ಬೆಂಗಳೂರು: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಸೇರಿದಂತೆ ಉತ್ತರ ಕರ್ನಾಟಕದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳೇ ಬೆಂಬಲ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಇಲಾಖೆ ವಿಫಲವಾಗಿದೆ ಎಂದು ಭೀಮರಾಜ ಸೇನೆ ಆರೋಪಿಸಿದೆ.
ಗಾಂಧಿನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭೀಮರಾಜ ಸೇನೆಯ ರಾಜ್ಯಾಧ್ಯಕ್ಷ ಶಿವು ನಾಟೀಕಾರ, ಸಿಂದಗಿ ತಾಲೂಕಿನ ಹಲವು ಗ್ರಾಮಗಳ ಕಿರಾಣಿ ಅಂಗಡಿಗಳು ಹಾಗೂ ಡಾಬಾಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಧಿಕೃತ ಮದ್ಯದಂಗಡಿಗಳಿಂದ ಖರೀದಿಸಿದ ಮದ್ಯವನ್ನು ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತವಾಗಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಯುವಕರು ಹಾಗೂ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಅಪಘಾತಗಳು ಮತ್ತು ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ದೂರಿದರು.
ಸಿಂದಗಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಬಕಾರಿ ಸಿಪಿಐ ಶಿವಕುಮಾರ್ ಹೂಗಾರ ಅವರು ಕೆಲವು ಡಾಬಾಗಳ ಮಾಲೀಕರಿಂದ ಮಾಸಿಕ ಹಣ ನಿಗದಿಪಡಿಸಿಕೊಂಡಿದ್ದಾರೆ. ಹಣ ಪಾವತಿಯಲ್ಲಿ ವಿಳಂಬವಾದರೆ ದಾಳಿ ನಡೆಸಲಾಗುತ್ತಿದೆ ಎಂಬ ಆರೋಪಗಳಿವೆ. ಈ ಕುರಿತು ನಮ್ಮ ಬಳಿ ವಿಡಿಯೊ ಹಾಗೂ ಸಾಕ್ಷ್ಯಗಳಿದ್ದು, ಆರೋಪಗಳ ಮೇಲಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು. ದಾಳಿ ವೇಳೆ ವಶಪಡಿಸಿಕೊಳ್ಳುವ ಮದ್ಯದ ಪ್ರಮಾಣವನ್ನು ಎಫ್ಐಆರ್ನಲ್ಲಿ ಸರಿಯಾಗಿ ದಾಖಲಿಸಿ, ಪಂಚನಾಮೆ ಸೇರಿದಂತೆ ಕಾನೂನು ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಪಾಲಿಸಬೇಕು. ಅಬಕಾರಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಈ ಸಂಬಂಧ ಅಬಕಾರಿ ಉಪ ಆಯುಕ್ತರು, ರಾಜ್ಯ ಅಬಕಾರಿ ಆಯುಕ್ತರು ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಭೀಮರಾಜ ಸೇನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಬಿಜಾಪುರ ಅವರು ಮಾತನಾಡಿ, ಸಿಪಿಐ ಹೂಗಾರ ಅವರು ಸ್ಥಳೀಯ ಶಾಸಕರ ಸೂಚನೆಯಂತೆ ಕೆಲ ಅಂಗಡಿಗಳ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದಾರೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗದೆ ಕಾನೂನುಬದ್ಧವಾಗಿ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸದರಿ ಸಿಪಿಐ ಅವರ ಮೇಲೆ ಮೇಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತುಗೊಳಿಸದಿದ್ದರೆ ವಿಜಯಪುರ ಜಿಲ್ಲಾದ್ಯಂತ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸಿಂದಗಿ ತಾಲೂಕು ಸಂಚಾಲಕ ಶಿವು ಬಡಿಗೇರ್ ಉಪಸ್ಥಿತರಿದ್ದರು.















