ಬೆಂಗಳೂರು: ಎಸ್.ಐ.ಆರ್ ವೇಳೆ ಅರ್ಹ ಮತದಾರರ ಪಟ್ಟಿಯಿಂದ ಯಾರೂ ಕೈತಪ್ಪದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ದಕ್ಷಿಣ ನಗರಪಾಲಿಕೆ ಆಯುಕ್ತ ರಮೇಶ್ ಕೆ.ಎನ್ ಹೇಳಿದರು.
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನಡೆದ ಎಸ್‌ಐಆರ್ ವಿಶೇಷ ಅಭಿಯಾನ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪ್ರತಿಯೊಬ್ಬರೂ ಪರಿಶೀಲಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ನಾಗರಿಕರು ನಮೂನೆ–6 ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ 2002ರ ಮತದಾರರ ಪಟ್ಟಿಯ ವಿವರಗಳನ್ನು ಸರಿಯಾಗಿ ನೀಡದಿರುವುದು, ಹೆಸರು ಅಥವಾ ವಯಸ್ಸಿನಲ್ಲಿ ವ್ಯತ್ಯಾಸ, ತಂದೆ–ಮಗನ ವಯಸ್ಸಿನ ಅಸಂಗತತೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಪಡೆದವರು ಆತಂಕಪಡುವ ಅಗತ್ಯವಿಲ್ಲ. ನಿಗದಿತ ದಿನಾಂಕದಂದು ಹಾಜರಾಗಿ ತಮ್ಮ ಬಳಿ ಇರುವ ಪೂರಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.
ದಕ್ಷಿಣ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆಗಸ್ಟ್ 24 ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 10,86,756 ಮತದಾರರಿದ್ದಾರೆ. ಈ ಪೈಕಿ ವಿವರಗಳಲ್ಲಿ ವ್ಯತ್ಯಾಸವಿರುವ ಹಾಗೂ ಮಾಹಿತಿ ಅಪೂರ್ಣವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 4,18,109 ನೋಟಿಸ್‌ಗಳನ್ನು ಜನರೇಟ್ ಮಾಡಲಾಗಿದೆ. ಇವುಗಳಲ್ಲಿ 98,720 ನೋಟಿಸ್‌ಗಳ ವಿಚಾರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಉಳಿದ ವಿಚಾರಣೆಗಳನ್ನು ಮುಂಬರುವ ಒಂದು ಅಥವಾ ಎರಡು ವಾರಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು
ದಕ್ಷಿಣ ವಲಯದ ಜಂಟಿ ಆಯುಕ್ತೆ ಡಾ. ಮಧು ಪಾಟೀಲ್ ಮಾತನಾಡಿ, ಭಾರತೀಯ ನಾಗರಿಕರಾಗಿದ್ದು,18 ವರ್ಷ ಪೂರ್ಣಗೊಂಡಿರುವುದು ಹಾಗೂ ಸಂಬಂಧಪಟ್ಟ ಪ್ರದೇಶದಲ್ಲಿ ಸಾಮಾನ್ಯ ನಿವಾಸಿಯಾಗಿರುವುದು ಮತದಾರರಾಗಿ ನೋಂದಣಿಗೆ ಪ್ರಮುಖ ಅರ್ಹತೆಗಳಾಗಿವೆ. 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ದಾಖಲೆ ಇಲ್ಲದಿದ್ದರೂ, ಅರ್ಹತೆಯನ್ನು ದೃಢಪಡಿಸುವ ಸೂಕ್ತ ದಾಖಲೆಗಳನ್ನು ಸಲ್ಲಿಸಿದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಎಸ್.ಐ.ಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಕ್ಷಿಣ ವಲಯದ ವಿವಿಧ ಮತಗಟ್ಟೆಗಳಲ್ಲಿ ಸೆ.19 ಮತ್ತು 20ರಂದು ವಿಶೇಷ ಮತದಾರರ ನೋಂದಣಿ ಶಿಬಿರಗಳನ್ನು ಆಯೋಜಿಸಲಾಗಿದೆ. ಶಿಬಿರಗಳಲ್ಲಿ ಹೊಸದಾಗಿ ಮತದಾರರಾಗಿ ನೋಂದಾಯಿಸಿಕೊಳ್ಳಲು ನಮೂನೆ–6 ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಗೊಂದಲ, ಅನುಮಾನ ಅಥವಾ ಸ್ಪಷ್ಟೀಕರಣಗಳಿದ್ದಲ್ಲಿ ಸ್ಥಳದಲ್ಲಿರುವ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದರು.
ಅರ್ಹ ನಾಗರಿಕರು ಶಿಬಿರದ ಸದುಪಯೋಗ ಪಡೆದುಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಸುತ್ತಮುತ್ತಲಿನ ಜನನಿಬಿಡ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಡೊಳ್ಳುಕುಣಿತ ಕಲಾತಂಡಗಳ ಸಮೇತ ಜಾಥಾ ನಡೆಸಿ ಸಾರ್ವಜನಿಕರ ಗಮನ ಸೆಳೆಯಲಾಯಿತು. ಮತದಾನವು ಸಂವಿಧಾನಬದ್ಧ ಹಕ್ಕಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕಲಾಪ್ರದರ್ಶನದ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಆಯುಕ್ತ ರಾಚಪ್ಪ, ಕಂದಾಯ ಅಧಿಕಾರಿ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿ ಡಾ. ಈಶ್ವರ್ ಎಸ್. ರಾಯುಡು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.














