ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ವೃಂದದಿಂದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಆಯೋಜಿಸಿದ್ದ ಅರ್ಹತಾ ಪರೀಕ್ಷೆಯನ್ನು ಶಾಲಾ ಶಿಕ್ಷಣ ಇಲಾಖೆ ಮುಂದೂಡಿದೆ.
ಈ ಬಗ್ಗೆ ಏ.21 ರಿಂದ 24ರವರೆಗೆ ಪರೀಕ್ಷೆಯನ್ನು ರಾಜ್ಯದ ಶೈಕ್ಷಣಿಕ ವಿಭಾಗೀಯ ಕೇಂದ್ರಗಳಲ್ಲಿ ನಡೆಸಲು ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ, ಪ್ರಸ್ತುತ ನಡೆಸಲಾಗುತ್ತಿರುವ 2027ರ ರಾಷ್ಟ್ರೀಯ ಜನಗಣತಿ ಕಾರ್ಯಕ್ಕೆ ಬಹುತೇಕ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಅವರುಗಳು ಈಗ ಕರ್ತವ್ಯದಲ್ಲಿ ತೊಡಗಿದ್ದಾರೆ. ಆದ್ದರಿಂದ ಶಿಕ್ಷಕರ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.














