ಬೆಂಗಳೂರು: ಬೋಧಕೇತರ ನೌಕರರ ಸೇವಾ ಭದ್ರತೆ, ನ್ಯಾಯಸಮ್ಮತ ಹಕ್ಕುಗಳು ಹಾಗೂ ಗೌರವಯುತ ಸ್ಥಾನಮಾನವನ್ನು ಕಾಪಾಡಲು ಸಂಘಟಿತವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರು, ವಾಹನ ಚಾಲಕರು ಹಾಗೂ ಗ್ರೂಪ್ ಡಿ ನೌಕರರ ಸಂಘದ ರಾಜ್ಯಾಧ್ಯಕ್ಷ ನವೀನ್ ಎಸ್.ಆರ್. ತಿಳಿಸಿದರು.
ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರು, ವಾಹನ ಚಾಲಕರು ಹಾಗೂ ಗ್ರೂಪ್ ಡಿ ನೌಕರರ ಸಂಘದ ವತಿಯಿಂದ ನಗರದ ಕೆ.ಜಿ. ರಸ್ತೆಯ ಶಿಕ್ಷಕರ ಸದನದಲ್ಲಿ ಶನಿವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಹುದ್ದೆಗಳು ಹಾಗೂ ಕರ್ತವ್ಯಗಳು ಬೇರೆಬೇರೆಯಾಗಿದ್ದರೂ ಸದಸ್ಯರೆಲ್ಲರೂ ಸಮಾನರು. ವ್ಯಕ್ತಿಗಿಂತ ಸಂಘ ದೊಡ್ಡದು. ವೈಯಕ್ತಿಕ ಹಿತಾಸಕ್ತಿಗಿಂತ ಸಾಮೂಹಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು. ಆದ್ದರಿಂದ ಸಂಘದ ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಮತ್ತು ನಿಯಮಬದ್ಧತೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಸಭೆಯಲ್ಲಿ ಸಂಘದ ಸಮಗ್ರ ಬೈಲಾ ತಿದ್ದುಪಡಿಗೆ ಅನುಮೋದನೆ ನೀಡಲಾಗಿದ್ದು, ಸೆ.26ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಸಂಘದ ಹೆಸರನ್ನು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘ ಎಂದು ಬದಲಾಯಿಸಲಾಗಿದೆ.ನೌಕರರ ಬಡ್ತಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವುದು, ಪ್ರತಿ ವರ್ಷ ಫೆಬ್ರವರಿ 28ರೊಳಗೆ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸುವುದು, ವರ್ಗಾವಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಖಾಲಿ ಹುದ್ದೆಗಳ ಭರ್ತಿ ಹಾಗೂ ಸೇವಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಸಭೆಯ ನಿರ್ಣಯಗಳನ್ನು 14 ದಿನಗಳೊಳಗೆ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲಾಗುವುದು. ನವೆಂಬರ್‌ನಲ್ಲಿ ರಾಜ್ಯಮಟ್ಟದ ಬೋಧಕೇತರ ನೌಕರರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ. ಪ್ರತಿಭಾವಂತ ನೌಕರರ ಮಕ್ಕಳಿಗೆ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಹಾಗೂ ಉತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಗೌರವ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಸಂಘದ ಹೊಸ ಲಾಂಛನ ವಿನ್ಯಾಸಗೊಳಿಸುವವರಿಗೆ 5,000 ರೂ. ನಗದು ಬಹುಮಾನ ಘೋಷಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಆದ್ಯಪ್ಪ ಬಾಗಲಿ ಮಾತನಾಡಿ, ಆನ್‌ಲೈನ್ ಚುನಾವಣೆ ಮೂಲಕ ರಾಜ್ಯದ ಬೋಧಕೇತರ ನೌಕರರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸಲು ಸಾಧ್ಯವಾಗಿದೆ. 2025ರ ನವೆಂಬರ್ 15ರಂದು ನಡೆದ ಹಿಂದಿನ ಸಭೆಯಲ್ಲಿ ಸಂಘದ ಕಚೇರಿಗೆ ಮೂಲಸೌಕರ್ಯ ಕಲ್ಪಿಸುವುದು, ಕಚೇರಿ ಕೊಠಡಿ ಪಡೆಯುವುದು, ಕಂಪ್ಯೂಟರ್ ಆಪರೇಟರ್ ನೇಮಕ ಹಾಗೂ ಲೆಕ್ಕಪತ್ರಗಳನ್ನು ನೂತನ ಪದಾಧಿಕಾರಿಗಳಿಗೆ ಹಸ್ತಾಂತರಿಸುವ ಕುರಿತು ತೀರ್ಮಾನಿಸಲಾಗಿತ್ತು. ಸಂಘದ ಚುನಾವಣೆ ಮತ್ತು ವೆಬ್‌ಸೈಟ್‌ಗಾಗಿ ಒಟ್ಟು 10.15 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಆನ್‌ಲೈನ್ ಚುನಾವಣೆ ನಡೆಸುವ ಮೂಲಕ ನೌಕರರ ಸಮಯ ಮತ್ತು ಹಣ ಉಳಿತಾಯವಾಗಿದ್ದು, ರಾಜ್ಯಾದ್ಯಂತ ಸಂಘಟನೆಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಆನಂದ್, ಕಾರ್ಯಾಧ್ಯಕ್ಷ ಪೃಥ್ವಿಕುಮಾರ್, ಖಜಾಂಚಿ ರವೀಶ್ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.















