ಬೆಂಗಳೂರು: ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ಕುರುಬರ ಸಂಘ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕರು ಹಾಗೂ ದೀರ್ಘಕಾಲ ಆಡಳಿತ ನಡೆಸಿದ ಪ್ರಮುಖ ನಾಯಕರಾಗಿದ್ದಾರೆ. ಅವರ ಅಭಿಮಾನಿಗಳು ಸೆ.16ರಂದು ಕಲಬುರಗಿಯಲ್ಲಿ ಪ್ರತಿಮೆ ಪ್ರತಿಷ್ಠಾಪಿಸಿ ಅನಾವರಣಗೊಳಿಸಿದ್ದರು. ಆದರೆ ಮಹಾನಗರ ಪಾಲಿಕೆ ಪ್ರತಿಮೆಯನ್ನು ತೆರವುಗೊಳಿಸಿರುವುದು ಸರಿಯಲ್ಲ ಎಂದು ಹೇಳಿದರು.
ಕಲಬುರಗಿಯಲ್ಲಿ ಹಲವು ಪ್ರತಿಮೆಗಳು ಅನುಮತಿ ಇಲ್ಲ, 2023ರಲ್ಲಿ ಹೈಕೋರ್ಟ್ ಸರ್ಕಲ್ಗೆ ಸಿದ್ದರಾಮಯ್ಯ ವೃತ್ತ ಎಂದು ಘೋಷಿಸಲಾಗಿತ್ತು. ಈ ಕುರಿತ ಫಲಕವನ್ನೂ ತೆರವುಗೊಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಪ್ರತಿಮೆಯನ್ನು ಮರುಪ್ರತಿಷ್ಠಾಪಿಸದಿದ್ದರೆ ಕಲಬುರಗಿ ಚಲೋ ನಡೆಸಲಾಗುವುದು. ಬಳಿಕ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಕುರುಬರ ಸಂಘದ ಖಜಾಂಚಿ ಕೃಷ್ಣಮೂರ್ತಿ ಮಾತನಾಡಿ, ಸಿದ್ದರಾಮಯ್ಯ ಅವರು ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡಿದ ನಾಯಕರು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಪ್ರತಿಮೆ ಅನಾವರಣಗೊಂಡಿದ್ದರೂ ಪಾಲಿಕೆ ಅದನ್ನು ತೆರವುಗೊಳಿಸಿರುವುದು ಖಂಡನೀಯ. ಕೂಡಲೇ ಪ್ರತಿಮೆ ಮರುಪ್ರತಿಷ್ಠಾಪಿಸಬೇಕು. ಇಲ್ಲವಾದರೆ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹಿಂದುಳಿದ ವರ್ಗಗಳ ಸಂಘಟನೆ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಪ್ರತಿಮೆ ತೆರವು ವಿಚಾರದಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಬೇಕು. ಅಭಿಮಾನಿಗಳು ಆಕ್ರೋಶಗೊಳ್ಳುವ ಮುನ್ನ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಸಿದ್ದರಾಮಯ್ಯ ಅಭಿಮಾನಿಗಳನ್ನು ಒಗ್ಗೂಡಿಸಿ ಕಲಬುರಗಿ ಚಲೋ ನಡೆಸಲಾಗುವುದು. ಪ್ರತಿಮೆ ತೆರವು ಹಿಂದೆ ಯಾರದ್ದಾದರೂ ರಾಜಕೀಯ ಹಸ್ತಕ್ಷೇಪವಿದೆಯೇ ಎಂಬ ಅನುಮಾನವಿದೆ. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.














