಗಿದ್ದಾರೆ ಎಂದು ಶ್ಲಾಘಿಸಿದರು.

ಈ ವೇಳೆ ಮುತ್ತುಸ್ವಾಮಿ ದೀಕ್ಷಿತರ ಜೀವನಾಧಾರಿತ ‘ಗುರುಗುಹಾಮೃತ’ ಸಂಗೀತ ನಾಟಕವನ್ನು ಡಾ. ಆರ್.ಕೆ. ಪದ್ಮನಾಭ ಅವರ ಪರಿಕಲ್ಪನೆ, ನಿರ್ದೇಶನ, ಸಂಗೀತ ಮತ್ತು ನಿರ್ಮಾಣದಲ್ಲಿ ಪ್ರದರ್ಶಿಸಲಾಯಿತು.

 

 

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon