ಬೆಂಗಳೂರು: ನಟ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ಜೆರಾಕ್ಸ್ ವೆಬ್ ಸರಣಿಯನ್ನು ನಿರ್ಮಿಸುತ್ತಿದ್ದಾರೆ. ಈ ಸಿರೀಸ್ ಅನ್ನು ಬ್ಲಿಂಕ್ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ. ಜೆರಾಕ್ಸ್ ವೆಬ್ ಸರಣಿಯ ಮುಖ್ಯಭೂಮಿಕೆಯಲ್ಲಿ ನಾಗಭೂಷಣ್ ನಟಿಸಲಿದ್ದಾರೆ ಎನ್ನುವ ಹೊಸ ವಿಚಾರ ಇದೀಗ ಬಯಲುಗೊಂಡಿದೆ.
ಟಗರು ಪಲ್ಯ, ವಿದ್ಯಾಪತಿ ಸಿನಿಮಾಗಳ ಜೊತೆಗೆ ಇಕ್ಕಟ್ ಹಾಗೂ ಹನಿಮೂನ್ ವೆಬ್ ಸರಣಿಗಳ ಮೂಲಕ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿರುವ ನಾಗಭೂಷಣ್ ಈಗ ಜೆರಾಕ್ಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಬಹು ಬೇಡಿಕೆ ಕಾಮಿಡಿ ನಟರುಗಳಲ್ಲಿ ಒಬ್ಬರಾಗಿರುವ ಅವರು ಈಗ ಡಾರ್ಕ್ ಹಾಸ್ಯ ಥ್ರಿಲ್ಲರ್ ಕಥೆಯ ಜೆರಾಕ್ಸ್ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ಜೆರಾಕ್ಸ್ ಈಗಾಗಲೇ ತನ್ನ ಶೀರ್ಷಿಕೆಯೊಂದಿಗೆ ಕುತೂಹಲವನ್ನು ಹುಟ್ಟುಹಾಕಿದೆ. ಈ ಸರಣಿಯು ಮಂಡ್ಯ- ಮೈಸೂರು ಸುತ್ತಮುತ್ತ ನಡೆಯುತ್ತಿದ್ದು, ಜೆರಾಕ್ಸ್ ಅಂಗಡಿಯ ಮಾಲೀಕ ಪ್ರಕಾಶ್ ಜೀವನದಲ್ಲಿ ನಡೆಯುವ ಅನಿರೀಕ್ಷಿತ ತಿರುವುಗಳನ್ನು ಕಟ್ಟಿಕೊಡಲಾಗಿದೆ.















