ಬೆಂಗಳೂರು: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದ ದುರ್ಘಟನೆ ಅತ್ಯಂತ ವಿಷಾದನೀಯವಾಗಿದ್ದು, ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸದಿರುವುದು ಅಕ್ಷಮ್ಯವಾಗಿದೆ ಎಂದು ನವ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಕೇಶವಮೂರ್ತಿ ಹೇಳಿದರು.
ಶುಕ್ರವಾರ ಗಾಂಧಿನಗರದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ರಾಜ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ಹಲವು ಸಂಘಟನೆಗಳ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ತಿಂಗಳ ಕೊನೆಯ ವಾರದಲ್ಲಿ ತೀವ್ರ ಮಳೆ ಮತ್ತು ಶಿಥಿಲಗೊಂಡ ಕಾಂಪೌಂಡ್ ಪರಿಶೀಲಿಸದೆ ಅಧಿಕಾರಿಗಳು ತೋರಿದ ದಿವ್ಯ ನಿರ್ಲಕ್ಷದಿಂದ 7 ಜನರು ದುರ್ಮರಣ ಹೊಂದಿದರು ಅದರಲ್ಲಿ 4 ಜನರು ಬೀದಿ ಬದಿ ವ್ಯಾಪಾರಿಗಳೇ ಆಗಿದ್ದರು. ಇದರೊಂದಿಗೆ ಸುಮಾರು ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರು ಸಂತ್ರಸ್ತರಾದರು. ಆದರೆ ಯಾರಿಗೂ ಸೂಕ್ತ ರೀತಿಯಲ್ಲಿ ಮತ್ತೆ ವ್ಯಾಪಾರ ಮಾಡಲು ಅವಕಾಶವನ್ನು ಕಲ್ಪಿಸಲಾಗಿಲ್ಲ. ರಾಜ್ಯ ಸರ್ಕಾರದ ಮತ್ತು ಪಾಲಿಕೆಯ ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.
ಸಂಘಟನೆಯ ಉಪಾಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳ ಆರೋಗ್ಯದ ಕುರಿತು ಹಲವು ಯೋಜನೆಗಳನ್ನು ರೂಪಿಸುವುದಾಗಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಜಿಬಿಎ ಕೂಡ ನಗರದ ಹಲವು ಭಾಗಗಳಲ್ಲಿ ವೆಂಡಿಂಗ್ ಝೋನ್ ಗಳನ್ನು ನಿರ್ಮಿಸಿ ಕೊಡುವುದಾಗಿ ತಿಳಿಸಿತ್ತು. ಸ್ಮಾರ್ಟ್ ಕಾರ್ಡ್ ಮಾದರಿಯ ಗುರುತಿನ ಚೀಟಿಗಳನ್ನು ವಿತರಿಸುವುದಾಗಿ ಕೂಡ ಹೇಳಲಾಗಿತ್ತು. ಆದರೆ ಯಾವುದೇ ಭರವಸೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮುಖ್ಯ ಕಾರ್ಯದರ್ಶಿಯಿಂದ ಹಿಡಿದು, ಜಿಬಿಎ ಮುಖ್ಯ ಆಯುಕ್ತರವರೆಗೆ ಹಲವಾರು ಬಾರಿ ಮನವಿಗಳನ್ನು ನೀಡಿದ್ದರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನವ ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತವತ್ಸಲ, ಉಪಾಧ್ಯಕ್ಷರಾದ ದೊಡ್ಡಣ್ಣ ಬಿ.ಕೆ, ಖಜಾಂಚಿ ಆಶಾ ಆರ್ ಮತ್ತಿತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.















