ಅಡ್ಡಪರಿಣಾಮಗಳಿಲ್ಲದ ಹೋಮಿಯೋಪತಿ ವೈದ್ಯಕೀಯ ಪದ್ಧತಿ ಅತ್ಯಂತ ಪ್ರಮುಖವಾಗಿದೆ: ಡಾ.ಬಿ.ಸಿ. ಭಗವಾನ್

WhatsApp
Telegram
Facebook
Twitter
LinkedIn

ಬೆಂಗಳೂರು: ಆಧುನಿಕ ಜೀವನಶೈಲಿ ಹಾಗೂ ತುರ್ತು ಚಿಕಿತ್ಸೆಗಳಿಗೆ ಅಲೋಪತಿ ಅಗತ್ಯವಾದರೂ, ರೋಗನಿರೋಧಕ ಮತ್ತು ಅಡ್ಡಪರಿಣಾಮಗಳಿಲ್ಲದ ಸಮಗ್ರ ಚಿಕಿತ್ಸೆಯಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯು ಅತ್ಯಂತ ಪ್ರಮುಖವಾಗಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳು ಡಾ.ಬಿ.ಸಿ. ಭಗವಾನ್ ಅಭಿಪ್ರಾಯಪಟ್ಟರು.

ಭಾನುವಾರ ನಗರದ ಪುರಭವನದಲ್ಲಿ ಮಡಿಲು ಪ್ರಕಾಶನ ಮತ್ತು ಹೋಮಿಯೋಪತಿ ಫೌಂಡೇಶನ್‌ ಹಮ್ಮಿಕೊಂಡಿದ್ದ ಡಾ.ಬಿ.ಟಿ.ರುದ್ರೇಶ್‌ ಅವರ ಬೆಳಕಿನ ಬೆಳೆ ಸಮಗ್ರ ಸಾಹಿತ್ಯ ಸಂಪುಟ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಸೇವಿಸುವ ಆಹಾರ ಕಲಬೆರಕೆಯಾಗಿದೆ, ಕುಡಿಯುವ ನೀರು ಕಲುಷಿತಗೊಂಡಿದೆ ಮತ್ತು ಸೇವಿಸುವ ಗಾಳಿ ಮಲೀನವಾಗಿದೆ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಉದ್ಯಮ ಆಧಾರಿತ ಔಷಧಗಳು ಲಾಭಕ್ಕಿಂತ ಹೆಚ್ಚಾಗಿ ಮಾನವಕುಲಕ್ಕೆ ಹಾನಿ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ರೋಗಿಯನ್ನು ಪೂರ್ಣಪ್ರಮಾಣದಲ್ಲಿ ಗುಣಪಡಿಸುವ ಹೋಮಿಯೋಪತಿಯಂತಹ ಚಿಕಿತ್ಸಾ ಪದ್ಧತಿಗಳ ಅಗತ್ಯ ಹೆಚ್ಚಾಗಿದೆ ಎಂದರು.

​ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ವ್ಯಸನದ ವಿರುದ್ಧ ರಾಜೀವ್ ಗಾಂಧಿ ವಿಶ್ವವಿದ್ಯಾಲಯವು ಈಗಾಗಲೇ 15 ಜಿಲ್ಲೆಗಳಲ್ಲಿ ಮಾದಕದ್ರವ್ಯ ವಿರೋಧಿ ಅಭಿಯಾನದ ಕಾರ್ಯಕ್ರಮಗಳನ್ನು ಸಂಘಟಿಸಿದೆ. ಸುಮಾರು 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗಿದೆ. ​ದೇಶದ ಶೇ.30 ರಿಂದ 40 ರಷ್ಟು ಯುವಕರು ವಿವಿಧ ದುರಭ್ಯಾಸಗಳಿಗೆ ತುತ್ತಾಗುತ್ತಿದ್ದು, ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳಲು ವೈದ್ಯರು ಹಾಗೂ ನಾಗರಿಕ ಸಮಾಜ ಶ್ರಮಿಸಬೇಕು ಎಂದು ಮನವಿ ಮಾಡಿದರು.

​ಡಾ. ಬಿ.ಟಿ. ರುದ್ರೇಶ್ ಕೇವಲ ಹೋಮಿಯೋಪತಿ ಪದವಿ ಹೊಂದಿದ ವೈದ್ಯರಷ್ಟೇ ಅಲ್ಲ. ರೋಗಿಗಳ ಬಗ್ಗೆ ಕರುಣೆ, ಅನುಕಂಪ ಹೊಂದಿರುವ ವೈದ್ಯರಾಗಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಮಿಯೋಪತಿ ಪದ್ಧತಿಯನ್ನು ಮುನ್ನೆಲೆಗೆ ತರಲು ಅವರು ನಿರಂತರ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ಹೋಮಿಯೋಪತಿ ವೈದ್ಯ ಡಾ. ಬಿ.ಟಿ. ರುದ್ರೇಶ್ ಮಾತನಾಡಿ, ರೋಗಿ ಇಲ್ಲದೆ ವೈದ್ಯನಿಲ್ಲ, ವೈದ್ಯನಿಲ್ಲದೆ ರೋಗಿಯಿಲ್ಲ. ನನ್ನ ಬಳಿಗೆ ಬರುವ ಪ್ರತಿಯೊಬ್ಬ ರೋಗಿಯನ್ನು ನನ್ನ ಬಳಿಗೆ ದೇವರು ಕಳುಹಿಸಿದ್ದಾನೆ ಎಂದೇ ಭಾವಿಸುತ್ತೇನೆ. ಚಿಕಿತ್ಸೆ ಸಂದರ್ಭದಲ್ಲಿ ಬಡವ, ಶ್ರೀಮಂತ, ಮೇಲು ಕೀಳೆಂಬ ಬೇಧ ಮಾಡಿಲ್ಲ. ಕಳೆದ 50 ವರ್ಷಗಳಲ್ಲಿ 45 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದ ಸಾರ್ಥಕತೆ ನನಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ದಿಲೀಪ್ ಕುಮಾರ್, ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್‌ ಸೇರಿದಂತೆ ಇತರರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon