ಕಾಳಿಕಾದೇವಿ ಎಂಟರ್‌ಪ್ರೈಸಸ್ ನಿಂದ ವಂಚನೆ; ರಾಷ್ಟ್ರೀಯ ಅಹಿಂದ ಸಂಘಟನೆಯಿಂದ ಧರಣಿ

WhatsApp
Telegram
Facebook
Twitter
LinkedIn

ಬೆಂಗಳೂರು: ಮನೆಯಲ್ಲೇ ಕುಳಿತು ಸ್ವಾವಲಂಬಿಯಾಗಿ ಆದಾಯ ಗಳಿಸಬಹುದು ಎಂದು ಆಮಿಷ ಒಡ್ಡಿ ಸಾವಿರಾರು ಅಮಾಯಕ ಮಹಿಳೆಯರು ಹಾಗೂ ಸಣ್ಣ ಪ್ರಮಾಣದ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್ ಸಂಸ್ಥೆ ವಿರುದ್ಧ ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಮಿಕ ಘಟಕ ನಗರದ ಫ್ರೀಡಂ ಪಾರ್ಕ್‌ನಲ್ಲಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಸಂತ್ರಸ್ತ ಮಹಿಳೆಯರು, ಕಿರಣ್ ಹಾಗೂ ಆರತಿ ಎಂಬ ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಮಾಧ್ಯಮಗಳ ಜೊತೆ ಕಾರ್ಮಿಕ ವಿಭಾಗದ ರಾಜ್ಯ ಮಹಿಳಾ ಅಧ್ಯಕ್ಷೆ ಕೆ.ಎಂ. ಸುಶೀಲಾ ಮಾತನಾಡಿ, ಶ್ರೀ ಕಾಳಿಕಾದೇವಿ ಎಂಟರ್‌ಪ್ರೈಸಸ್ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದವರು, ಸಣ್ಣ ಮತ್ತು ಮಧ್ಯಮ ವರ್ಗದ ಗೃಹಿಣಿಯರು ಹಾಗೂ ನಿರುದ್ಯೋಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡಿತ್ತು. ಗೃಹಬಳಕೆ ವಸ್ತುಗಳ ತಯಾರಿಕೆಗೆ ಕಚ್ಚಾ ಸಾಮಗ್ರಿ ನೀಡಿ, ಅದನ್ನು ಮರಳಿ ಖರೀದಿಸುವ ಯೋಜನೆಯಡಿ ಪ್ರತಿ ತಿಂಗಳು ಹೆಚ್ಚಿನ ಲಾಭ ಹಾಗೂ ಸಂಬಳ ನೀಡುವುದಾಗಿ ಸಂಸ್ಥೆಯ ಮುಖ್ಯಸ್ಥರುಗಳಾದ ಕಿರಣ್ ಮತ್ತು ಆರತಿ ನಂಬಿಸಿದ್ದರು. 1 ಲಕ್ಷ ರೂ. ಹೂಡಿಕೆಗೆ ತಿಂಗಳಿಗೆ 25 ಸಾವಿರ ರೂ. ಲಾಭದ ಆಮಿಷ ಒಡ್ಡಿ, ಗ್ರಾಹಕರಿಂದ 10 ಲಕ್ಷದಿಂದ 30 ಲಕ್ಷ ರೂ.ವರೆಗಿನ ದೊಡ್ಡ ಪ್ರಮಾಣದ ಹಣ ಹೂಡಿಕೆ ಮಾಡಿಸಿಕೊಂಡಿದ್ದರು ಎಂದು ಮಾಹಿತಿ ನೀಡಿದರು.

ಆರಂಭದಲ್ಲಿ ಕೆಲ ತಿಂಗಳು ಲಾಭಾಂಶ ನೀಡಿ ನಂಬಿಕೆ ಹುಟ್ಟಿಸಿ, ನಂತರ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಏಕಾಏಕಿ ಸಂಸ್ಥೆಯನ್ನು ಮುಚ್ಚಲಾಗಿದೆ. ಅಂದಾಜು 400 ರಿಂದ 800 ಕೋಟಿ ರೂ.ವರೆಗಿನ ಬೃಹತ್ ಅಕ್ರಮ ಇದರಲ್ಲಿ ಕಂಡು ಬರುತ್ತಿದೆ. ​ಈ ವಂಚನೆಯಿಂದಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ಆದ್ದರಿಂದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ನಗರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದ ಈ ಜಾಲದ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು. ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಡ ಕಾರ್ಮಿಕ ಮಹಿಳೆಯರ ಹಿತ ಕಾಯಬೇಕು. ಸಾರ್ವಜನಿಕರು ಕೂಡ ಯಾವುದೇ ನಕಲಿ ಬೈಬ್ಯಾಕ್ ಹಾಗೂ ಹೂಡಿಕೆ ಯೋಜನೆಗಳ ಆಮಿಷಕ್ಕೆ ಒಳಗಾಗದೆ ಜಾಗರೂಕರಾಗಿರಬೇಕು ಎಂದು ಕೆ.ಎಂ. ಸುಶೀಲಾ ಹೇಳಿದರು.

ಈ ಕುರಿತು ಮಾಧ್ಯಮಗಳ ಜೊತೆ ತಮ್ಮ ಅಳಲು ತೋಡಿಕೊಂಡ ಸಂತ್ರಸ್ತ ಮಹಿಳೆ ಅಂಬಿಕಾ, ಮನೆಯಲ್ಲೇ ಕುಳಿತು ಸ್ವಾವಲಂಬಿಯಾಗಿ ದುಡಿಯಬಹುದು ಎಂಬ ಆಸೆಯಿಂದ 21 ಲಕ್ಷದ 30 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದೆ. ಇದಕ್ಕಾಗಿ ಒಡವೆ ಗಿರವಿ ಇಟ್ಟು, ಚಕ್ರಬಡ್ಡಿಗೆ ಸಾಲ ತಂದಿದ್ದರಿಂದ ಇಡೀ ಕುಟುಂಬ ಈಗ ಕಷ್ಟಕ್ಕೆ ಸಿಲುಕಿದೆ. ಇನ್ನೂ ಹಲವು ಸಂತ್ರಸ್ತರು ಸಾಲದ ಬಾಧೆ ತಾಳಲಾರದೆ ತೀವ್ರ ಆಘಾತಕ್ಕೊಳಗಾಗಿದ್ದಾರೆ, ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್.ಶಿವಳ್ಳಿ ಸೇರಿದಂತೆ ವಿವಿಧ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon