ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ದಸರಾ ರಜೆಯನ್ನು ನಗರದ ಕೆಲವು ಖಾಸಗಿ ಶಾಲೆಗಳು ನೀಡುತ್ತಿಲ್ಲ. ಸರ್ಕಾರದ ರಜೆ ಆದೇಶವನ್ನು ಎಲ್ಲ ಶಾಲೆಗಳು ಕಡ್ಡಾಯವಾಗಿ ಪಾಲಿಸುವಂತೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮಸೇನೆ ಆಗ್ರಹಿಸಿದೆ.
ಈ ಕುರಿತು ಶ್ರೀರಾಮ ಸೇನಾ ಬೆಂಗಳೂರು ನಗರ ಘಟಕದ ಪದಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕೆಲವು ಖಾಸಗಿ ಶಾಲೆಗಳು ಪರೀಕ್ಷೆಗಳ ನೆಪದಲ್ಲಿ ವಿದ್ಯಾರ್ಥಿಗಳಿಗೆ ದಸರಾ ರಜೆ ನೀಡದೆ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸುತ್ತಿವೆ ಎಂಬ ದೂರುಗಳು ಪೋಷಕರಿಂದ ಬಂದಿವೆ. ಸರ್ಕಾರ ನಿಗದಿಪಡಿಸಿರುವ ರಜೆಯನ್ನು ಎಲ್ಲ ಶಾಲೆಗಳಲ್ಲೂ ಜಾರಿಗೊಳಿಸುವಂತೆ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ದೂರುಗಳ ಕುರಿತು ಮಾತನಾಡಿರುವ ಶ್ರೀರಾಮ ಸೇನಾ ರಾಜ್ಯ ಕಾರ್ಯಾಧ್ಯಕ್ಷ (ದಕ್ಷಿಣ ಪ್ರಾಂತ) ಸುಂದ್ರೇಶ್ ಗೌಡ ನರ್ಗಲ್, ಸರ್ಕಾರದ ರಜೆ ಆದೇಶ ಎಲ್ಲ ಶಾಲೆಗಳಿಗೂ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸಿ ರಜೆ ನೀಡದೆ ತರಗತಿ ಅಥವಾ ಪರೀಕ್ಷೆ ನಡೆಸುವ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿ ವರ್ಷ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಿಸಿ ಸುತ್ತೋಲೆ ಹೊರಡಿಸುತ್ತಾ ಬಂದಿದೆ. ಆದರೆ ಕೆಲವು ಖಾಸಗಿ ಕ್ರಿಶ್ಚಿಯನ್ ಮಷೀನರಿ ಶಾಲೆಗಳು ಪರೀಕ್ಷೆಗಳ ನೆಪದಲ್ಲಿ ರಜೆ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಕ್ರಿಶ್ಚಿಯನ್ ಮಿಷನರಿ ಶಾಲೆಗಳು ದಸರಾ ಸಂದರ್ಭದಲ್ಲಿ ಬೇಕಂತಲೇ ಪರೀಕ್ಷೆಯನ್ನು ನಡೆಸುತ್ತಿವೆ. ಹಿಂದೂ ಧರ್ಮದ ಹಬ್ಬ, ನಾಡಿನ ಹೆಮ್ಮೆಯ ಸಾಂಸ್ಕೃತಿಕ ಹಬ್ಬವನ್ನು ದಿಕ್ಕರಿಸುವ ಈ ನಡೆಯ ವಿರುದ್ಧ ಉಗ್ರ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಸುಂದ್ರೇಶ್ ಗೌಡ ನರ್ಗಲ್ ಎಚ್ಚರಿಕೆ ನೀಡಿದ್ದಾರೆ.
ಮನವಿ ಸಲ್ಲಿಕೆಯ ವೇಳೆ ರಾಜ್ಯ ಸಾಮಾಜಿಕ ಜಾಲತಾಣ ಪ್ರಮುಖ ಮೋಹನ್ ಕುಮಾರ್, ಬೆಂಗಳೂರು ನಗರ ಉಪಾಧ್ಯಕ್ಷ ಸತೀಶ್ ಕುಮಾರ್, ನಗರ ಕಾರ್ಯದರ್ಶಿ ಗಿರೀಶ್ ಎಂ.ಬಿ., ಬೆಂಗಳೂರು ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ವಿಜಯ್, ಉಪಾಧ್ಯಕ್ಷ ಶಶಿಕುಮಾರ್ ಹಾಜರಿದ್ದರು.















