13ನೇ ಆವೃತಿಯ ಇಂಡಿಯನ್ ಅವಾರ್ಡ್ಸ್ ಸಮಾರಂಭ; ಅಸಾಧಾರಣ ಸಾಧನೆಗೈದ ಸಾಧರಿಗೆ ಗೌರವ

WhatsApp
Telegram
Facebook
Twitter
LinkedIn

ಬೆಂಗಳೂರು: ಸಮಾಜದ ವಿವಿಧ ರಂಗಗಳಲ್ಲಿ ಅಸಾಧಾರಣ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸುವ ವುಮನ್ಸ್ ಪ್ರೊಟೆಕ್ಷನ್ ಅಂಡ್ ಎಂಪವರ್ಮೆಂಟ್ ವರ್ಲ್ಡ್ ವೈಡ್ ಫೌಂಡೇಷನ್ ನ ಇಂಡಿಯನ್ ಅವಾರ್ಡ್ಸ್ ನ 13ನೇ ಆವೃತಿಯ ಪ್ರಶಸ್ತಿ ಪ್ರಧಾನ ಸಮಾರಂಭ ಗಾಂಧಿಭವನದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಆಯೋಜಕ ನಿವೃತ್ತ ಸರ್ಕಾರಿ ಉದ್ಯೋಗಿ ಮಹೇಂದ್ರ ಸಿಂಗ್ ಸಮಾರಂಭದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ, ವುಮನ್ಸ್ ಪ್ರೊಟೆಕ್ಷನ್ ಅಂಡ್ ಎಂಪವರ್ಮೆಂಟ್ ವರ್ಲ್ಡ್ ವೈಡ್ ಫೌಂಡೇಷನ್ ಸರ್ಕಾರೇತರ ಸಂಸ್ಥೆಗಳ ಒಕ್ಕೂಟವಾಗಿದ್ದು ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಸೇವೆ ಸಲ್ಲಿಸಿದ ಸಾಧಕರನ್ನು ಇಂಡಿಯನ್ ಅವಾರ್ಡ್ಸ್ ಮೂಲಕ ಮುನ್ನಲೆಗೆ ತರುತ್ತಿದೆ. ಮುಖ್ಯವಾಗಿ ಸಮಾರಂಭದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಒಟ್ಟು 183 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದರು.

ಕಾರ್ಯಕ್ರಮದ ನಿರೂಪಣೆ ವಹಿಸಿದ್ದ ಕನ್ನಡ ಉಪನ್ಯಾಸಕ ಗಿರೀಶ್ ಡಿ. ಅವರು ಮಾತನಾಡಿ, ನಮ್ಮ ಸಂಸ್ಥೆಯು ವರ್ಷಕ್ಕೆ ಎರಡು ಬಾರಿಯಂತೆ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಯೋಜಿಸುತ್ತಾ ಬಂದಿದ್ದು, ಪ್ರತಿ ಬಾರಿಯೂ ಸಾಧಕರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದಾರೆ. ಮಂಗಳೂರಿನಿಂದ ಆಗಮಿಸಿ ತಮ್ಮ ಸ್ವಂತ ದುಡಿಮೆಯ ಮೂಲಕ ಬಡವರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಸಮಾಜ ಸೇವಕರು ಹಾಗೂ ಮೈಸೂರಿನ ಲಯನ್ ಕುಮಾರ್ ಅವರಂತೆ ಅನಾಥ ಶವಗಳ ಸಂಸ್ಕಾರ ನಡೆಸುವ ಮಹನೀಯರ ಸೇವೆಯನ್ನು ಈ ಸಂದರ್ಭದಲ್ಲಿ ಗುರುತಿಸಲಾಗಿದೆ ಎಂದು ತಿಳಿಸಿದರು.

ಶೈಕ್ಷಣಿಕ ಹಾಗೂ ಆಪ್ತಸಲೋಚನಾ ಕ್ಷೇತ್ರದಲ್ಲಿ ಶ್ರೇಷ್ಠತಾ ಪ್ರಶಸ್ತಿ ಸ್ವೀಕರಿಸಿದ ಶಿಕ್ಷಣ ತಜ್ಞೆ ಅದಿತಿ ಗುಪ್ತಾ ಅವರು ಮಾತನಾಡಿ, ಶಿಕ್ಷಕಿ, ಎನರ್ಜಿ ಹೀಲರ್ ಹಾಗೂ ಲೇಖಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಹಾಗೂ ಪ್ರೇರಣಾದಾಯಿಕ ಕಥೆಗಳ ಎರಡು ಪುಸ್ತಕಗಳನ್ನು ರಚಿಸಿದ್ದೇನೆ. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ಮಕ್ಕಳು ತಮ್ಮಿಷ್ಟದ ಕ್ಷೇತ್ರದಲ್ಲಿ ಬೆಳೆಯಲು ಪೋಷಕರು ಸಂಪೂರ್ಣ ಬೆಂಬಲ ಹಾಗೂ ಸ್ವಾತಂತ್ರ್ಯ ನೀಡುವುದರ ಕುರಿತು ಸಾಕಷ್ಟು ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದು, ಇಂದಿನ ಗೌರವ ಮತ್ತಷ್ಟು ಕೆಲಸ ಮಾಡಲು ಪ್ರೇರೇಪಿಸಿದೆ ಎಂದರು.

ಕೃತ್ವಿಕ್ ಇಂಟರ್‌ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ಕವಿತಾ ಅವರು ಲೀಡರ್‌ಶಿಪ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ನನಗೆ 35 ವರ್ಷಗಳ ಸೇವಾ ಅನುಭವವಿದೆ. ಕೇವಲ ಶೇ. 90-95 ಅಂಕ ಗಳಿಸುವುದಷ್ಟೇ ಶಿಕ್ಷಣವಲ್ಲ; ಬದಲಾಗಿ ಮಕ್ಕಳು ಸಮಾಜದಲ್ಲಿ ಧೈರ್ಯವಾಗಿ ಜೀವಿಸುವುದನ್ನು ಕಲಿಯಬೇಕು ಎನ್ನುವುದನ್ನು ಪ್ರತಿಪಾದಿಸುತ್ತಾ ಬಂದಿದ್ದೇನೆ. ಪ್ರತಿಯೊಬ್ಬ ಮಗುವಿನಲ್ಲಿಯೂ ಇರುವ ಕ್ರೀಡೆ, ಕಲೆ ಹಾಗೂ ರಂಗಭೂಮಿಯಂತಹ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಮೂಲ ಕರ್ತವ್ಯವಾಗಿದೆ. ನನ್ನ ಶಾಲೆಗೆ ದೊರೆತ ಎಲ್‌ರಾಕ್ಸ್ ಬೆಸ್ಟ್ ಸ್ಕೂಲ್ ಪ್ರಶಸ್ತಿ ಹಾಗೂ ನನಗೆ ಲಭಿಸಿದ ಸೈವಾ ಲೀಡರ್‌ಶಿಪ್ ಪ್ರಶಸ್ತಿಗಳಿಗಿಂತಲೂ, ಸಂಸ್ಥೆಯಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಮಟ್ಟಕ್ಕೇರಿ ಗೌರವಕ್ಕೆ ಪಾತ್ರರಾಗಿರುವುದು ನನಗೆ ಸಿಕ್ಕ ದೊಡ್ಡ ಸನ್ಮಾನವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಓಂ ಶ್ರೀ ಡಿವೈನ್ ಸಂಸ್ಥೆಯ ಸಂಸ್ಥಾಪಕ ಡಾ. ಹರ್ಷವರ್ಧನ್ ಗುರೂಜಿ ಅವರು, ಸನಾತನ ಧರ್ಮದ ಪ್ರಾಚೀನ ವಿದ್ಯಾ ಜ್ಞಾನಗಳಾದ ಪಂಚಪಕ್ಷಿ ಶಾಸ್ತ್ರ, ಸ್ವರ ವಿಜ್ಞಾನ, ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರಗಳನ್ನು ಸಮಾಜದ ಪ್ರತಿಯೊಬ್ಬರಿಗೂ ಸರಳವಾಗಿ ತಲುಪಿಸುವ ಕಾರ್ಯವನ್ನು ನಮ್ಮ ಸಂಸ್ಥೆ ನಿರ್ವಹಿಸುತ್ತಿದೆ. ನಮ್ಮ ಪೂರ್ವಜರು ಹಾಗೂ ಋಷಿಮುನಿಗಳು ನೀಡಿದ ಸಿದ್ಧಾಂತಗಳನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಕೊರೋನಾ ಮಹಾಮಾರಿಯ ನಂತರ ಯುವಜನತೆಯಲ್ಲಿ ಯೋಗ ಹಾಗೂ ಧಾರ್ಮಿಕ ಆಚರಣೆಗಳತ್ತ ಆಸಕ್ತಿ ಹೆಚ್ಚಾಗುತ್ತಿರುವುದು ಶುಭ ಸೂಚಕವಾಗಿದೆ. ಇನ್ನು ನನಗೆ ದೊರೆತ ಕರ್ನಾಟಕ ಗೌರವ ಸಮ್ಮಾನ್ ಪ್ರಶಸ್ತಿಯು ನನಗಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಹಾಗೂ ಮಾರ್ಗದರ್ಶಕರ ಶ್ರಮಕ್ಕೆ ಸಿಕ್ಕ ಗೌರವವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ಚಿಂತಾಮಣಿಯ ಸುಮಾ ಅವರು, ಭಜನಾ ಮಂಡಳಿ, ದೇವಸ್ಥಾನಗಳು ಹಾಗೂ ಕರೋಕೆ ಕಾರ್ಯಕ್ರಮಗಳ ಮೂಲಕ ದೇವನಾಮ ಮತ್ತು ಗೀತೆಗಳನ್ನು ಹಾಡುತ್ತ ಬಂದಿರುವ ನನ್ನ ಪ್ರತಿಭೆಯನ್ನು ಗುರುತಿಸಿ ಗೌರವವಿಸಿರುವುದಕ್ಕೆ ವರ್ಲ್ಡ್ ವೈಡ್ ಫೌಂಡೇಶನ್ ಪ್ರಶಸ್ತಿಯನ್ನು ನೀಡಿದೆ. ಸಾರ್ವಜನಿಕ ವೇದಿಕೆಯಲ್ಲಿ ಸಿಕ್ಕ  ಮೊದಲ ಅಧಿಕೃತ ಪ್ರಶಸ್ತಿಯು ನನ್ನ ಮುಂದಿನ ಸಂಗೀತ ಪಯಣಕ್ಕೆ ಮತ್ತಷ್ಟು ಸ್ಪೂರ್ತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಪತ್ರಕರ್ತ ಬಿ.ಡಿ. ರವಿಕುಮಾರ್ ಅವರು ತಮ್ಮ ಸಮಾಜಮುಖಿ ಕಾರ್ಯಗಳ ಕುರಿತು ಮಾತನಾಡಿ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಮೂಲಕ ಆಗುಂಬೆಯ ಪ್ರಸಿದ್ಧ ಚಂಪಕ ಸರಸ ಜೀರ್ಣೋದ್ಧಾರಕ್ಕೆ ಶ್ರಮಿಸಿ ಸಮಾಜಮುಖಿ ಬದಲಾವಣೆಗೆ ನಾಂದಿ ಹಾಡಲಾಗಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ತಲುಪಿಸುವ ಮೂಲಕ ಮಾನವೀಯ ಸೇವೆ ಒದಗಿಸಲಾಗಿದೆ. ಸಂಸ್ಥೆಯ  ಸಾಮಾಜಿಕ ಕಳಕಳಿಯನ್ನು ಗುರುತಿಸಿ ಗೌರವಿಸಿರುವುದು ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon