ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವವರಾರು? ಕಠಿಣ ಕ್ರಮಕ್ಕೆ ಇನ್ನೆಷ್ಟು ಕಾಯಬೇಕು?

WhatsApp
Telegram
Facebook
Twitter
LinkedIn

ಸಾಗರ ಕೃಷ್ಣಾ ಕೋಳೆಕರ, ಸಂಪಾದಕರು

ರಾಜ್ಯದಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿಲ್ಲ. ಬದಲಾಗಿ, ಒಂದರ ಹಿಂದೆ ಮತ್ತೊಂದು ಲಂಚದ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಆಡಳಿತ ವ್ಯವಸ್ಥೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸುತ್ತಿದೆ.

ಇತ್ತೀಚೆಗೆ ಧಾರವಾಡ ತಹಶೀಲ್ದಾರ್ 50 ಲಕ್ಷ ರೂ ಲಂಚ ಸ್ವೀಕರಿಸಿದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಪ್ರಕರಣ ರಾಜ್ಯದಾದ್ಯಂತ ಗಮನ ಸೆಳೆದಿದೆ. ಪ್ರಕರಣದಲ್ಲಿ ಒಟ್ಟು 1 ಕೋಟಿ ಗಿಂತ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪವೂ ಕೇಳಿಬಂದಿದ್ದು, ತನಿಖೆ ಮುಂದುವರಿದಿದೆ. ಒಂದರೆಡು ಘಟನೆಗಳೇ ಉಲ್ಲೇಖನೀಯವಲ್ಲ. 2022ರ ಸೆಪ್ಟೆಂಬರ್‌ನಿಂದ 2026ರ ಆಗಸ್ಟ್‌ವರೆಗೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯಡಿ 1,248 ಪ್ರಕರಣಗಳನ್ನು ದಾಖಲಿಸಿದ್ದು, 1,451 ಸರ್ಕಾರಿ ನೌಕರರು ಆರೋಪಿಗಳಾಗಿ ದಾಖಲಾಗಿದ್ದಾರೆ. ಈ ಪೈಕಿ 939 ಪ್ರಕರಣಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಸಂಬಂಧಿಸಿದ್ದಾಗಿವೆ ಎಂದು ವಿಧಾನ ಪರಿಷತ್ತಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.

ಯಾರೇ ಆಗಿರಲಿ, ಯಾವ ಹುದ್ದೆಯಲ್ಲಿರಲಿ-ಆರೋಪ ಸಾಬೀತಾದರೆ ಕಾನೂನು ಕ್ರಮ ಎಂಬ ಸಂದೇಶ ಆಡಳಿತದಿಂದ ಸ್ಪಷ್ಟವಾಗಿ ಹೊರಬರಬೇಕು. ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಹೋರಾಟ ಕೇವಲ ಭಾಷಣಗಳಲ್ಲಿ, ಸಭೆಗಳಲ್ಲಿ ಮತ್ತು ಘೋಷಣೆಗಳಲ್ಲಿ ಕಾಣಿಸಿಕೊಳ್ಳಬಾರದು. ತನಿಖೆ, ಆರೋಪಪಟ್ಟಿ, ನ್ಯಾಯಾಂಗ ಪ್ರಕ್ರಿಯೆ ಮತ್ತು ತಪ್ಪಿತಸ್ಥರೆಂದು ಸಾಬೀತಾದವರ ವಿರುದ್ಧ ಪರಿಣಾಮಕಾರಿ ಕ್ರಮ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ವೇಗವಾಗಿ ನಡೆಯಬೇಕು. ಜನರಿಗೆ ಈಗ ಬೇಕಿರುವುದು ಭ್ರಷ್ಟಾಚಾರ ಮುಕ್ತ ಆಡಳಿತದ ಘೋಷಣೆ ಮಾತ್ರವಲ್ಲ; ಅದರ ಪರಿಣಾಮ ಕಚೇರಿಗಳಲ್ಲಿ ಕಾಣಬೇಕು ಎನ್ನುವುದಾಗಿದೆ.

ಲೋಕಾಯುಕ್ತರು ಅಧಿಕಾರಿಗಳನ್ನು ಹಿಡಿಯುತ್ತಿದ್ದಾರೆ. ಪ್ರಕರಣಗಳು ದಾಖಲಾಗುತ್ತಿವೆ. ಲಂಚದ ಆರೋಪಗಳು ಮತ್ತೆ ಮತ್ತೆ ಕೇಳಿಬರುತ್ತಿವೆ. ಹಾಗಾದರೆ ಭ್ರಷ್ಟಾಚಾರಕ್ಕೆ ಶಾಶ್ವತ ಕಡಿವಾಣ ಹಾಕುವ ಸರ್ಕಾರದ ಕಾರ್ಯಯೋಜನೆ ಎಲ್ಲಿದೆ? ಭ್ರಷ್ಟಾಚಾರಕ್ಕೆ ಕಡಿವಾಣ ಯಾವಾಗ? ಜನಸೇವೆಗೆ ನಿಜವಾದ ಅರ್ಥ ಬರುವ ದಿನ ಯಾವಾಗ? ಎನ್ನುವ ಸಾಮಾನ್ಯ ಜನಗಳ ಪ್ರಶ್ನೆಗಳು ಹಾಗೆಯೇ ಉಳಿದು ಹೋಗುತ್ತಿವೆ. ಲೋಕಾಯುಕ್ತರು ಟ್ರ್ಯಾಪ್ ನಡೆಸಿ ಅಧಿಕಾರಿಗಳನ್ನು ಹಿಡಿಯುವುದು ಅಗತ್ಯ ಪ್ರಕ್ರಿಯೆಯಾಗಿದೆ. ಆದರೆ ಲಂಚ ಸ್ವೀಕರಿಸಿದ ನಂತರ ಹಿಡಿಯುವುದಕ್ಕಿಂತ, ಲಂಚ ಕೇಳುವ ಪರಿಸ್ಥಿತಿಯೇ ನಿರ್ಮಾಣವಾಗದಂತೆ ವ್ಯವಸ್ಥೆಯನ್ನು ಬದಲಿಸುವುದು ಸರ್ಕಾರದ ನಿಜವಾದ ಸವಾಲಾಗಿದೆ.

ಬೆಳಗಾವಿ ಜಿಲ್ಲಾ ಪಂಚಾಯಿತಿಯತ್ತವೂ ಕಣ್ಣು ಬೀಳಲಿ!

ಗ್ರಾಮ ಪಂಚಾಯಿತಿಯಿಂದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿವರೆಗೆ ಅಭಿವೃದ್ಧಿ ಕಾಮಗಾರಿಗಳು, ಬಿಲ್‌ ಪಾವತಿ, ಟೆಂಡರ್, ಯೋಜನೆಗಳ ಅನುಷ್ಠಾನ, ಸಿಬ್ಬಂದಿ ವರ್ಗಾವಣೆ ಹಾಗೂ ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅವುಗಳನ್ನು ಕಡತದೊಳಗೆ ಹೂತುಹಾಕದೆ ಗಂಭೀರವಾಗಿ ಪರಿಶೀಲಿಸಬೇಕು. ಯಾರೇ ಆಗಿರಲಿ, ಯಾವ ಹುದ್ದೆಯಲ್ಲಿರಲಿ-ಆರೋಪ ಸಾಬೀತಾದರೆ ಕಾನೂನು ಕ್ರಮ ಎಂಬ ಸಂದೇಶ ಆಡಳಿತದಿಂದ ಸ್ಪಷ್ಟವಾಗಿ ಹೊರಬರಬೇಕು.

ಬೆಳಗಾವಿ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ಅದರ ಅಧೀನದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ಕೇಳಿಬರುವ ಆರೋಪಗಳೂ ಗಂಭೀರವಾಗಿ ಪರಿಶೀಲನೆಗೊಳಪಡಬೇಕಾದ ವಿಷಯವಾಗಿದೆ. ಯಾವ ಅಧಿಕಾರಿ ಅಥವಾ ನೌಕರರ ವಿರುದ್ಧವೂ ಆರೋಪ ಬಂದ ತಕ್ಷಣ ಅವರನ್ನು ತಪ್ಪಿತಸ್ಥರೆಂದು ಘೋಷಿಸುವುದು ಸರಿಯಲ್ಲ; ಆದರೆ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸದೆ ಮೌನವಾಗಿರುವುದೂ ಆಡಳಿತಕ್ಕೆ ಶೋಭೆ ತರುವುದಿಲ್ಲ.

ಸರ್ಕಾರಿ ನೌಕರಿ ಹಣ ವಸೂಲಿ ಮಾಡುವ ಪರವಾನಿಗೆ ಅಲ್ಲ!

ಸರ್ಕಾರಿ ನೌಕರಿ ಜನರ ತೆರಿಗೆ ಹಣದಿಂದ ನಡೆಯುವ ಸಾರ್ವಜನಿಕ ಸೇವೆಯಾಗಿದೆ. ಬಡವರು, ರೈತರು, ಕಾರ್ಮಿಕರು, ಸಾಮಾನ್ಯ ನಾಗರಿಕರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಚೇರಿಗೆ ಬಂದಾಗ ಅವರಿಂದ ಲಂಚ ಕೇಳಲಾಗುತ್ತಿದೆ ಎಂಬ ಭಾವನೆ ಮೂಡಿದರೆ, ಅದು ಇಡೀ ಆಡಳಿತ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕುಗ್ಗಿಸುವ ಸಂಗತಿ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon