ವಿದ್ಯಾರ್ಥಿಗಳು ಕಾನೂನಿನ ಮೂಲತತ್ವವನ್ನು ಅರ್ಥಮಾಡಿಕೊಳ್ಳಿ: ಉಪಲೋಕಾಯುಕ್ತ ಫಣೀಂದ್ರ

WhatsApp
Telegram
Facebook
Twitter
LinkedIn

ಬೆಂಗಳೂರು: ಕಾನೂನು ಕ್ಷೇತ್ರವು ಇಂದು ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ವಿದ್ಯಾರ್ಥಿಗಳು ಆರಂಭದಿಂದಲೇ ಕಾನೂನಿನ ಮೂಲತತ್ವಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ತಿಳಿಸಿದರು.

ಬಿಎಂಎಸ್ ಕಾಲೇಜ್ ಆಫ್ ಲಾ ಕಾಲೇಜಿನಲ್ಲಿ ನಡೆದ 2026-27ನೇ ಸಾಲಿನ ಸ್ವಾಯತ್ತ ಬ್ಯಾಚ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾನೂನು ವಿದ್ಯಾರ್ಥಿಗಳು ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಪ್ರಕರಣದ ಎಲ್ಲಾ ಕಡೆಯ ವಾದಗಳನ್ನು ಆಲಿಸುವುದು ನ್ಯಾಯದ ಪ್ರಮುಖವಾಗಿದೆ. ಪ್ರಕರಣವನ್ನು ಪರಿಶೀಲಿಸುವಾಗ ದೂರುದಾರರ ವಾದ, ಆರೋಪ ಎದುರಿಸುವವರ ವಾದ ಹಾಗೂ ಸಮಾಜದ ಮೇಲಿನ ಅದರ ಪರಿಣಾಮ ಎಂಬ ಮೂರು ಆಯಾಮಗಳಲ್ಲಿ ವಿಶ್ಲೇಷಿಸಬೇಕು ಎಂದರು.

ಕಾನೂನು ಎಂದರೆ ನ್ಯಾಯದ ಅನುಷ್ಠಾನವಾಗಿದೆ. ನ್ಯಾಯವೆಂದರೆ ಕೇವಲ ಕಾನೂನಿನ ಅನ್ವಯವಲ್ಲ, ಅದರಲ್ಲಿ ನೈತಿಕತೆ, ಸಮಾನತೆ, ನ್ಯಾಯಸಮ್ಮತತೆ ಮತ್ತು ಸದುದ್ದೇಶಗಳೂ ಅಡಕವಾಗಿವೆ. ಕಾನೂನನ್ನು ಉಲ್ಲಂಘಿಸದೆ, ಅದರ ಚೌಕಟ್ಟಿನೊಳಗೆ ನ್ಯಾಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಮುಖ್ಯವಾಗಿದೆ. ಕಾನೂನು ವೃತ್ತಿಯನ್ನು ಶ್ರೇಷ್ಠ ವೃತ್ತಿ ಎಂದು ಕರೆಯಲು ಕಾರಣವಿದೆ. ವಕೀಲರು ಜನರ ಹಕ್ಕುಗಳು, ಮಾನವ ಹಕ್ಕುಗಳು ಹಾಗೂ ಸಂವಿಧಾನದ ಆಶಯಗಳನ್ನು ರಕ್ಷಿಸುವ ಹೊಣೆಗಾರಿಕೆ ಹೊಂದಿದ್ದಾರೆ. ಹೀಗಾಗಿ ಕಾನೂನು ವಿದ್ಯಾರ್ಥಿಗಳು ನ್ಯಾಯ, ಸಮಾನತೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿರಬೇಕು ಎಂದು ಕಿವಿಮಾತು ಹೇಳಿದರು.

ಭವಿಷ್ಯದಲ್ಲಿ ನ್ಯಾಯಾಧೀಶರಾಗಲಿ, ವಕೀಲರಾಗಲಿ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿ, ನ್ಯಾಯದ ಆಡಳಿತಕ್ಕೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯದ ಕನಸು ಕೇವಲ ದೇಶದ ವಿಮೋಚನೆಗೆ ಸೀಮಿತವಾಗಿರಲಿಲ್ಲ. ಶೋಷಣೆ, ದಮನ ಮತ್ತು ತಾರತಮ್ಯದಿಂದ ಭಾರತೀಯರು ಮುಕ್ತರಾಗಿ, ಸಮಾನ ಅವಕಾಶಗಳೊಂದಿಗೆ ಗೌರವಯುತ ಜೀವನ ನಡೆಸಬೇಕು ಎಂಬ ಆಶಯವೂ ಅದರಲ್ಲಿತ್ತು. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಕಾನೂನು ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಹಕ್ಕು ಇದ್ದಲ್ಲಿ ಅದನ್ನು ಜಾರಿಗೊಳಿಸಲು ಸೂಕ್ತ ಪರಿಹಾರವೂ ಇರಬೇಕು. ಹಕ್ಕುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೂಲಭೂತ ಕಾನೂನು, ಕಾರ್ಯವಿಧಾನಾತ್ಮಕ ಕಾನೂನು ಮತ್ತು ಲಭ್ಯವಿರುವ ಪರಿಹಾರಗಳ ಕುರಿತು ವಿದ್ಯಾರ್ಥಿಗಳು ಸ್ಪಷ್ಟ ಅರಿವು ಹೊಂದಿರಬೇಕು. ಜನರಿಗೆ ಗೌರವಯುತ ಜೀವನ ಒದಗಿಸುವುದು ಸರ್ಕಾರಗಳ ಜವಾಬ್ದಾರಿಯಾಗಿದ್ದು, ಸಂವಿಧಾನದ ನಿರ್ದೇಶಕ ತತ್ವಗಳು ಈ ನಿಟ್ಟಿನಲ್ಲಿ ಮಹತ್ವ ಪಡೆದಿವೆ ಎಂದು ಕೆ.ಎನ್. ಫಣೀಂದ್ರ ಹೇಳಿದರು.

ಬಿಎಂಎಸ್ ಎಜುಕೇಷನಲ್ ಟ್ರಸ್ಟ್‌ನ ಟ್ರಸ್ಟಿ ಅಬಿರಾಮ್ ಶರ್ಮಾ ಮಾತನಾಡಿ, ಸಂಸ್ಥೆಯ 63 ವರ್ಷದ ಶೈಕ್ಷಣಿಕ ಪಯಣದಲ್ಲಿ ಸ್ವಾಯತ್ತ ಸ್ಥಾನಮಾನ ದೊರೆತಿರುವುದು ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು. ಈ ವೇಳೆ ಕಾನೂನು ಪದವಿ ಪ್ರವೇಶ ಅರ್ಹತಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ವತಿಯಿಂದ ವಿದ್ಯಾರ್ಥಿ ವೇತನ ಪ್ರಮಾಣಪತ್ರ ಹಾಗೂ ನಗದು ಬಹುಮಾನಗಳನ್ನು ನೀಡಲಾಯಿತು.

ಈ ವೇಳೆ ಸಂಸ್ಥೆಯ ಆಡಳಿತ ಅಧಿಕಾರಿ ರಾಘವನ್, ಕಾಲೇಜಿನ ಪ್ರಾಂಶುಪಾಲೆ ಪ್ರೊ. ಅನಿತಾ ಎಫ್.ಎನ್. ಡಿಸೋಜಾ, ಕಾನೂನು ವಿಭಾಗದ ಮುಖ್ಯಸ್ಥ ಡಾ. ಸತೀಶ್ ಕೆ.ಎಸ್, ಪ್ರಿ-ಲಾ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ ಪಿ, ಕಾರ್ಯಕ್ರಮದ ಸಂಯೋಜಕಿ ವಾಸವಿ ಎಲ್.ಎಸ್, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon