ಹತ್ಯೆಯಾದ ಯುವತಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ, 2 ಎಕರೆ ಜಮೀನು ಕೊಡಿ: ಬಿ.ವೈ.ವಿಜಯೇಂದ್ರ

WhatsApp
Telegram
Facebook
Twitter
LinkedIn

ಯಲ್ಲಾಪುರ: ಏಕೈಕ ಪಾಲಕಿಯಾದ ಮಹಿಳೆಯ ಹತ್ಯೆಯಿಂದ ಹತ್ತು ವರ್ಷದ ಮಗ ಅನಾಥನಾಗಿದ್ದಾನೆ. ವಯೋವೃದ್ಧ ತಾಯಿ ದಿಕ್ಕುಗಾಣದಂತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹತ್ಯೆಯಾದ ದಲಿತ ಹಿಂದೂ ಮಹಿಳೆಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು, ಈ ದಲಿತ ಕುಟುಂಬಕ್ಕೆ 2 ಎಕರೆ ಜಮೀನು ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭಾನುವಾರ ಮುಸ್ಲಿಂ ಯುವಕನ ಚಾಕು ಇರಿತದಿಂದ ಬರ್ಬರವಾಗಿ ಹತ್ಯೆಗೊಳಗಾದ ದಲಿತ ಹಿಂದೂ ಯುವತಿ ರಂಜಿತಾ ಬನಸವಾಡೆ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಬಳಿಕ ನತದೃಷ್ಟ ಯುವತಿಯ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಂಜಿತಾ ಹತ್ಯಾ ಪ್ರಕರಣದ ಗಂಭೀರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ, ಗೃಹ ಇಲಾಖೆ ನಿಷ್ಕ್ರಿಯವಾಗಿರುವ ಪರಿಣಾಮವೇ ಇಂಥ ಪ್ರಕರಣಗಳು ಮರುಕಳಿಸುತ್ತಿವೆ. ಇಂಥ ಅಹಿತಕರ ಘಟನೆಗಳು ನಡೆದಾಗ ಪೊಲೀಸ್ ಇಲಾಖೆ ತನಿಖೆ ಪ್ರಾರಂಭಿಸುವ ಮುನ್ನವೇ ಗೃಹ ಸಚಿವರು, ಮುಖ್ಯಮಂತ್ರಿಗಳು ಇದು ಲವ್ ಜಿಹಾದ್ ಅಲ್ಲವೆಂದು ಕ್ಲೀನ್ ಚಿಟ್ ಕೊಡುತ್ತಿದ್ದಾರೆ. ಇದೆಲ್ಲದರ ಪರಿಣಾಮವೇ ಇಂಥ ದುಷ್ಕೃತ್ಯಗಳು ಮರುಕಳಿಸುತ್ತಿವೆ ಎಂದು ವಿಶ್ಲೇಷಿಸಿದರು.

ಇಂಥಹ ಪ್ರಕರಣ ನಡೆದಾಗ ತಪ್ಪು ಮಾಹಿತಿ ಕೊಡುವುದು, ಪ್ರಕರಣಗಳನ್ನು ಮುಚ್ಚಿ ಹಾಕುವುದು ನಡೆಯುತ್ತಿದೆ. ಇದೆಲ್ಲದರ ಪರಿಣಾಮವಾಗಿ ಯಲ್ಲಾಪುರದ ದುರ್ಘಟನೆ ನಡೆದಿದೆ. ಹೀಗಾಗಿದೆ ಪ್ರಕರಣದ ಸಮರ್ಪಕ ತನಿಖೆ ನಡೆದು ಕುಟುಂಬಕ್ಕೂ ನ್ಯಾಯ ಲಭಿಸಬೇಕು. ಹಿಂದೂ ಸಮಾಜಕ್ಕೂ ನ್ಯಾಯ ಸಿಗಬೇಕು. ಸಾವಿನ ಮನೆಯಲ್ಲಿ ರಾಜಕಾರಣ ನಮ್ಮದಲ್ಲ. ಮನುಷ್ಯತ್ವದ ರಾಜಕಾರಣ ಬಿಜೆಪಿಯದು, ಆದರೆ  ಪದೇಪದೇ ಇಂಥ ಘಟನೆಗಳು ಕರ್ನಾಟಕದಲ್ಲಿ ಮರುಕಳಿಸುತ್ತಿರುವುದು ಖಂಡನೀಯ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ನೇಹಾ ಹಿರೇಮಠ್ ಘಟನೆಯನ್ನು ನಾವ್ಯಾರೂ ಮರೆತಿಲ್ಲ. ಬಿಜೆಪಿ ಏನಾದರೂ ಹೇಳಿಕೆ ಕೊಟ್ಟರೆ ನಮ್ಮನ್ನು ಕೋಮುವಾದಿಗಳೆಂದು ಬಣ್ಣ ಕೊಡುವ ಕೆಲಸ ಮಾಡುತ್ತಾರೆ. ಆದರೆ ಬಿಜೆಪಿ ವತಿಯಿಂದ ಪರಿಹಾರ, ಶಿಕ್ಷಣದ ವ್ಯವಸ್ಥೆ ಎಂದೂ ಮಾಡಲಾಗಿದೆ. ಈ ಬಾರಿ ಕೂಡ ಬಿಜೆಪಿ ವತಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಐದನೇ ತರಗತಿಯಲ್ಲಿ ಓದುತ್ತಿರುವ ಹತ್ತು ವರ್ಷದ ಬಾಲಕನ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ವತಿಯಿಂದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಹರಿಪ್ರಕಾಶ್ ಕೋಣೆಮನೆಯವರು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ, ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಯಲ್ಲಾಪುರ ಮಂಡಲ ಅಧ್ಯಕ್ಷ ಪ್ರಸಾದ್ ಹೆಗಡೆ, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಲ್, ಮುಖಂಡರಾದ ಕೆ.ಜಿ.ನಾಯಕ್, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ್ ಚಲವಾದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾಣಿ ಮತ್ತು ಗುರುಪ್ರಸಾದ್ ಹೆಗಡೆ, ವಿ.ಎಚ್.ಪಿ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್, ಜಿಲ್ಲಾ ಉಪಾಧ್ಯಕ್ಷ ಎಲ್.ಟಿ.ಪಾಟೀಲ್,  ಯಲ್ಲಾಪುರ ಮಂಡಳ ಪ್ರಭಾರಿಗಳಾದ ನಾಗರಾಜ್ ನಾಯಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ್, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ತಾಲೂಕು ಉಪಾಧ್ಯಕ್ಷರಾದ ಬಿಂದೇಶ್ ನಾಯಕ್, ಜಿ.ಎನ್.ಗಾಂವಕರ, ಉಮೇಶ್ ಭಾಗ್ವತ, ಗಣಪತಿ ಮಾನಿಗದ್ದೆ, ವಿಹಿಂಪದ ಗಜಾನನ ನಾಯ್ಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon