ಬೆಂಗಳೂರು: ಶುಕ್ಲಾ ಸ್ಕೂಲ್ ಆಪ್ ಆರ್ಟ್ಸ್ ವತಿಯಿಂದ ವಿದ್ವಾನ್ ರಾಜೇಶ್ ಟಿ.ಕೆ.ಅವರ ಶಿಷ್ಯೆ ಕುಮಾರಿ ಅದ್ವಿಕ ಅವರ ಭರತನಾಟ್ಯ ರಂಗಪ್ರವೇಶ ಮಲ್ಲೇಶ್ವರದ ತೆಲುಗು ವಿಜ್ಞಾನ ಸಮಿತಿಯ ಕೃಷ್ಣ ದೇವರಾಯ ಸಭಾಂಗಣದಲ್ಲಿ ನಡೆಯಿತು.
ಕಳೆದ ಕೆಲ ವರ್ಷಗಳಿಂದ ಶುಕ್ಲಾ ಸ್ಕೂಲ್ ಆಪ್ ಆರ್ಟ್ ನಲ್ಲಿ ಅಭ್ಯಾಸ ನಡೆಸುತ್ತಿರುವ ಅದ್ವಿಕ ರಂಗ ಪ್ರವೇಶದಲ್ಲಿ ವಿವಿಧ ರಾಗ ತಾಳಗಳಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನಸೂರೆಗೊಂಡರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತೆ ರಾಜ ರಾಜೇಶ್ವರಿ ಕಲಾನಿಕೇತನ ನಿರ್ದೇಶಕಿ ಡಾ.ವೀಣಾ ಮೂರ್ತಿ ವಿಜಯ್, ಕಲಾರಂಗ ಸ್ಕೂಲ್ ಆಪ್ ಡ್ಯಾನ್ಸ್ ನ ಕಲಾ ನಿರ್ದೇಶಕಿ ರಾಧಿಕಾ ರಾಮಾನುಜನ್, ಶ್ರೀ ರುದ್ರಾಕ್ಷ ನಾಟ್ಯಾಲಯದ ಕಲಾ ನಿರ್ದೇಶಕಿ ಪದ್ಮಿನಿ ಎಸ್.ಉಪಾಧ್ಯಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅದ್ವಿಕ ಅವರ ಭರತ ನಾಟ್ಯ ರಂಗಪ್ರವೇಶಕ್ಕೆ ಸಾಕ್ಷಿಯಾದರು.
ಪ್ರಸ್ತುತ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಎಂ.ಎ.ಪದವಿ ಒದುತ್ತಿರುವ ಅದ್ವಿಕ ವಿವಿಧ ಸಾಂಸ್ಕೃತಿಕ ಉತ್ಸವಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದು ಪ್ರಶಸ್ತಿ ಪಡೆದಿದ್ದಾಳೆ. ಶುಕ್ಲಾ ಸ್ಕೂಲ್ ಆಪ್ ಆರ್ಟ್ ನ ನಿರ್ದೇಶಕ, ಗುರು ರಾಜೇಶ್, ವಿದೂಷಿ ರಾಧಿಕಾ ರಾಮಾನುಜನ್ ಅವರಿಂದ ತರಬೇತಿ ಪಡೆದು ಉತ್ತಮ ಶಿಷ್ಯೆಯಾಗಿ ಹೊರಹೊಮ್ಮಿದ್ದಾರೆ.
ವೇದಿಕೆ ಕಾರ್ಯಕ್ರಮದಲ್ಲಿ ವಿದುಷಿ ಪದ್ಮಿನಿ ಎಸ್ ಉಪಾಧ್ಯಾಯ ಅವರು ಮಾತನಾಡಿ, ಕಲಾವಿದ ರಾಜೇಶ್ ಅವರು ಛಾಯಾಗ್ರಹಣ, ವರ್ಣಚಿತ್ರಕಲೆ ಹಾಗೂ ಅತ್ಯುತ್ತಮ ನೃತ್ಯ ಕೌಶಲ್ಯ ಶ್ಲಾಘನೀಯವಾಗಿದೆ. ಕರ್ನಾಟಕದಲ್ಲಿ ಅತ್ಯುತ್ತಮವಾಗಿ ನೃತ್ಯ ಪ್ರದರ್ಶಿಸುವ ಶ್ರೇಷ್ಠ ಪುರುಷ ಕಲಾವಿದರಲ್ಲಿ ರಾಜೇಶ್ ಪ್ರಮುಖರಾಗಿದ್ದಾರೆ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಹಿರಿಯ ಮೃದಂಗ ವಾದಕ ಕರ್ನಾಟಕ ಕಲಾಶ್ರೀ ಗುರು ವಿದ್ವಾನ್ ಎಸ್.ವಿ ಗಿರಿಧರ ಹಾಗೂ ಮಧುರ ಗಾಯನ ನೀಡಿದ ಗಾಯಕರು ಸೇರಿದಂತೆ ಪ್ರತಿಯೊಬ್ಬ ಸಂಗೀತಗಾರರ ಸಂಯೋಜನೆಯು ಅತ್ಯಂತ ಸಾಮರಸ್ಯದಿಂದ ಕೂಡಿದೆ. ಈ ದಿವ್ಯ ನೃತ್ಯ ಪ್ರದರ್ಶನ ಮತ್ತು ಸಂಗೀತ ಶ್ರೀ ದಕ್ಷಿಣಾಮೂರ್ತಿಯ ಮೌನ ಹಾಗೂ ಶ್ರೀ ಕಂಚಿ ಕಾಮಾಕ್ಷಿಯ ದೈವಿಕ ಛಾಯೆಯನ್ನು ನೆನಪಿಸಿತು. ರಾಜೇಶ್ ಅವರಂತಹ ಗುರುವನ್ನು ಪಡೆದ ಅದ್ವಿಕಾ ಮತ್ತು ಅದ್ವಿಕಾ ಅವರಂತಹ ಶ್ರದ್ಧಾವಂತ ಶಿಷ್ಯೆಯನ್ನು ಪಡೆದ ರಾಜೇಶ್ ಇಬ್ಬರೂ ಧನ್ಯರು ಎಂದು ಬಣ್ಣಿಸಿದರು.
ವಿದುಷಿ ರಾಧಿಕಾ ರಾಮಾನುಜನ್ ಅವರು ಮಾತನಾಡಿ, ಗುರುಕೃಪೆ ಹಾಗೂ ಶಿಷ್ಯೆಯ ಮೇಲಿನ ಅಭಿಮಾನವೇ ಈ ಕಾರ್ಯಕ್ರಮದ ಯಶಸ್ಸಿಗೆ ಮೂಲ ಪ್ರೇರಣೆಯಾಗಿದೆ. ಸಾಂಪ್ರದಾಯಿಕ ನೃತ್ಯ ಶಿಕ್ಷಣ ರಾಜೇಶ್ ಅವರಿಗೆ ನನ್ನಿಂದ ತದನಂತರ ರಾಜೇಶ್ ಅವರಿಂದ ಅದ್ವಿಕಾ ಅವರಿಗೆ ಹರಿದು ಬಂದಿರುವುದು ಗುರು-ಶಿಷ್ಯ ಪರಂಪರೆಯ ಹರಿವಿನ ಸಾಕ್ಷಿಯಾಗಿದೆ. ಅದ್ವಿಕಾ ಅವರು ತಮ್ಮ ಸ್ನಾತಕೋತ್ತರ ವ್ಯಾಸಂಗ ಹಾಗೂ ತರಗತಿಗಳ ಒತ್ತಡದ ನಡುವೆಯೂ ರಂಗದ ಮೇಲೆ ಅತ್ಯಂತ ನಿಷ್ಠೆಯಿಂದ ನೃತ್ಯ ಪ್ರದರ್ಶಿಸಿದ್ದಾರೆ ಎಂದು ಶ್ಲಾಘಿಸಿದರು.















