ಬೆಂಗಳೂರು: ಮೇಕೆದಾಟು ಯೋಜನೆ ಮತ್ತು ಕಳಸಾ ಬಂಡೂರಿ ಯೋಜನೆ ಕೂಡಲೇ ಪ್ರಾರಂಭಿಸಬೇಕು, ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಟೋಬರ್ 8ರಂದು ಕನ್ನಡ ಜಾಗೃತಿ ವೇದಿಕೆಯ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ಕೆ.ಮಂಜುನಾಥ ದೇವ, ಖಾಸಗಿ ಕ್ಷೇತ್ರದ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ75ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು, ಈ ವರ್ಷದ ಮಳೆ ಇಲ್ಲದ ಕಾರಣ ರೈತರಿಗೆ ಎಕರೆಗೆ 25ಸಾವಿರ ರೂಪಾಯಿಗಳಷ್ಟು ಬೆಳೆ ಪರಿಹಾರ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಮಹಾನಗರ ಪಾಲಿಕೆಯನ್ನು ರಾಜ್ಯದ ಅವಿಭಾಜ್ಯ ಅಂಗವೆಂದು ಘೋಷಣೆ ಮಾಡಬೇಕು, ನಾಡದ್ರೋಹಿ ಎಂ.ಇ.ಎಸ್ ಸಂಘಟನೆಯನ್ನು ನಿಷೇಧ ಮಾಡಬೇಕು, ಕನ್ನಡ ಕಲಿಸದ ಮತ್ತು ನಾಡಗೀತೆ ಹಾಡಿಸದ ಶಾಲೆಗಳ ಮಾನ್ಯತೆ ರದ್ದು ಮಾಡಬೇಕು, ಕನ್ನಡ ನಾಮಪಲಕ ಕಡ್ಡಾಯಗೊಳಿಸಬೇಕು, ಸರ್ಕಾರಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು, ಸರ್ಕಾರದ ಎಲ್ಲಾ ಯೋಜನೆಗಳ ಗುತ್ತಿಗೆಗಳನ್ನು ಕನ್ನಡಿಗರಿಗೆ ನೀಡಬೇಕು, ರಾಷ್ಟೀಕೃತ ಬ್ಯಾಂಕುಗಳಿಗೆ ಕನ್ನಡಿಗ ಅಧಿಕಾರಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ಕನ್ನಡ ಜಾಗೃತಿ ವೇದಿಕೆ ಮಹಿಳಾ ಘಟಕಕ್ಕೆ ಎಸ್.ಎನ್ ಶಿಲ್ಪ ಅವರನ್ನು ಅಧ್ಯಕ್ಷರಾಗಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ನೇತ್ರಾವತಿ ಅವರನ್ನು ನೇಮಕ ಮಾಡಿ ಗುರುತಿನ ಚೀಟಿ ವಿತರಿಸಲಾಯಿತು. ವೇದಿಕೆಯ ರಾಜ್ಯ ಘಟಕದ ಕಾನೂನು ಸಲಹೆಗಾರ ಡಾ.ಕೆ.ಪಿ.ವೆಂಕಟೇಶ್, ಸಂಘಟನಾ ಕಾರ್ಯದರ್ಶಿಗಳಾದ ಗುಡ್ಡಹಟ್ಟಿ ರಾಮಸ್ವಾಮಿ, ಬಳಗಾರನಹಳ್ಳಿ ಜಿ.ಕುಮಾರ್, ಅಡಿಗಾರಕಲ್ಲಹಳ್ಳಿ ಮಕ್ತಾರ್ ಪಾಷ, ದೊಡ್ಡಬಳ್ಳಾಪುರ ಹೆಚ್.ಎಸ್, ಅಗ್ನಿವೆಂಕಟೇಶ್, ರಾಜ್ಯ ಖಜಾಂಚಿ ಕೋದಂಡರಾಮ ಉಪಸ್ಥಿತರಿದ್ದರು.
ಜೊತೆಗೆ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಹೆಚ್.ಆರ್.ವತ್ಸಲ, ಕಾರ್ಯಾಧ್ಯಕ್ಷೆ ಸುಮಾಲಿನಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ನಾಗರಾಜ್, ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಶಶಿ, ಆನೇಕಲ್ ತಾಲ್ಲೂಕು ಯುವಘಟಕದ ಅಧ್ಯಕ್ಷ ಜಾವೀದ್ ಮತ್ತು ಕೆ.ಜಿ.ಎಫ್ ತಾಲ್ಲೂಕು ಅಧ್ಯಕ್ಷ ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.















