ಖಾನಾಪುರ: ತಾಲೂಕಿನ ಅಮಟೆ ಗ್ರಾಮದಲ್ಲಿರುವ ಅಂಗನವಾಡಿ ಹತ್ತಿರದಲ್ಲಿ ಸೆಗಣಿ ಸಂಗ್ರಹಿಸುವ ಜಾಗದಿಂದ ಇಲ್ಲಿನ ಮಕ್ಕಳು, ಪಾಲಕರು ಹಾಗೂ ಶಿಕ್ಷಕರು ವಿಪರೀತ ತೊಂದರೆ ಎದುರಿಸುವಂತಾಗಿದೆ.
ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಿಂದ ಕೇವಲ 20 ಅಡಿ ದೂರದಲ್ಲಿ ತ್ಯಾಜ್ಯ ಸೆಗಣಿ ಸಂಗ್ರಹಿಸಲಾಗುತ್ತಿದೆ. ಇದು ಖಾಸಗಿ ವ್ಯಕ್ತಿಯೊಬ್ಬರ ಜಾಗವಾಗಿದ್ದು, ಅವರು ಸೆಗಣಿಯನ್ನು ಇಲ್ಲಿ ಸಂಗ್ರಹಿಸುತ್ತಿದ್ದಾರೆ. ಇದರಿಂದ ಹೊಮ್ಮುವ ದುರ್ನಾತದಿಂದ ಮಕ್ಕಳು ಬಳಲುವಂತಾಗಿದೆ. ಅಲ್ಲದೆ ಈ ಕೊಳೆತ ಸೆಗಣಿಯ ಸಂಗ್ರಹಾಗಾರದ ಕಾರಣದಿಂದ ನೊಣ, ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಚಿಕ್ಕಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಆಗುವ ಸಾಧ್ಯತೆ ಇದೆ.
ಇಲ್ಲಿ ಸೆಗಣಿ ಸಂಗ್ರಹಿಸುವುದನ್ನು ನಿಲ್ಲಿಸಬೇಕೆಂದು ಕೋರಿ ಗ್ರಾಮದ ನಾಗರಿಕ ಸಾಗರ ಗಾಂವಕರ ಎಂಬುವರು ನಾಲ್ಕು ತಿಂಗಳ ಹಿಂದೆಯೇ ಅಮಟೆ ಗ್ರಾಮ ಪಂಚಾಯಿತಿಗೆ ಪತ್ರ ಬರೆದಿದ್ದರು. ಆದರೆ ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೆಗಣಿ ಸಂಗ್ರಹಿಸುತ್ತಿರುವ ಜಾಗ ಮಾಜಿ ಗ್ರಾಪಂ ಸದಸ್ಯರೊಬ್ಬರಿಗೆ ಸೇರಿದೆ ಎಂಬ ಕಾರಣದಿಂದ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ.
ಈಗಲಾದರೂ ಗ್ರಾಮ ಪಂಚಾಯಿತಿಯವರು ಕಾರ್ಯಪ್ರವೃತ್ತರಾಗಿ ಗ್ರಾಮದ ಶುಚಿತ್ವ ಕಾಪಾಡಲು ಮುಂದಾಗಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ. ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂದೆ ತಮ್ಮ ಆಫೀಸಿನಿಂದ ಹೊರಗೆ ಬಂದು ಇಂಥ ಮೂಲೆಯ ಗ್ರಾಮಗಳಿಗೆ ಒಮ್ಮೆಯಾದರೂ ಬಂದಿದ್ದಾರಾ ಎಂದೂ ಜನ ಪ್ರಶ್ನಿಸುತ್ತಿದ್ದಾರೆ. ಗ್ರಾಮಗಳಲ್ಲಿನ ಸಮಸ್ಯೆಗಳನ್ನು ನಿವಾರಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೂ ಬೆಳಗಾವಿ ಜಿಪಂ ಸಿಇಒ ಗ್ರಾಮಗಳ ಉದ್ಧಾರದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನ ಆರೋಪಿಸುತ್ತಿದ್ದಾರೆ.
ಭ್ರಷ್ಟಾಚಾರ ನಡೆದಿರುವ ಶಂಕೆ:
ಅಮಟೆ ಗ್ರಾಮ ಪಂಚಾಯಿತಿಯವರು ಕೈಗೊಳ್ಳುವ ಮನರೇಗಾ ಹಾಗೂ ಎಸ್.ಸಿ.ಎಸ್.ಟಿ ಫಂಡ್ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂಶಯ ಉಂಟಾಗಿದೆ. ಮುಂದಿನ ದಿನಗಳಲ್ಲಿ ಪ್ರಜಾ ನೆರಳು ದಿನಪತ್ರಿಕೆ ಇದರ ಬಗ್ಗೆ ವಿಸ್ತೃತ ವರದಿ ಪ್ರಕಟಿಸಲಿದೆ.















