ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ದಂಧೆ ನಡೆಯುತ್ತಿದೆ: ಹೆಚ್.ಡಿ ದೇವೇಗೌಡ

WhatsApp
Telegram
Facebook
Twitter
LinkedIn

ಬೆಂಗಳೂರು: ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಂಡು ದಂಧೆ ನಡೆಸಲು ಹೊರಟಿದ್ದಾರೆ. ಈ ದಂಧೆಯ ವಿರುದ್ಧ ಹೋರಾಟಕ್ಕೆ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಘೋಷಿಸಿದರು.

ಶನಿವಾರ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ರೈತರ ಭೂಮಿಯನ್ನು ಕಿತ್ತುಕೊಂಡು ದಂಧೆ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಒಬ್ಬರು ರೈತರು ಹೊಡೆದರೆ ಹೊಡೆಸಿಕೊಳ್ಳುವೆ ಎಂದು ಹೇಳಿದ್ದಾರೆ. ಮೊದಲು ಅವರು ಹೋಗಿ ರೈತರಿಂದ ಹೊಡೆಸಿಕೊಂಡು ಬರಲಿ, ಆಮೇಲೆ ನಾನು ಹೋಗಿ ಮಾತನಾಡುತ್ತೇನೆ ಎಂದು ಗುಡುಗಿದರು.

ದೇವೇಗೌಡರು ಈ ಹಿಂದೆ ಸಭೆಯಲ್ಲಿ ಅಳುತ್ತಿದ್ದರು ಎಂದು ಕೆಲವರು ವ್ಯಂಗ್ಯ ಮಾಡುತ್ತಿದ್ದರು. ಆದರೆ ಈ ವ್ಯವಸ್ಥೆಯನ್ನು ನೋಡಿ ನಾನು ನಗುತ್ತಿದ್ದೇನೆ. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಸ್ನೇಹಿತರು ಮತ್ತು ಹಳೆಯ ಸಹೋದ್ಯೋಗಿಯಾಗಿದ್ದಾರೆ. ಜೊತೆಯಲ್ಲಿ ಕೆಲಸ ಮಾಡಿದ್ದೇವೆ. ಆದರೆ ಇಲ್ಲಿ ನಡೆಯುತ್ತಿರುವುದು ಯಾರಿಗೂ ಕಾಣದಿರುವುದು ನನಗೆ ಅತೀವ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಕೇಂದ್ರ ಮಂತ್ರಿ ಆಗಿದ್ದಾರೆ. ಇವತ್ತು ನಾನು ಒಂದು ಇಂಗ್ಲೀಷ್ ಪೇಪರ್ ನೋಡಿದೆ. ಕುಮಾರಸ್ವಾಮಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಎಂದು ಒಬ್ಬ ವ್ಯಕ್ತಿ ಹೇಳಿರುವ ವರದಿಯನ್ನು ಗಮನಿಸಿದೆ. ಕುಮಾರಸ್ವಾಮಿ ಮಾಡಿದ ಬಿಡದಿ ಟೌನ್ ಶಿಪ್ ಅನ್ನು ನಾನು ಮಾಡುತ್ತಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಆಗ ಕುಮಾರಸ್ವಾಮಿ ಮಾಡಲು ಹೊರಟಿದ್ದು ಏನು? ಈ ವ್ಯಕ್ತಿ ಈಗ ಮಾಡುತ್ತಿರುವ ದಂಧೆ ಏನು ಎಂಬುದು ಜನರಿಗೆ ಅರ್ಥವಾಗಿದೆ. ಅದರ ವಿರುದ್ಧ ನಾನು ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ಮೇಲೆ ಹೆಚ್ಚು ಒತ್ತಡ ಆಗುತ್ತದೆ ಎಂದು ಕುಮಾರಸ್ವಾಮಿ ಐದು ಟೌನ್ ಶಿಪ್ ಗಳನ್ನು ಮಾಡಲು ಹೊರಟಿದ್ದರು. ಆಗ ಕಾಂಗ್ರೆಸ್ ಪಕ್ಷದ ನಾಯಕರು ದೊಡ್ಡ ಅಪಪ್ರಚಾರ ನಡೆಸಿ ಭೂಮಿಯನ್ನು ಹೊಡೆಯಲು ಹೊರಟಿದ್ದಾರೆ ಎಂದು ಸತ್ಯಶೋಧನ ಸಮಿತಿ ರಚಿಸಿ ತನಿಖೆಯನ್ನು ಮಾಡಿದರು. ಅವರ ಸತ್ಯಶೋಧನ ಸಮಿತಿ ವರದಿಯಲ್ಲಿ ಯಾವ ಸತ್ಯ ಹೊರಗೆ ಬಂತು ದೇವರೇ ಬಲ್ಲರು ಎಂದು ವ್ಯಂಗ್ಯವಾಡಿದರು.

ಅಂದು ಜನರು ವಿರೋಧ ಮಾಡಿದ್ದಕ್ಕೆ ಕುಮಾರಸ್ವಾಮಿ ಐದು ಟೌನ್ ಶಿಪ್ ಯೋಜನೆಗಳನ್ನು ಕೈಬಿಟ್ಟರು. ಈಗಲೂ ಕೂಡ ಬಿಡದಿ ಟೌನ್ ಶಿಪ್ ಯೋಜನೆಗೆ ಜನರ ಆಕ್ರೋಶ, ವಿರೋಧ ಇದೆ. ಹೀಗಾಗಿ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎನ್ನುವುದು ನನ್ನ ಆಗ್ರಹವಾಗಿದೆ ಎಂದು ಹೇಳಿದರು.

ಈಗ ಬೆಂಗಳೂರು ಹಾಗೂ ನೀರಾವರಿ ಜವಾಬ್ದಾರಿಯನ್ನು ಒಬ್ಬರೇ ವಹಿಸಿಕೊಂಡಿದ್ದಾರೆ. ಅದರ ಜೊತೆಗೆ ರಾಷ್ಟ್ರೀಯ ಪಕ್ಷದ ಜವಾಬ್ದಾರಿಯನ್ನು ಕೂಡ ಅವರೇ ಹೊತ್ತುಕೊಂಡಿದ್ದಾರೆ. ಏನೋ ಮುಖ್ಯಮಂತ್ರಿ ಆಗಬೇಕೆಂದು ಒಡಂಬಡಿಕೆ ಆಗಿದೆಯಂತೆ. ನಿಮ್ಮಗಳ ಮುಂದೆ ಮನೋರಂಜನೆ ಮಾಡುತ್ತಿದ್ದಾರೆ.ಆದರೆ ಬಿಡದಿಯ ರೈತರು ಕಣ್ಣೀರಿನಲ್ಲಿ ಕೈ ಎಂದು ಕಿಡಿಕಾರಿದರು.

ಸಿದ್ದರಾಮಯ್ಯನವರೇ, ನೀವು ನನ್ನ ಜೊತೆ ಕೆಲಸ ಮಾಡಿದ್ದೀರಿ. ನಿಮ್ಮ ಸಾಮಾಜಿಕ ನ್ಯಾಯದ ಮಾತಿನ ಬಗ್ಗೆ ನನಗೂ ಅರಿವಿದೆ. ಬೆಂಗಳೂರು ಸುತ್ತಮುತ್ತ ಸುಮಾರು 20 ಸಾವಿರ ಎಕರೆ ಭೂಮಿ ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತನಿಖೆ ಮಾಡಿ ಎಂದು ಈಗಾಗಲೇ ಪತ್ರ ಬರೆದಿದ್ದೇನೆ. ಸಿಎಂ ಬೆಂಗಳೂರು ನಗರದ ಹೊಣೆ ಹೊತ್ತಿರುವವರ ಒತ್ತಡಕ್ಕೆ ಮಣಿದು ಜನರ ಸಮಸ್ಯೆಯನ್ನು ನೀವು ಕೇಳುತ್ತಿಲ್ಲ. ಬಿಡದಿ ರೈತರ ಸಮಸ್ಯೆಯನ್ನು ಯಾರಾದರೂ ಹೋಗಿ ಕೇಳಿದ್ದೀರಾ ಎಂದು ಪ್ರಶ್ನಿಸಿದರು.

ಟೌನ್ ಶಿಪ್ ಹೆಸರಿನಲ್ಲಿ ಫಲವತ್ತಾದ ಭೂಮಿಯನ್ನು ಹೊಡೆಯಲು ಹೊರಟಿದ್ದಾರೆ. ಭೂಮಿಯನ್ನು ಕಿತ್ತುಕೊಂಡು ಯಾರಿಗೆ ಕೊಡಲು ಹೊರಟಿದ್ದಾರೆ ಎಂಬುದನ್ನು ಸರ್ಕಾರ ಹೇಳಬೇಕು.ಈ ಭಾಗದಲ್ಲಿ ರೈತರು ದೊಡ್ಡ ಮಟ್ಟದ ಹೈನುಗಾರಿಕೆ, ತೋಟಗಾರಿಕೆ ಮಾಡುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ರೈತರು ನಿತ್ಯವೂ ಡೇರಿಗೆ ಹಾಲನ್ನು ನೀಡುತ್ತಿದ್ದಾರೆ. ಹಿಂದೆ ಕುಮಾರಸ್ವಾಮಿ 250 ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ ಮಾಡಿ ಈ ಭಾಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇಂತಹ ನೀರಾವರಿ ಜಾಗವನ್ನು ಕಿತ್ತುಕೊಳ್ಳಲು ನಿಮ್ಮ ಪಕ್ಷದ ಅಧ್ಯಕ್ಷರು ಹೊರಟಿದ್ದಾರೆ. ನೀವು ನನ್ನ ಜೊತೆ ಕೆಲಸ ಮಾಡಿದ್ದೀರಿ. ಬಡವರು ಹಿಂದುಳಿದವರ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೀರಿ. ನೀವು ಅದರ ಬಗ್ಗೆ ನಿರ್ಧಾರ ಕೈಗೊಳ್ಳುವ ಸಮಯ ಇದಾಗಿದೆ. ಬೆಂಗಳೂರು ಹೊಣೆಗಾರಿಕೆ ಗೊತ್ತಿರುವ ವ್ಯಕ್ತಿಯ ಒತ್ತಡಕ್ಕೆ ಮಣಿದು ಜನಸಾಮಾನ್ಯರಿಗೆ ಅನ್ಯಾಯ ಮಾಡಬೇಡಿ. ಬಿಡದಿ ರೈತರು ಕಣ್ಣೀರು ಹಾಕುತ್ತಿದ್ದಾರೆ ಎಂದು ಹೇಳಿದರು.

ಕುಮಾರಸ್ವಾಮಿ ಮಾಡಿದ್ದನ್ನು ನಾನು ಮುಂದುವರಿಸುತ್ತೇನೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಜನರಿಂದ ವಿರೋಧ ಬಂದಿದ್ದಕ್ಕೆ ಅವರು ಯೋಜನೆಯನ್ನು ನಿಲ್ಲಿಸಿದರು. ಅದನ್ನೇ ಈ ವ್ಯಕ್ತಿ ಕೂಡ ಮಾಡಬೇಕಲ್ಲವೇ? ಜನರಿಂದ ತೀವ್ರ ವಿರೋಧ ಬಂದರು ನಾನು ಟೌನ್‌ಶಿಪ್ ಮಾಡಿ ತೀರುತ್ತೇನೆ ಎಂದು ಹಠ ಮಾಡುತ್ತಿದ್ದಾರೆ. ಬಗ್ಗೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ರಿಗೆ ಪತ್ರ ಬರೆದಿದ್ದೇನೆ. ಇವತ್ತಿನಿಂದ ನನ್ನ ಹೋರಾಟ ಆರಂಭವಾಗಿದೆ. ಬೆಂಗಳೂರು ಸುತ್ತಮುತ್ತ ಬಡವರ ಜಮೀನನ್ನು ಕಿತ್ತುಕೊಳ್ಳುವ ಶಕ್ತಿಗಳನ್ನು ಮಟ್ಟ ಹಾಕಬೇಕಿದೆ. ಬಿಡಿಎ ಸೇರಿದಂತೆ ಎಲ್ಲೆಲ್ಲಿ ಅಕ್ರಮ ನಡೆದಿದೆಯೋ ಅಲ್ಲೆಲ್ಲ ನಾನು ಹೋರಾಟ ನಡೆಸುತ್ತೇನೆ. ಈ ಬಗ್ಗ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ವರದಿಗಾರರ ಪ್ರಶ್ನೆ ಒಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿಗಳು ಬಿಡದಿಯ ರೈತರ ಪರಿಸ್ಥಿತಿಯನ್ನು ಒಮ್ಮೆ ನೀವೇ ಖುದ್ದಾಗಿ ನೋಡಬೇಕು. ನಾನು ಬರುತ್ತೇನೆ, ನೀವು ಬನ್ನಿ. ಸ್ಥಳಕ್ಕೆ ಭೇಟಿ ನೀಡೋಣ. ಈವರೆಗೂ ಸ್ಥಳೀಯ ಶಾಸಕರು, ತಹಸೀಲ್ದಾರರು, ಜಿಲ್ಲಾಧಿಕಾರಿಗಳು ಆ ಜನರ ಸಮಸ್ಯೆಯನ್ನು ಕೇಳಿಲ್ಲ. ಇಲ್ಲಿ ದಂಧೆ ನಡೆಯುತ್ತಿದೆ. ರೈತರ ಭೂಮಿಯನ್ನು ಕಿತ್ತುಕೊಂಡು ದಂಧೆ ಮಾಡುತ್ತಿದ್ದಾರೆ. ಕನಕಪುರದಲ್ಲಿ ಎಷ್ಟು ಜಮೀನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ವಾಗ್ದಾಳಿ ನಡೆಸಿದರು.

ಮಾಧ್ಯಮಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್ ಸೇರಿ ಬಿಡದಿ ಭಾಗದ ಅನೇಕ ರೈತರು ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon