ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕೇಂದ್ರ ಸಂಘದ ಆಶ್ರಯದಲ್ಲಿ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಜ್ಯ ಮಟ್ಟದ ಸಮ್ಮೇಳನ ಮತ್ತು ಸಾಧಕ ಶಿಕ್ಷಕರ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು, ನಿಕಟಪೂರ್ವ ಹಿರಿಯ ಶಿಕ್ಷಕರು ಮತ್ತು ಸೇವೆಯಲ್ಲಿರುವ ಬೋಧಕರು ಈ ಸಮಾವೇಶದಲ್ಲಿ ಪಾಲ್ಗೊಂಡು ಶೈಕ್ಷಣಿಕ ವಿಕಾಸ ಹಾಗೂ ಶಿಕ್ಷಕರ ಕ್ಷೇಮಾಭಿವೃದ್ಧಿಯ ಕುರಿತು ಚರ್ಚಿಸಿದರು.
ಸಮ್ಮೇಳನದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಖಾದರ್ ಸಾಬ್ ಹುಲ್ಲೂರ್ ಅವರು, ಸಂಘವು ಕೇವಲ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮಾತ್ರ ಸೀಮಿತವಾಗಿರದೆ, ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಗುಣಮಟ್ಟದ ಬೋಧನೆಗೆ ಮಾರ್ಗದರ್ಶನ ನೀಡುವ ಕಾಯಕದಲ್ಲಿ ನಿರಂತರವಾಗಿ ತೊಡಗಿದೆ. ಸಂಘದ ಸತತ ಪ್ರಯತ್ನದ ಫಲವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಮಾಸಿಕ 3 ಸಾವಿರ ರೂ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಿಗೆ 5 ಸಾವಿರ ರೂ ಗೌರವಧನವನ್ನು ಸರ್ಕಾರ ಮಂಜೂರು ಮಾಡಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಘದ ಮುಖಂಡರ ಸಹಕಾರದಿಂದ ಈ ಸೌಲಭ್ಯ ದೊರೆತಿದ್ದು, ಮುಂಬರುವ ದಿನಗಳಲ್ಲಿ ಕಲಬುರಗಿ, ಬೆಳಗಾವಿ ಹಾಗೂ ದಾವಣಗೆರೆ ವಿಭಾಗ ಮಟ್ಟದಲ್ಲೂ ಸಮ್ಮೇಳನಗಳನ್ನು ಆಯೋಜಿಸಲಾಗುವುದು. ಸಂಘದ ಚಟುವಟಿಕೆಗಳಿಗೆ ಸೂಕ್ತ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಂಗಳೂರು ಉತ್ತರ ವಲಯ-4ರ ರಾಜಾನುಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯ ಶಿಕ್ಷಕಿ ಹೆಚ್.ಪಿ. ಜಬೀನ್ ತಾಜ್ ಅವರು, ಸುಮಾರು 35 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗಳನ್ನು ಪಡೆದಿದ್ದೆ. ಪ್ರಸ್ತುತ ಕೇಂದ್ರ ಸಂಘದಿಂದ ದೊರೆತ ಈ ಗೌರವವು ನನ್ನ ವೃತ್ತಿಜೀವನದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಬಾಕಿ ಇರುವ 4 ವರ್ಷಗಳ ಕಾಲವೂ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಏಳಿಗೆಗಾಗಿ ಕಾಯಾವಾಚಾಮನಸಾ ಶ್ರಮಿಸುತ್ತೇನೆ. ಈ ಸಾಧನೆಗೆ ಕುಟುಂಬದವರು, ಸಹೋದ್ಯೋಗಿಗಳು ಹಾಗೂ ಸ್ನೇಹಿತರ ಪ್ರೋತ್ಸಾಹವೇ ಮೂಲಪ್ರೇರಣೆ ಎಂದು ಸಂತಸ ಹಂಚಿಕೊಂಡರು.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಶಾಲೆಯ ಶಿಕ್ಷಕಿ ಹಾಗೂ ಸಾಹಿತಿ ಸುಮಾ ಭಜರಂಗಿ ಅವರು ಪ್ರಶಸ್ತಿ ಪುರಸ್ಕಾರ ಸ್ವೀಕರಿಸಿ ಮಾತಾಡಿ. ಶಾಲೆಯಲ್ಲಿ ಕೈಗೊಂಡ ಪ್ರಗತಿಪರ ಶೈಕ್ಷಣಿಕ ಕಾರ್ಯಗಳು ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಅಧ್ಯಕ್ಷರಾದ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ನನ್ನ ಈ ಸಾಧನೆಯ ಪಯಣಕ್ಕೆ ಸಹೋದರರಾದ ಶಿವಮಲ್ಲ ಹಾಗೂ ಮಾದೇಗೌಡ ಅವರ ಪ್ರೋತ್ಸಾಹ ದೊಡ್ಡದಾಗಿದ್ದು, ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಯಂತೆ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ 75 ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ಪುರಸ್ಕೃತ ಶಿಕ್ಷಕರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.















