ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನಲ್ಲಿ ಎಂ-ಯುಕ್ತಿ ಕಾರ್ಯಕ್ರಮ: ಡಾ. ಗೀತಾ ನಾರಾಯಣನ್

WhatsApp
Telegram
Facebook
Twitter
LinkedIn

ಬೆಂಗಳೂರು: ಎಂ ಲ್ಯಾಕ್ ಹಾಗೂ ಡರ್ಬಿ ಫೌಂಡೇಶನ್ ಸಹಯೋಗದಲ್ಲಿ ಅ.8 ಮತ್ತು 9ರಂದು ನಗರದ ಮಲ್ಲೇಶ್ವರದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಆವರಣದಲ್ಲಿ ಎಂ-ಯುಕ್ತಿ 2026 ರಾಷ್ಟ್ರೀಯ 24 ಗಂಟೆಗಳ ನವೀನತೆ ಹಾಗೂ ಸಾಮಾಜಿಕ ಪರಿಣಾಮದ ಸವಾಲಿನ ಕುರಿತು ಸಮಾಲೋಚನೆ ಸ್ಪರ್ಧೆ ನಡೆಯಲಿದೆ ಎಂದು ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಟ್ರಸ್ಟಿ ಡಾ. ಗೀತಾ ನಾರಾಯಣನ್ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವತಿಯರು ತಮ್ಮ ಆಲೋಚನೆಗಳ ಮೂಲಕ ವೈಯಕ್ತಿಕ ಬದುಕು, ಕುಟುಂಬ ಹಾಗೂ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ. ದೇಶದ ವಿವಿಧ ಭಾಗಗಳ ಮಹಿಳಾ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಆಲೋಚನೆಗಳ ರೂಪದಲ್ಲಿ ವ್ಯಕ್ತಪಡಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಯುವತಿಯರು ತಮ್ಮ ಬದುಕನ್ನು ಉತ್ತಮಪಡಿಸುವುದರ ಜತೆಗೆ ಕುಟುಂಬ ಮತ್ತು ಸಮುದಾಯಕ್ಕೆ ಕೊಡುಗೆ ನೀಡಲು ಮುಂದಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಎಂ- ಯುಕ್ತಿ 2026ಕ್ಕೆ ದೇಶದ 11 ರಾಜ್ಯಗಳಿಂದ 200ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಮಾರ್ಗದರ್ಶನ ಮತ್ತು ಪರಿಶೀಲನೆಯ ಬಳಿಕ 62 ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಹಾಗೂ ಸಬಲೀಕರಣ, ಪರಿಸರ ಮತ್ತು ಸುಸ್ಥಿರತೆ, ಎಲ್ಲರನ್ನೂ ಒಳಗೊಂಡ ತಂತ್ರಜ್ಞಾನ ಎಂಬ ಮೂರು ಪ್ರಮುಖ ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದೆ. 24 ಗಂಟೆಗಳ ಅಂತಿಮ ಸವಾಲಿನಲ್ಲಿ ಆಯ್ಕೆಯಾದ ತಂಡಗಳು ತಜ್ಞರ ಮಾರ್ಗದರ್ಶನದಲ್ಲಿ ತಮ್ಮ ಆಲೋಚನೆಗಳನ್ನು ಮಾದರಿ ರೂಪಕ್ಕೆ ಅಭಿವೃದ್ಧಿಪಡಿಸಿ, ಕಾರ್ಯಸಾಧ್ಯತೆ, ಉದ್ಯಮಶೀಲತೆ ಹಾಗೂ ಸಾಮಾಜಿಕ ಪರಿಣಾಮದ ಕುರಿತು ಮಂಡಿಸಲಿವೆ. ಒಟ್ಟು 1.50 ಲಕ್ಷ ಬಹುಮಾನ ನೀಡಲಾಗುತ್ತಿದ್ದು, ವಿಜೇತ ತಂಡಗಳಿಗೆ ಮುಂದಿನ ಹಂತದಲ್ಲಿ ಮಾರ್ಗದರ್ಶನ, ಮಾದರಿ ಅಭಿವೃದ್ಧಿ ಹಾಗೂ ಉದ್ಯಮಶೀಲತಾ ಬೆಂಬಲವೂ ದೊರೆಯಲಿದೆ ಎಂದು ಡಾ. ಗೀತಾ ನಾರಾಯಣನ್ ಮಾಹಿತಿ ನೀಡಿದರು.

ಡರ್ಬಿ ಫೌಂಡೇಶನ್‌ನ ಸಿಇಒ ಸತ್ಯನಾರಾಯಣ ಬಿ.ವಿ ಮಾತನಾಡಿ, ಮಹಿಳಾ ವಿದ್ಯಾರ್ಥಿಗಳ ನವೀನ ಆಲೋಚನೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜು ಹಾಗೂ ಡರ್ಬಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿರುವ ಎಂ-ಯುಕ್ತಿ 2026 ರಾಷ್ಟ್ರೀಯ ಮಟ್ಟದ ಐಡಿಯಾಥಾನ್‌ಗೆ ದೇಶದ ವಿವಿಧ ರಾಜ್ಯಗಳಿಂದ ಅರ್ಜಿಗಳು ಬಂದಿದ್ದು, ಅಂತಿಮ ಮುತ್ತಿನ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಮಹಿಳಾ ಉದ್ಯಮಶೀಲತೆಗೆ ಹಲವು ಕಾರ್ಯಕ್ರಮಗಳಿದ್ದರೂ, ಮಹಿಳೆಯರಿಗಾಗಿ ಪ್ರತ್ಯೇಕವಾಗಿ ರಾಷ್ಟ್ರೀಯ ಮಟ್ಟದ ಐಡಿಯಾಥಾನ್ ನಡೆಸುವ ಉದ್ದೇಶದಿಂದ ಆ.15 ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ನಿರೀಕ್ಷೆಗಿಂತ ಹೆಚ್ಚಿನ ಪ್ರತಿಕ್ರಿಯೆ ದೊರೆತಿದ್ದು, ಕರ್ನಾಟಕದಿಂದ 98 ತಂಡಗಳು ಅರ್ಜಿ ಸಲ್ಲಿಸಿದ್ದು, ಅವುಗಳಲ್ಲಿ 42 ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಆಯ್ಕೆಯಾದ ತಂಡಗಳಿಗೆ ಒಂದು ತಿಂಗಳ ಕಾಲ ಆನ್‌ಲೈನ್ ಮಾರ್ಗದರ್ಶನ ನೀಡಲಾಗಿದ್ದು, ಆಲೋಚನೆ ರೂಪಿಸುವಿಕೆ, ವ್ಯವಹಾರ ಮಾದರಿ, ಪಿಚ್ ಡೆಕ್ ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರಿಂದ ತರಬೇತಿ ನೀಡಲಾಗಿದೆ ಎಂದರು.

ಈ ವೇಳೆ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಕಾಲೇಜಿನ ನಿರ್ದೇಶಕಿ ಡಾ.ಶರ್ಮಿಷ್ಠಾ ದತ್ತಾ, ಪ್ರಾಚಾರ್ಯ ಡಾ. ನಂದಾ ಕುಲಕರ್ಣಿ, ಉಪ ಪ್ರಾಚಾರ್ಯ ಪ್ರೊ. ಅನ್ನದಾನೇಶ ಬಿ.ಎ, ಆಡಳಿತಾಧಿಕಾರಿ ಡಾ ಮಂಜುಳಾ ಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon