3 ವರ್ಷಗಳಲ್ಲಿ 40 ಸಾವಿರ ಕೋಟಿ ಹೂಡಿಕೆ: ಬ್ರಿಗೇಡ್‌ ಗ್ರೂಪ್‌ ಘೋಷಣೆ

WhatsApp
Telegram
Facebook
Twitter
LinkedIn

ಬೆಂಗಳೂರು: ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ 40 ವರ್ಷ ಪೂರೈಸಿದ  ಬ್ರಿಗೇಡ್‌ ಗ್ರೂಪ್‌ ಮುಂದಿನ ಮೂರು ವರ್ಷಗಳಲ್ಲಿ ದೇಶದ ವಿವಿಧ ನಗರಗಳಲ್ಲಿ ಸುಮಾರು 40 ಮಿಲಿಯನ್‌ ಚದರ ಅಡಿ ಪ್ರದೇಶವನ್ನು ಅಭಿವೃದ್ಧಿಪಡಿಸಲು 40 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಘೋಷಿಸಿದೆ. ಸಂಸ್ಥೆಯು ಮುಂದಿನ ಮೂರು ವರ್ಷಗಳಲ್ಲಿ ಕೈಗೆತ್ತಿಕೊಳ್ಳಲಿರುವ ವಿವಿಧ ಯೋಜನೆಗಳ ಮೂಲಕ ಸುಮಾರು 23,000 ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಕಳೆದ ನಾಲ್ಕು ದಶಕಗಳಲ್ಲಿ ಬ್ರಿಗೇಡ್‌ ಗ್ರೂಪ್‌ 10 ನಗರಗಳಲ್ಲಿ 600ಕ್ಕೂ ಹೆಚ್ಚು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಒಟ್ಟಾರೆ 110 ಮಿಲಿಯನ್‌ ಚದರ ಅಡಿಗೂ ಅಧಿಕ ಪ್ರದೇಶವನ್ನು ಅಭಿವೃದ್ಧಿಪಡಿಸಿದೆ. ವಸತಿ ಸಮುಚ್ಚಯಗಳು, ವಾಣಿಜ್ಯ ಕಚೇರಿಗಳು, ರೀಟೇಲ್‌ ತಾಣಗಳು ಹಾಗೂ ಹೋಟೆಲ್‌ಗಳನ್ನು ಒಳಗೊಂಡ ವೈವಿಧ್ಯಮಯ ರಿಯಲ್‌ ಎಸ್ಟೇಟ್‌ ಪೋರ್ಟ್‌ಫೋಲಿಯೊವನ್ನು ಸಂಸ್ಥೆ ಹೊಂದಿದೆ.  ಪ್ರಸ್ತುತ ಸಂಸ್ಥೆಯ ಸಕ್ರಿಯ ಲೀಸಿಂಗ್‌ ಪೋರ್ಟ್‌ಫೋಲಿಯೊ ಸುಮಾರು 10 ಮಿಲಿಯನ್‌ ಚದರ ಅಡಿಯಷ್ಟಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬ್ರಿಗೇಡ್ ಗ್ರೂಪ್ ಅಧ್ಯಕ್ಷ ಎಂ. ಆರ್ ಜೈಶಂಕರ್, ಮುಂದಿನ ಹಂತದ ಬೆಳವಣಿಗೆಯಲ್ಲಿ ವಸತಿ, ವಾಣಿಜ್ಯ, ರೀಟೇಲ್‌, ಆತಿಥ್ಯ ಮತ್ತು ಗೋದಾಮು (ವೇರ್‌ಹೌಸಿಂಗ್‌) ಸೇರಿದಂತೆ ಉದಯೋನ್ಮುಖ ವಲಯಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಲಾಗುವುದು. ದೊಡ್ಡ ಪ್ರಮಾಣದ ಹೂಡಿಕೆಗಳಿಗೆ ಆಂತರಿಕ ಸಂಪನ್ಮೂಲಗಳು, ಯೋಜನಾ ಮಟ್ಟದ ಹಣಕಾಸು ನೆರವು, ಕಾರ್ಯತಂತ್ರದ ಪಾಲುದಾರಿಕೆಗಳು ಸೇರಿದಂತೆ ವಿವಿಧ ಆರ್ಥಿಕ ಮಾರ್ಗಗಳನ್ನು ಬಳಸಿಕೊಳ್ಳಲಾಗುವುದು ಎಂದರು.

ಬ್ರಿಗೇಡ್‌ ಗ್ರೂಪ್‌ನ ವಾಣಿಜ್ಯ ಬೆಳವಣಿಗೆಯ ಪ್ರಮುಖ ಆಧಾರಸ್ತಂಭವಾಗಿರುವ ವರ್ಲ್ಡ್‌ ಟ್ರೇಡ್‌ ಸೆಂಟರ್‌ (ಡಬ್ಲ್ಯುಟಿಸಿ) ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಬೆಂಗಳೂರಿನ ದೇವನಹಳ್ಳಿ ಮತ್ತು ವೈಟ್‌ಫೀಲ್ಡ್‌, ತಮಿಳುನಾಡಿನ ಕೊಯಮತ್ತೂರು ನಗರಗಳಲ್ಲಿ ಮೂರು ಹೊಸ ವರ್ಲ್ಡ್‌ ಟ್ರೇಡ್‌ ಸೆಂಟರ್‌ಗಳನ್ನು ಸ್ಥಾಪಿಸಲು ಅಗತ್ಯ ಪರವಾನಗಿಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ. ಇದರೊಂದಿಗೆ ಬೆಂಗಳೂರಿನ ಹೊರಗೂ ‘ಒರಾಯನ್‌’ ಬ್ರ್ಯಾಂಡ್‌ ವಿಸ್ತರಿಸಲು ಸಂಸ್ಥೆ ಮುಂದಾಗಿದೆ. ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ನೂತನ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ಹಾಗೂ ಗ್ರಾಹಕ ಮಾರುಕಟ್ಟೆಗಳಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವ ಸಂಸ್ಥೆಯು 2045ರ ವೇಳೆಗೆ ‘ನೆಟ್‌ ಜೀರೋ’ ಇಂಗಾಲ ಹೊರಸೂಸುವಿಕೆ ಸಾಧಿಸುವ ಗುರಿ ಹೊಂದಿದೆ. ನವೀಕರಿಸಬಹುದಾದ ಇಂಧನ ಬಳಕೆ, ಜಲ ಸಂರಕ್ಷಣೆ, ಇಂಧನ ದಕ್ಷತೆ, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ನಿರ್ಮಾಣ ಪದ್ಧತಿಗಳ ಮೂಲಕ ಈ ಗುರಿ ಸಾಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪವಿತ್ರಾ ಶಂಕರ್ ಸೇರಿದಂತೆ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon