ಬೆಂಗಳೂರು: ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯ ಸಹಯೋಗದಲ್ಲಿ ಅ.22 ರಿಂದ 24 ರವರೆಗೆ ದೆಹಲಿಯ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಮಾರ್ಟ್‌ನಲ್ಲಿ ನಾಲ್ಕನೇ ಆವೃತ್ತಿ ನವೀಕರಿಸಬಹುದಾದ ವಿದ್ಯುತ್ ಶೇಖರಣೆ ಬ್ಯಾಟರಿಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಇನ್‌ಫಾರ್ಮಾ ಮಾರ್ಕೆಟ್ಸ್ ಇಂಡಿಯಾ ಗ್ರೂಪ್‌ನ ಹಿರಿಯ ನಿರ್ದೇಶಕ ರಜನೀಶ್ ಕತ್ತರ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನವೀಕರಿಸಬಹುದಾದ ಅತ್ಯಾಧುನಿಕ ಬ್ಯಾಟರಿಗಳ ಪ್ರದರ್ಶನ ಏರ್ಪಡಿಸಲಾಗಿದೆ. ಕೊರಿಯಾ, ಜಪಾನ್, ಚೀನಾ ಸೇರಿದಂತೆ ವಿವಿಧ ದೇಶಗಳ 300 ಕ್ಕೂ ಹೆಚ್ಚು ಪ್ರದರ್ಶಕರು 400 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಪ್ರದರ್ಶಿಸಲಿದ್ದಾರೆ. ಈ ಮೇಳವು ಹೊಸ ತಂತ್ರಜ್ಞಾನ, ನಾವೀನ್ಯತೆ, ನೀತಿಗಳ ಕುರಿತು ಚರ್ಚೆಗೆ ಉತ್ತಮ ವೇದಿಕೆಯಾಗಲಿದೆ ಎಂದರು.
ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ. ಪ್ರಸ್ತುತ ಭಾರತ ಬೃಹತ್ ಜಲವಿದ್ಯುತ್ ಸೇರಿದಂತೆ ಸುಮಾರು 290 ರಿಂದ 295 ಗಿಗಾ ವ್ಯಾಟ್‌ನಷ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿದೆ. ಈ ರೀತಿ ಉತ್ಪಾದನೆಯಾಗುವ ವಿದ್ಯುತನ್ನು ಗ್ರಿಡ್‌ಗಳಿಗೆ ಸಂಯೋಜಿಸುವುದು ಇಂದಿನ ಪ್ರಮುಖ ಸವಾಲಾಗಿದೆ. ಕೇಂದ್ರ ಸರ್ಕಾರ 2031-32 ರ ವೇಳೆಗೆ 236 ಗಿಗಾ ವ್ಯಾಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ತಲುಪುವ ಬೃಹತ್ ಗುರಿ ಹೊಂದಿದೆ. ಇದಕ್ಕಾಗಿ ಬಜೆಟ್‌ನಲ್ಲಿ 1.86 ಲಕ್ಷ ಕೋಟಿ ರೂ. ಹಂಚಿಕೆ ಮಾಡಿದ್ದು, ಇತ್ತೀಚೆಗೆ 50 ಗಿ.ವ್ಯಾ. ಬ್ಯಾಟರಿ ಎನರ್ಜಿ ಸ್ಟೋರೇಜ್ ಗಾಗಿ 50,000 ಸಾವಿರ ಕೋಟಿ ಪ್ರೋತ್ಸಾಹಕ ಯೋಜನೆ ಘೋಷಿಸಿದೆ ಎಂದು ಮಾಹಿತಿ ನೀಡಿದರು.
ಎಫ್‌ಕೆಸಿಸಿಐ ನಿರ್ದೇಶಕ ರಮೇಶ್ ಶಿವಣ್ಣ ಮಾತನಾಡಿ, ಸೌರ ಮತ್ತು ಪವನ ಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಕಷ್ಟಕರವಾಗಿದ್ದು ಗ್ರಿಡ್ ನಿರ್ವಹಣೆಗೆ ಬ್ಯಾಟರಿ ಸ್ಟೋರೇಜ್ ಅತ್ಯಗತ್ಯವಾಗಿದೆ. ಹಳೆಯ ಇಂಧನ ವಾಹನಗಳ ಬದಲಿಗೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚುತ್ತಿದ್ದು, ಉತ್ತಮ ಬ್ಯಾಟರಿ ಮೂಲಸೌಕರ್ಯದ ಅಗತ್ಯವಿದೆ ಎಂದರು.
ದೇಶದಲ್ಲೇ ಪ್ರಥಮವಾಗಿ ಕರ್ನಾಟಕ ಇವಿ ನೀತಿ ಹಾಗೂ ನವೀಕರಿಸಬಹುದಾದ ಇಂಧನ ನೀತಿ ಜಾರಿಗೆ ತಂದಿದೆ. 2026ರ ವೇಳೆಗೆ ರಾಜ್ಯದಲ್ಲಿ 6,805 ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳಿದ್ದು ದೇಶದ ರಾಜ್ಯಗಳಲ್ಲಿಎರಡನೇ ಸ್ಥಾನದಲ್ಲಿದೆ. ಪಿಎಂ-ಇ ಡ್ರೈವ್ ಯೋಜನೆಯಡಿ ರಾಜ್ಯಕ್ಕೆ ಹೆಚ್ಚುವರಿಯಾಗಿ 1,571 ಇವಿ ಚಾರ್ಜರ್‌ಗಳಿಗೆ ಅನುಮೋದನೆ ನೀಡಲಾಗಿದೆ. ಪ್ರಸ್ತುತ ಬೆಂಗಳೂರು ತಂತ್ರಜ್ಞಾನ ಕೇಂದ್ರವಾಗಿದ್ದು ಇವಿ ವಲಯಕ್ಕೆ ಅಗತ್ಯವಿರುವ ಎಲ್ಲಾ ತಾಂತ್ರಿಕ ಸಂಪನ್ಮೂಲ ಹೊಂದಿದೆ. ಎಂಎಸ್‌ಎಂಇ ವಲಯದ ಸಣ್ಣ ಉತ್ಪಾದಕರಿಗೆ ಅನುಕೂಲವಾಗುವಂತೆ ಇವಿ ಪಾರ್ಕ್‌ಗಳನ್ನು ಸ್ಥಾಪಿಸುವಂತೆ ಎಫ್‌ಕೆಸಿಸಿಐ ನಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎನರ್ಜಿ ಅಂಡ್ ಎನ್ವಿರಾನ್ಮೆಂಟ್ ಗ್ರೋತ್ ಅಡ್ವೈಸರಿ ಉಪಾಧ್ಯಕ್ಷ ಅಮೋಲ್ ಕೊತ್ವಾಲ್, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ, ಅನಿಂದಾ ಜೆ. ಭಟ್ಟಾಚಾರ್ಯ, ಸ್ಮಾರ್ಟ್‌ಗ್ರಿಡ್ ಅನಲಿಟಿಕ್ಸ್ ಸಹಸಂಸ್ಥಾಪಕ ತಿರುಮಲೇಶ್ವರ ರೆಡ್ಡಿ ಕೆ., ಪಿಒಎಮ್ ಪವರ್ ಸಿಸ್ಟಮ್ಸ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ರಾವ್ ಮದ್ದಿಶೆಟ್ಟಿ ಇದ್ದರು.















