ಪಾರವಾಡ (ಖಾನಾಪುರ ತಾಲೂಕು): ಪಾರವಾಡ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಪ್ರಜಾನೆರಳು ದಿನಪತ್ರಿಕೆ ಸತತವಾಗಿ ವರದಿ ಮಾಡುತ್ತಿದ್ದು, ಆ ಸಾಲಿಗೆ ಈಗ ಮತ್ತೊಂದು ವರದಿ ಸಾರ್ವಜನಿಕರ ಮುಂದೆ ಇಡಲಾಗುತ್ತಿದೆ.
ಪಾರವಾಡ ಗ್ರಾಪಂ ವ್ಯಾಪ್ತಿಯಲ್ಲಿನ ಹೊಸ ಹುಳಂದ ಗ್ರಾಮದಲ್ಲಿ ಶಾಲೆಯ ಮುಂದೆ ಸಭೆ ಸಮಾರಂಭಗಳಿಗಾಗಿ ಗ್ರಾಪಂ ವತಿಯಿಂದ ವೇದಿಕೆಯೊಂದನ್ನು ನಿರ್ಮಿಸಲಾಗಿದ್ದು, ಕಾಮಗಾರಿ ಮುಗಿದು ಮೂರು ವರ್ಷಗಳಾದರೂ ಈ ಕಾಮಗಾರಿ ಪೂರೈಸಿದ ಗುತ್ತಿಗೆದಾರರಿಗೆ ಈವರೆಗೂ ಬಿಲ್ ಪಾವತಿ ಆಗಿಲ್ಲ. ಸಾಮಾನ್ಯವಾಗಿ ಕೆಲಸ ಮುಗಿದ ನಂತರ ಕೆಲ ದಿನಗಳಲ್ಲಿ ಬಿಲ್ ಪಾವತಿ ಆಗಬೇಕು. ಆದರೆ ಈ ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸಿದ ಆಗಿನ ಪಿಡಿಒ ವೀರೇಶ ಸಜ್ಜನ ಅವರ ಆಡಳಿತಾವಧಿಯಲ್ಲಿ ನಡೆದ ಕಾಮಗಾರಿಗಳ ಬಿಲ್ ಮಾತ್ರ ಮೂರು ವರ್ಷಗಳಾದರೂ ಪಾವತಿ ಆಗಿಲ್ಲ. ಇದೇ ಮಾದರಿಯಲ್ಲಿ ಚಿಕಲೆ ಗ್ರಾಮದಲ್ಲಿ ಕೈಗೊಳ್ಳಲಾದ ಪೈಪ್ ಲೈನ್ ಕಾಮಗಾರಿಯ ಬಿಲ್ ಕೂಡ ಬಾಕಿ ಉಳಿದಿರುವುದು ಸೋಜಿಗದ ಸಂಗತಿಯಾಗಿದೆ.
ಕೋಟಿ ಒಡೆಯ ಪಿಡಿಒ ವೀರೇಶ ಸಜ್ಜನ:
ತಮ್ಮ ಆಡಳಿತಾವಧಿಯಲ್ಲಿ ಸದರಿ ಪಿಡಿಒ ಸಜ್ಜನ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಮಾಡಿಕೊಂಡಿರುವ ಸಂಶಯಗಳು ಹುಟ್ಟಿಕೊಂಡಿವೆ. ಸದರಿ ಸಜ್ಜನ ಇವರು ಪಾರವಾಡ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 9 ವರ್ಷಗಳ ಕಾಲ ಪಿಡಿಒ ಆಗಿ ಕೆಲಸ ಮಾಡಿರುವುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.















