ಬೆಂಗಳೂರು: 2026ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ 25 ರಂದು ಕೊನೆಯ ದಿನಾಂಕವಾಗಿದೆ. ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯವಿರುವ ಮಾಹಿತಿಗಾಗಿ ಕೆಎಸ್ಜಿಇಎ ನ್ಯೂಸ್ ಯೂಟ್ಯೂಬ್ ಚಾನಲ್ಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು 2026ರ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು.
ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕಿದೆ. ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿ ಸಲ್ಲಿಸುವಂತಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಿಳಿಸಿದೆ.















