ಬೆಂಗಳೂರು: ಮುಂದಿನ ಆರು ತಿಂಗಳ ಕಾಲ ತಿರುಪತಿ ತಿರುಮಲ ಸನ್ನಿಧಾನಕ್ಕೆ ಬಮುಲ್ ನಿಂದ 20 ಲಕ್ಷ ಕೆ.ಜಿ ತುಪ್ಪವನ್ನು ಸರಬರಾಜು ಮಾಡಲಾಗುತ್ತದೆ. ಪ್ರತಿವರ್ಷ ಕೆಎಂಎಫ್ ನಿಂದ ತುಪ್ಪ ಸರಬರಾಜು ಮಾಡಲಾಗುತ್ತಿತ್ತು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಕಚೇರಿಯಲ್ಲಿ ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ತಿರುಪತಿಗೆ ನಂದಿನಿ ತುಪ್ಪ ಪೂರೈಕೆಗೆ ನಾವು ಟೆಂಡರ್ ಪಡೆದಿದ್ದು, ಇದರ ಮೊತ್ತ 136 ಕೋಟಿ ರೂಪಾಯಿಗಳು. ಪ್ರತಿನಿತ್ಯ 12.5 ಟನ್ ನಂತೆ ಮುಂದಿನ ಆರು ತಿಂಗಳು ತುಪ್ಪ ಸರಬರಾಜಾಗಲಿದೆ. ಬಮುಲ್ ಒಕ್ಕೂಟ ಟಿಟಿಡಿ ಜೊತೆ ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡು ಈ ಸರಬರಾಜು ಮಾಡುತ್ತಿದೆ ಎಂದರು.
ತುಪ್ಪ ಸಾಗಾಣಿಕೆಗೆ ಡಿಜಿಟಲ್ ಲಾಕ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ನಾವು ಕೊಟ್ಟ ಪಾಸ್ ವರ್ಡ್ ಅಲ್ಲಿ ನಮೂದಿಸಿದರೆ ಮಾತ್ರ ತೆರಬಹುದಾಗಿದೆ. ಶ್ರೀ ವೆಂಕಟೇಶ್ವರ ಸ್ವಾಮಿ, ಪದ್ಮಾವತಿ ಅಮ್ಮನವರ ಆಶೀರ್ವಾದ ನಮ್ಮ ನಂದಿನಿಯ ಮೇಲೆ ಇರುವ ಕಾರಣಕ್ಕೆ ಇದು ಸಾಧ್ಯವಾಗಿದೆ. ನಂದಿನಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾರುಕಟ್ಟೆಯಲ್ಲಿ ಅಕ್ರಮ ಎಸಗುತ್ತಿರುವವರ ವಿರುದ್ದ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಅಂತಹವರ ವಿರುದ್ದ ಒಕ್ಕೂಟದಿಂದ ದೂರುಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಇದರಿಂದ ಕರ್ನಾಟಕದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ನಾವು ಈಗ 1 ಕೋಟಿ ಲೀಟರ್ ಹಾಲಿನ ಸಂಗ್ರಹಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ವಿಶೇಷ ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಬಗ್ಗೆ ಆಲೋಚನೆಯಿದೆ. ಕನಕಪುರ ಮೆಗಾ ಡೈರಿ ಪ್ಲಾಂಟ್ ಸತತ ಮೂರನೇ ಬಾರಿಗೆ ಸಿಐಎ ಅವಾರ್ಡ್ ಅನ್ನು ಪಡೆದುಕೊಂಡಿದೆ. ಸ್ವಚ್ಚತೆ, ಗುಣಮಟ್ಟ ಕಾಪಾಡಿದ ಒಕ್ಕೂಟದ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಹೆಚ್ಚಿನ ತಂತ್ರಜ್ಞಾನ ಬಳಸಿಕೊಂಡು ಇನ್ನಷ್ಟು ಗುಣಮಟ್ಟ ಉತ್ಪನ್ನಗಳನ್ನು ಜನರಿಗೆ ನೀಡಬೇಕಿದೆ ಎಂದರು.
ದರ ಏರಿಕೆ ಪ್ರಸ್ತಾವನೆ ಸದ್ಯಕ್ಕಿಲ್ಲ:
ದರ ಏರಿಕೆ ವಿಚಾರವಾಗಿ ಕೇಳಿದಾಗ, ಸದ್ಯಕ್ಕೆ ದರ ಏರಿಕೆ ಪ್ರಸ್ತಾವನೆಗಳು ಇಲ್ಲ. ಹಾಲಿನ ದರ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು ಅಧ್ಯಯನ ಮಾಡಲಾಗುವುದು. ನಮ್ಮಲ್ಲೇ ಒಂದಷ್ಟು ಲೋಪದೋಷಗಳಿವೆ. ಅದನ್ನು ಸರಿಪಡಿಸಲು ಸರ್ಕಾರದ ಮುಂದೆ ಅನುಮತಿ ಕೇಳುತ್ತೇವೆ. ಉತ್ಪನ್ನಗಳ ಪ್ಯಾಕಿಂಗ್ ಸಲಕರಣೆಗಳ ಖರೀದಿ ವೆಚ್ಚ ಹೆಚ್ಚಳವಾಗುತ್ತಿದೆ. ಉದಾಹರಣಗೆ ಪ್ಲಾಸ್ಟಿಕ್ ಕ್ರೇಟ್, ಪ್ಯಾಕಿಂಗ್ ಕವರ್. ಅಲ್ಲದೇ ಶುದ್ದೀಕರಣ ರಾಸಾಯನಿಕಗಳನ್ನು ವಿದೇಶದಿಂದಲೇ ತರಿಸಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಕೆಎಂಎಫ್ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂದು ಚಿಂತನೆ ಮಾಡುತ್ತೇವೆ. ಖಾಸಗಿಯವರು ಹಾಲಿನ ದರವನ್ನು 2 ರೂಪಾಯಿ ಹೆಚ್ಚಳ ಮಾಡಿದ್ದಾರೆ. ನಾವು ಸರ್ಕಾರದ ಅಧೀನದಲ್ಲಿ ಇರುವ ಕಾರಣಕ್ಕೆ ಇದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ನಾವು ಗುಣಮಟ್ಟದ ಪದಾರ್ಥ ನೀಡಬೇಕು ಎನ್ನುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಅರ್ಧ ಲೀಟರ್ ಹಾಲಿಗೆ ಹೆಚ್ಚಿನ ಬೇಡಿಕೆ:
ಮಾರುಕಟ್ಟೆಯಲ್ಲಿ ಅರ್ಧ ಲೀಟರ್ ಹಾಲಿಗೆ ಬೇಡಿಕೆಯಿದೆ. ಅದರ ಬೆಲೆ ಹೆಚ್ಚಿದೆ. ಒಂದು ಲೀಟರ್ ಹಾಲಿನ ಬೆಲೆ ಕಡಿಮೆಯಿದೆ. ಹೊರೆ ಅನ್ನುವುದಿಲ್ಲ. ಏಕೆಂದರೆ ಒಂದೊಂದು ಒಕ್ಕೂಟದಲ್ಲಿ ಒಂದೊಂದು ಹಾಲಿನ ದರವಿದೆ. ಅಲ್ಲದೇ ಮಳೆಗಾಲ ಬಂದ ತಕ್ಷಣ 10-15 ಲಕ್ಷ ಲೀಟರ್ ಹಾಲಿನ ಸರಬರಾಜು ಹೆಚ್ಚಾಗಲಿದೆ. ಕಳೆದ ವರ್ಷ ರಾಜ್ಯದಲ್ಲಿ 1.5 ಕೋಟಿ ಲೀಟರ್ ಹಾಲು ಬರುತಿತ್ತು. ಬಮುಲ್ ನಿಂದ 14 ಲಕ್ಷ ಲೀಟರ್ ಹಾಲನ್ನು ತೆಗೆದುಕೊಳ್ಳುತ್ತಿದ್ದೇವೆ. ಬೇಸಿಗೆಯಲ್ಲಿ 17.5 ಲಕ್ಷ ಲೀಟರ್ ಹಾಲು ಬರುತ್ತಿದೆ. ನಮ್ಮ ಗುರಿ 21 ಲಕ್ಷ ಲೀಟರ್ ಹಾಲು ಸಂಗ್ರಹವಾಗಿದೆ. ನಾವು ಹಾಲಿಗಿಂತ ಹೆಚ್ಚಾಗಿ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದೇವೆ ಎಂದರು.
ಟೆಂಡರ್ ಗೆ 6 ತಿಂಗಳಿನಿಂದ ತಯಾರಿ:
ಬಮುಲ್ ನಿಂದಲೇ ತುಪ್ಪವನ್ನ ಏಕೆ ಸರಬರಾಜು ಮಾಡಲಾಗುತ್ತಿದೆ ಎಂದು ಕೇಳಿದಾಗ, ಸಂಗ್ರಹಣೆ ಮುಖ್ಯವಾದುದು. ಇದಕ್ಕೆ ನಾವು ಕಳೆದ 6 ತಿಂಗಳಿನಿಂದ ತಯಾರಿ ಮಾಡಿಕೊಂಡಿದ್ದೆವು. ನಮ್ಮಲ್ಲಿ ಸರಬರಾಜು ಶಕ್ತಿ ಇಲ್ಲದೇ ಹೋದರೆ ಟೆಂಡರ್ ಪಡೆದ ಮೇಲೆ ಕಷ್ಟ ಪಡಬೇಕಾಗುತ್ತದೆ. ಅದಕ್ಕೆ ಸಿದ್ದತೆ ಮಾಡಿಕೊಂಡು ನಾವು ಟೆಂಡರ್ ಪಡೆದೆವು ಎಂದು ಮಾಹಿತಿ ನೀಡಿದರು.
ದಿನ 20 ಲಕ್ಷ ಲೀಟರ್ ಹಾಲು ಸಂಗ್ರಹ ಗುರಿ:
ಬಮುಲ್ ನಲ್ಲಿ ಪ್ರತಿನಿತ್ಯ 17.5 ಲಕ್ಷ ಲೀಟರ್ ಹಾಲನ್ನು ಪ್ರತಿ ನಿತ್ಯ ಶೇಖರಣೆ ಮಾಡಲಾಗುತ್ತಿದೆ. ಈ ವರ್ಷದ ನಮ್ಮ ಗುರಿ 20 ರಿಂದ 21 ಲಕ್ಷ ಲೀಟರ್ ಆಗಿದೆ. ಹಾಲಿನ ಹೆಚ್ಚಳಕ್ಕೆ ಉತ್ಪಾದನಾ ಸಂಘಗಳಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಹೆಣ್ಣು ಕರುಗಳೇ ಆಗಬೇಕು ಎಂದು ಕಳೆದ ಜನವರಿಯಿಂದ ಕಾರ್ಯಕ್ರಮ ರೂಪಿಸಿ ಪ್ರತಿಹಂತದಲ್ಲಿಯೂ ಮೂರು ಲಕ್ಷ ಸೆಮನ್ಸ್ ಖರೀದಿ ಮಾಡಿ ರಾಸುಗಳಿಗೆ ಹಾಕಲಾಗುತ್ತಿದೆ. ಹಸುಗಳ ಬೆಳವಣಿಗೆ, ಆರೋಗ್ಯದ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಗಮನಿಸಲು ತಂಡ ನೇಮಿಸಲಾಗಿದೆ. ಗುಣಮಟ್ಟವನ್ನ ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಹಾಲಿನ ಉತ್ಪನ್ನಗಳ ಗುಣಮಟ್ಟ ಹೇಗಿರಬೇಕು ಎಂದು ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾರುಕಟ್ಟೆಗೆ ಅನುಗುಣವಾಗಿ ಉತ್ಪನ್ನಗಳ ಸಂಶೋಧನೆ:
ದೇಸಿ ತಳಿ ಹಾಲು, ಕೊಬ್ಬು ರಹಿತ, ಲ್ಯಾಕ್ಟೋಸ್ ಫ್ರೀ, ಪ್ರೋಬಯಾಟಿಕ್ ಮೊಸರು ಹೀಗೆ ಅನೇಕ ಉತ್ಪನ್ನಗಳ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಮಾರುಕಟ್ಟೆಗೆ ಅನುಗುಣವಾಗಿ ನಾವು ನೀಡಬೇಕಿದೆ. ಇದರ ಬಗ್ಗೆ ಒಂದಷ್ಟು ಸಂಶೋಧನೆ ಕೂಡ ನಡೆಸುತ್ತಿದ್ದೇವೆ ಎಂದರು.














