ಬೆಂಗಳೂರು: ಸಾಧನೆಯ ಹಾದಿಯಲ್ಲಿ ತರಾತುರಿ ಇರಬಾರದು. ಯಶಸ್ಸು ಮತ್ತು ಅನುಭವ ಒಂದೇ ದಿನದಲ್ಲಿ ದೊರೆಯುವುದಿಲ್ಲ. ನಿರಂತರ ಪರಿಶ್ರಮ, ಸಹಯೋಗ, ಮಾರುಕಟ್ಟೆಯ ಆಳವಾದ ಜ್ಞಾನ ಹಾಗೂ ಗುಣಮಟ್ಟದ ಮಾನದಂಡಗಳ ಪಾಲನೆಯಿಂದ ನೈಪುಣ್ಯತೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೈದರಾಬಾದ್‌ನ ಸ್ಯಾಮ್ ಅಗ್ರಿ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಜಿ.ವಿ.ಕೆ. ನಾಯ್ಡು ಹೇಳಿದರು.
ಜ್ಞಾನಭಾರತಿ ಸಮೀಪದ ಮಲತಹಳ್ಳಿಯ ಭಾರತೀಯ ತೋಟಗಾರಿಕಾ ನಿರ್ವಹಣಾ ಸಂಸ್ಥೆ (ಐಐಪಿಎಂ) ಆವರಣದಲ್ಲಿ ನಡೆದ ಸಂಸ್ಥೆಯ 21ನೇ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯಶಸ್ಸು ಮತ್ತು ಅನುಭವ ಒಂದೇ ದಿನದಲ್ಲಿ ದೊರೆಯುವುದಲ್ಲ. ನಿರಂತರ ಅಧ್ಯಯನದೊಂದಿಗೆ ಗಳಿಸಿಕೊಳ್ಳಬೇಕು. ಆಗ ಅದು ದೀರ್ಘ ಕಾಲದವರೆಗೂ ಉಳಿಯುತ್ತದೆ ಎಂದರು.
ಉದ್ಯಮದಲ್ಲಿ ಯಶಸ್ಸು ಸಾಧಿಸಲು ಏಕಾಂಗಿಯಾಗಿ ಕೆಲಸ ಮಾಡುವುದಕ್ಕಿಂತ ಇತರರ ಜ್ಞಾನ ಮತ್ತು ಸಾಮರ್ಥ್ಯವನ್ನು ಗುರುತಿಸಿ ತಂಡವಾಗಿ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ. 20ರ ಹರೆಯ ಕಲಿಕೆಗೆ, 30 ಸಾಮರ್ಥ್ಯ ಮತ್ತು ಕೌಶಲ್ಯ ಬಲಪಡಿಸಿಕೊಳ್ಳಲು ಹಾಗೂ 40ರ ಹರೆಯ ವಿಸ್ತರಣೆಗೆ ಮೀಸಲಾಗಿರಲಿ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಭಾರತದಲ್ಲಿ ಅವಕಾಡೊ ಮಾರುಕಟ್ಟೆಯನ್ನು ವಿಸ್ತರಿಸಲು ಇಸ್ರೆಲ್ ಮತ್ತು ದಕ್ಷಿಣ ಆಫ್ರಿಕಾದ ತಜ್ಞರೊಂದಿಗೆ ನಮ್ಮ ಸಂಸ್ಥೆ ಕೈಜೋಡಿಸಿದೆ. 2022ರಲ್ಲಿ 250 ಟನ್‌ಗಳಷ್ಟಿದ್ದ ಅವಕಾಡೊ ಆಮದಾಗುತಿತ್ತು ಇದೀಗ 25 ಸಾವಿರ ಟನ್‌ಗೆ ಏರಿಕೆಯಾಗಿದೆ. ದಾಳಿಂಬೆ ಮಾರುಕಟ್ಟೆಯಲ್ಲೂ ತಂತ್ರಜ್ಞಾನ ಮತ್ತು ವ್ಯವಸ್ಥಿತ ಕಾರ್ಯವ ಅಳವಡಿಸಿಕೊಂಡಿದ್ದು, ಪ್ರತಿದಿನ 10 ಟನ್ ದಾಳಿಂಬೆ ಬೀಜಗಳನ್ನು 20ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಜಿ.ವಿ.ಕೆ. ನಾಯ್ಡು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಐಐಪಿಎಂ ಅಧ್ಯಕ್ಷೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಭಿವೃದ್ಧಿ ಆಯುಕ್ತೆ ಪಿ. ಹೇಮಲತಾ ಮಾತನಾಡಿ, ಪದವಿ ಪಡೆಯುವುದು ಶಿಕ್ಷ ಣದ ಅಂತ್ಯವಲ್ಲ, ನೈಜ ಜೀವನದ ಆರಂಭವಾಗಿದೆ. ತಂತ್ರಜ್ಞಾನವನ್ನು ಕೇವಲ ಬಳಕೆಯ ಸಾಧನವಾಗಿ ನೋಡದೆ, ಮಾನವಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜವಾಬ್ದಾರಿಯುತವಾಗಿ ಬಳಸಬೇಕು. ಎಐ, ಡೇಟಾ ಅನಾಲಿಟಿಕ್ಸ್ ಮತ್ತು ಡಿಜಿಟಲ್ ರೂಪಾಂತರ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ನಿರಂತರವಾಗಿ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಡಾ. ಎಸ್. ಸೆಂಥಿಲ್ ವಿನಾಯಗಂ ಅತಿಥಿಗಳು ಮತ್ತು ಸಭಿಕರನ್ನು ಸ್ವಾಗತಿಸಿ ನಿರ್ದೇಶಕರ ವರದಿಯನ್ನು ಮಂಡಿಸಿದರು. ಸಂಸ್ಥೆಯ ಪ್ರಮುಖ ಚಟುವಟಿಕೆಗಳು ಮತ್ತು ಸಾಧನೆಗಳನ್ನು ಅವರು ವಿವರಿಸಿದರು. ಬಳಿಕ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣವಚನವನ್ನು ಬೋಧಿಸಿದರು. ಡೀನ್ (ಅಕಾಡೆಮಿಕ್ಸ್) ಹಾಗೂ ಪ್ರೊಫೆಸರ್ ಡಾ. ಎಸ್. ಜಾನ್ ಮನೋ ರಾಜ್ ವಂದನಾರ್ಪಣೆ ಸಲ್ಲಿಸಿದರು.
342 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:
ಕಾರ್ಯಕ್ರಮದಲ್ಲಿ 2022-24 ಹಾಗೂ 2023-25ನೇ ಸಾಲಿನ 342 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಜತೆಗೆ ವಿದ್ಯಾರ್ಥಿಗಳ ಶೈಕ್ಷ ಣಿಕ ಸಾಧನೆ ಮತ್ತು ಒಟ್ಟಾರೆ ಶ್ರೇಷ್ಠತೆಯನ್ನು ಗುರುತಿಸಿ 9 ಚಿನ್ನದ ಪದಕಗಳು, 12 ಬೆಳ್ಳಿ ಪದಕಗಳು ಮತ್ತು 6 ಅತ್ಯುತ್ತಮ ಸರ್ವಾಂಗೀಣ ಸಾಧನಾ ಪ್ರಶಸ್ತಿಗಳು ಸೇರಿದಂತೆ ಒಟ್ಟು 27 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪಿಜಿಡಿಎಂ-ಎಬಿಪಿಎಂನ 178 ವಿದ್ಯಾರ್ಥಿಗಳು, ಪಿಜಿಡಿಎಂ-ಎಫ್ಬಿಎಂನ 104 ವಿದ್ಯಾರ್ಥಿಗಳು ಹಾಗೂ ಪಿಜಿಡಿಎಂ-ಎಇಬಿಎಂನ 60 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.














