ಬೆಂಗಳೂರು: ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಸ್ವಯಂ ಶಿಸ್ತು ಅತ್ಯಗತ್ಯ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಡೈರೆಕ್ಟರ್ ಜನರಲ್ ಮತ್ತು ಡಿಎಸ್ಐಆರ್ ಕಾರ್ಯದರ್ಶಿ ಡಾ. ಎನ್. ಕಲೈಸೆಲ್ವಿ ಅಭಿಪ್ರಾಯಪಟ್ಟರು.
ಜಯನಗರದ ಆರ್ವಿ ಶಿಕ್ಷಕರ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಕರ್ನಾಟಕ ಮತ್ತು ಸಿರಾಡ್ ವಾಯ್ಸ್ ಆಫ್ ಬೆಂಗಳೂರು ಅಕಾಡೆಮಿಷಿಯನ್ಸ್ ಬ್ಯಾನರ್ ಸಂಯೋಜನೆಯ ರೋಲ್ ಆಫ್ ಅಕಾಡೆಮಿಯ ಇನ್ ಎಂಪವರಿಂಗ್ ಇಂಡಿಯಾ ಥ್ರೂ ರಿಸರ್ಚ್ ಅಂಡ್ ಇನ್ನೋವಷನ್: ದಿ ವಿಷನ್ ಆಫ್ ವಿಕಸಿತ ಭಾರತ್ ಎಂಬ ಒಂದು ದಿನದ ವಿಶೇಷ ಶೈಕ್ಷಿಕ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು 2047ರ ದೂರದೃಷ್ಟಿಯ ವಿಕಸಿತ ಭಾರತ ಸಾಧಿಸಲು ಸರ್ವರಿಂದಲೂ ಕೊಡುಗೆ ಅಗತ್ಯವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ಸಮಾಜ ಮತ್ತು ರಾಷ್ಟ್ರಕ್ಕೆ ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಶಿಸ್ತನ್ನು ಬೆಳೆಸಿಕೊಳ್ಳಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಫೋನ್ ಗಳು ಜನರ ನಡುವೆ ಪ್ರಮುಖ ತಡೆಗೋಡೆಯಾಗಿ ಮಾರ್ಪಟ್ಟಿವೆ. ಇವುಗಳನ್ನು ಜನರು ಅರ್ಥಪೂರ್ಣವಾಗಿ ಮಾನವ ಸಂವಹನವನ್ನು ಕಾಪಾಡಿಕೊಳ್ಳಲು ಮಾತ್ರ ಬಳಸಬೇಕು. ತಮ್ಮ ಗುರಿಗಳ ಮೇಲೆ ಹೆಚ್ಚು ಕೇಂದ್ರೀಕರಿಸಬೇಕು. ಇನ್ನು ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪಾತ್ರದ ಕುರಿತ ಈ ಚರ್ಚಾ ಸಂವಾದವು ಶಿಕ್ಷಣ ತಜ್ಞರು ಮತ್ತು ಶಿಕ್ಷಣ ವೃತ್ತಿಪರರನ್ನು ಒಟ್ಟುಗೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ನ ಖಜಾಂಚಿ ಪಿ.ಎಸ್.ವೆಂಕಟೇಶ್ ಬಾಬು ಮಾತನಾಡಿ, ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ ಕರ್ನಾಟಕ ಮತ್ತು ಸಿರಾಡ್ ಜೊತೆ ಸೇರಿ ವಾಯ್ಸ್ ಆಫ್ ಬೆಂಗಳೂರು ಅಕಾಡೆಮಿಷಿಯನ್ಸ್ ನ ಬ್ಯಾನರ್ ನಲ್ಲಿ ನಡೆಯುತ್ತಿರುವ ಇಂತಹ ಕಾರ್ಯಗಾರ ಮಹತ್ವದ್ದಾಗಿದೆ. 2047ರ ವೇಳೆಗೆ ಉತ್ತಮ ಭಾರತವನ್ನು ನಿರ್ಮಿಸಬೇಕಾದರೆ ಪ್ರತಿಯೊಬ್ಬರೂ ಕೂಡ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ರಕ್ಷಣೆ, ಕೃಷಿ, ಉದ್ಯೋಗ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಸಮಗ್ರ ಪ್ರಗತಿ ಸಾಧಿಸುವ ಕಡೆಗೆ ಚಿಂತಿಸಬೇಕು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ ಎನ್. ತಿಪ್ಪೇಸ್ವಾಮಿ ಮಾತನಾಡಿ, ದೂರದೃಷ್ಟಿಯ ವಿಕಸಿತ ಭಾರತ ಹೊಂದಲು ಸರ್ವರಿಂದಲೂ ಕೊಡುಗೆ ಅಗತ್ಯವಿದೆ ಎಂದರು ತಿಳಿಸಿದರು. ಎಬಿಆರ್ಎಸ್ಎಂ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗುಂತ ಲಕ್ಷ್ಮಣ್ ಜೀ ಮಾತನಾಡಿ, ಪ್ರಚಲಿತ ಸಂಶೋಧನೆ ಹಾಗೂ ಆವಿಷ್ಕಾರಗಳ ಮೂಲಕ ಭಾರತವನ್ನು ಸಶಕ್ತಗೊಳಿಸುವಲ್ಲಿ ಶಿಕ್ಷಣದ ನಾವೀನ್ಯತೆಗಳು ಅಗತ್ಯವಾಗಿದೆ. ದೇಶದ ಪ್ರಗತಿ ಮತ್ತು ಭಾರತವನ್ನು ಸಬಲೀಕರಣಗೊಳಿಸುವಲ್ಲಿ ಶೈಕ್ಷಣಿಕ ವಲಯದ ಪಾತ್ರ ಮಹತ್ವದ್ದಾಗಿದೆ. ವಿಕಸಿತ ಭಾರತದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಹಲವು ಶಿಕ್ಷಣ ತಜ್ಞರು ಮಾತನಾಡಿದರು. ಪ್ರಮುಖವಾಗಿ ಸಂಶೋಧನಾ ಫಲಿತಾಂಶಗಳು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರಾಯೋಗಿಕ ಮಹತ್ವವಾದ ಚರ್ಚೆಗಳು ಕಂಡುಬಂದಿದ್ದು ವಿಶೇಷವಾಗಿತ್ತು.
ಎಬಿಆರ್ಎಸ್ಎಂ ಕರ್ನಾಟಕ ರಾಜ್ಯ ಸಂಯೋಜಕರಾದ ಡಾ.ಶಿವಪೂಜಿ ಕೋಟಿ, ಡಾ. ದೇವರಾಜಪ್ಪ ಎಸ್, ಸಹ ಸಂಚಾಲಕರುಗಳಾದ ಡಾ. ನಿರ್ಮಲಾ ಕೆ, ಶೈಲಜಾ ಸಿ.ವಿ, ಡಾ.ಶಿವಮೂರ್ತಿ, ಪ್ರೊ. ರಾಜಶೇಖರ್ ಹೊಸಳ್ಳಿ, ಡಾ. ಮಾಲಿನಿ, ಡಾ. ಪೂರ್ಣಿಮಾ ಪಟ್ಟಣಶೆಟ್ಟಿ, ಡಾ. ಲೀಲಾವತಿ, ಅಭಿಷೇಕ್ ಕುಬ್ಸದ್, ಡಾ. ಅಶೋಕ್ ನಾಯಕ್, ಪ್ರೊ. ಎಲ್.ಎಚ್. ಶಿವಶಂಕರಪ್ಪ, ಡಾ. ರಾಧಾಕೃಷ್ಣ ಜಿ.ಎಸ್, ಡಾ. ಸತ್ಯಮೂರ್ತಿ ಗೂಗಿ, ಡಾ. ಈಶ್ವರ್ ಸಿರಿಗೇರಿ ಸೇರಿದಂತೆ ವಿವಿಧ ವಿವಿಗಳ ಕುಲಪತಿಗಳು, ಪ್ರಾಧ್ಯಾಪಕರು, ಸಂಶೋಧಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಮಾರ್ಗದರ್ಶಕರು, ಉಪನ್ಯಾಸಕರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.















