ಮಂಡ್ಯದಲ್ಲಿ 500 ಕೋಟಿ ವೆಚ್ಚದ ಜಾಗತಿಕ ಮಟ್ಟದ ಸಂಶೋಧನಾ ಕೇಂದ್ರ: ಹೆಚ್.ಡಿ. ಕುಮಾರಸ್ವಾಮಿ

WhatsApp
Telegram
Facebook
Twitter
LinkedIn

ಮೈಸೂರು: ತಾವು ಪ್ರತಿನಿಧಿಸುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ 500 ಕೋಟಿ ವೆಚ್ಚದ ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ ಸಂಶೋಧನಾ ಕೇಂದ್ರ ತೆರೆಯಲಾಗುವುದು ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದರು.

ಭಾನುವಾರ ಕೇಂದ್ರದ 2026-2027ನೇ ಸಾಲಿನ ಆಯವ್ಯಯದ ಕುರಿತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು; ಈ ಯೋಜನೆ ಕಾರ್ಯಗತ ಮಾಡಲು 100 ಎಕರೆ ಭೂಮಿ ಅಗತ್ಯವಿದೆ. ಆದಷ್ಟು ಬೇಗ ಭೂಮಿಯನ್ನು ಹಂಚಿಕೆ ಮಾಡಬೇಕು ಎಂದು ಸ್ವತಃ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಅವರು ಆದಷ್ಟು ಬೇಗ ಭೂಮಿ ನೀಡುವ ವಿಶ್ವಾಸವಿದೆ ಎಂದರು.

ಇದು ಅತ್ಯಂತ ಮಹತ್ವದ ಯೋಜನೆ ಆಗಿದ್ದು, ಮಂಡ್ಯ, ಮೈಸೂರು ಭಾಗಕ್ಕೆ ಮಾತ್ರವಲ್ಲದೆ ಇಡೀ ರಾಜ್ಯ ಆಟೋಮೊಬೈಲ್‌ ಕೇತ್ರಕ್ಕೆ ಬೂಸ್ಟರ್‌ ನಂತೆ ಕೆಲಸ ಮಾಡುತ್ತದೆ. ಬಜೆಟ್ ನಲ್ಲಿಯೇ ಇದಕ್ಕೆ ಹಣ ಮಂಜೂರು ಆಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸ್ವಾಯತ್ತ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ‌ ಇದಾಗಿದ್ದು, ಭಾರತೀಯ ಆಟೋಮೋಟಿವ್ ಉದ್ಯಮದಲ್ಲಿ ಪರೀಕ್ಷೆ, ಪ್ರಮಾಣೀಕರಣ ಮತ್ತು ಸಂಶೋಧನೆಗೆ ಪ್ರಮುಖ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತಿದೆ. ಪುಣೆಯ ಇದರ ಕೇಂದ್ರ ಸ್ಥಾನವಿದ್ದು, ವಾಹನಗಳ ಸುರಕ್ಷತೆ, ಮಾಲಿನ್ಯ ನಿವಾರಣೆ ಮತ್ತು ತಾಂತ್ರಿಕ ಗುಣಮಟ್ಟ ಸೇರಿದಂತೆ ವಿವಿಧ ಮಾನದಂಡಗಳಿಗೆ ಅನುಗುಣವಾಗಿ  ಮತ್ತು ಆಟೋಮೊಬೈಲ್ ಉದ್ಯಮದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮಾಹಿತಿ ನೀಡಿದರು.

ಜಾಗತಿಕ ಗುಣಮಟ್ಟ ಮತ್ತು ಶ್ರೇಷ್ಠತೆಯ ಈ ಸಂಶೋಧನಾ ಕೇಂದ್ರ ಮಂಡ್ಯದಲ್ಲಿ ಸ್ಥಾಪನೆ ಆಗಬೇಕು ಎಂಬುದು ನನ್ನ ಆಶಯವಾಗಿದೆ. ಸೂಕ್ತ ಜಮೀನು ಗುರುತಿಸುವಂತೆ ರಾಜ್ಯ ಕಂದಾಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಇದೇ ಜನವರಿ 21ರಂದು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದಷ್ಟು ಬೇಗ ಸರಕಾರ ಜಾಗ ನೀಡಲಿ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಮಂಡ್ಯದಿಂದ ಗೆದ್ದು ಏನು ತಂದರು ಎನ್ನುವ ಪ್ರಶ್ನೆ ಇತ್ತು. ದಿನವೂ ಮಂಡ್ಯದ ಕೆಲ ಶಾಸಕರು ಪ್ರಶ್ನೆ ಮಾಡುತ್ತಿದ್ದರು. ಅದಕ್ಕೆ ಉತ್ತರವಾಗಿ ಈ ಕೇಂದ್ರವನ್ನು ತರಲಾಗುತ್ತಿದೆ. ಮೊದಲ ಹಂತದಲ್ಲಿ 500‌ ಕೋಟಿ ಹೂಡಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಆಗಲಿದೆ. ರಾಜ್ಯ ಸರ್ಕಾರ ಭೂಮಿ ಹಂಚಿಕೆ ಮಾಡಿದ ಕೂಡಲೇ ಯೋಜನೆ ಅನುಷ್ಠಾನಕ್ಕೆ ಕಾರ್ಯೋನ್ಮುಖವಾಗುತ್ತೇವೆ. ಈ ಬಗ್ಗೆ ಇನ್ನೂ ಮುಖ್ಯಮಂತ್ರಿಗಳು ಸ್ಪಂದಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಟೋಮೇಟಿವ್ ರಿಸರ್ಚ್ ಇಂಡಿಯಾ ಸಂಸ್ಥೆ‌ಯ ಘಟಕ ತೆರೆಯಲು 100 ಎಕರೆ ಬೇಕೆಂದು ಸ್ವತಃ ನಾನೇ ಸಿಎಂ ಅವರಿಗೆ ಪತ್ರ ಬರೆದಿದ್ದೇನೆ. ಮಂಡ್ಯದಲ್ಲೇ ಜಾಗ ಕೊಡುವಂತೆ ಕೋರಿ ಪತ್ರ ಬರೆದಿದ್ದೇನೆ. ರಾಜ್ಯದಲ್ಲಿ ಆಟೋಮೊಬೈಲ್ ಕ್ಷೇತ್ರದ ಬಲವರ್ಧನೆಗೆ ಕೇಂದ್ರವು ಬದ್ಧವಾಗಿದೆ. ಇದಕ್ಕಾಗಿಯೇ ಭೂಮಿ ಕೊಡಲು ಸಿಎಂಗೆ ನಾನೇ ಪತ್ರ ಬರೆದಿದ್ದೇನೆ. ನಾನು ನಾಟಕವಾಡಲು ಪತ್ರ ಬರೆದಿಲ್ಲ. ನಾಟಕವಾಡಲಿಕ್ಕೆ ಪ್ರಧಾನಿಗಳು ನನಗೆ ಈ ಸ್ಥಾನ ಕೊಟ್ಟಿಲ್ಲ. ರಾಜ್ಯದ ಕೈಗಾರಿಕಾಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಯಾವ ಅನ್ಯಾಯವೂ ಆಗಿಲ್ಲ ಎಂದು ಹೇಳಿದರು.

ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿಲ್ಲ:

ಕೇಂದ್ರದ ಆಯವ್ಯಯ ಬಗ್ಗೆ ಸಿಎಂ ಹೇಳಿಕೆ ಗಮನಿಸಿದ್ದೇನೆ. ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ತಮ್ಮ 17ನೇ ಬಜೆಟ್ ಮಂಡನೆಗೆ ಅವರು ತಯಾರಿ ಮಾಡುತ್ತಿದ್ದಾರೆ. 17ನೇ ದಾಖಲೆ ಬಜೆಟ್ ಎಂಬ ಹಮ್ಮು ಬಿಮ್ಮು ಇಟ್ಟುಕೊಂಡಿದ್ದಾರೆ. ಇಷ್ಟೊಂದು ಬಜೆಟ್ ಗಳನ್ನು ಮಂಡನೆ ಮಾಡಿದವರಿಗೆ ಕೇಂದ್ರದ ದೂರದೃಷ್ಟಿಯುಳ್ಳ ಬಜೆಟ್ ಬಗ್ಗೆ ತಿಳಿಯದಿಲ್ಲವಾಯಿತೇ ಅವರು ಟೀಕಿಸಿದರು.

ನರೇಂದ್ರ ಮೋದಿ ಅವರಿಂದ ಉತ್ತಮ ಕೆಲಸ:

ನರೇಂದ್ರ ಮೋದಿ ಅವರ ಸರಕಾರ ಎಷ್ಟು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಇಡೀ ಜಗತ್ತು ನೋಡುತ್ತಿದ್ದೆ. ಯೂರೋಪಿಯನ್‌ ಒಕ್ಕೂಟ, ಅಮೆರಿಕದ ಜತೆ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಬಿದ್ದಿದೆ. ಅನೇಕ ದಾಖಲೆಗಳು ನಿರ್ಮಾಣವಾಗುತ್ತಿವೆ. ಪ್ರಧಾನಿಗಳ ದೂರದೃಷ್ಟಿಯಿಂದ ಅನೇಕ ಒಳ್ಳೇ ಕೆಲಸಗಳು ಆಗುತ್ತಿವೆ. ವಾಣಿಜ್ಯ ಚಟುವಟಿಕೆಗಳು ಹೆಚ್ಚಿ ಹೊರದೇಶಗಳ ನಡುವೆ ರಫ್ತು ವಹಿವಾಟು ಹೆಚ್ಚಿ ರಾಷ್ಟ್ರದ ರೈತರಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

53ಕ್ಕೂ ಹೆಚ್ಚಿನ ಯೋಜನೆಗಳು ರಾಜ್ಯ ಸರ್ಕಾರಕ್ಕೆ:

ಕೇಂದ್ರದ 53ಕ್ಕೂ ಹೆಚ್ಚಿನ ಯೋಜನೆಗಳ ಪ್ರಯೋಜನವನ್ನು ರಾಜ್ಯ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿಲ್ಲ. ಇವರ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಬಜೆಟ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಖಾಲಿ ಚೆಂಬು ರಾಜ್ಯ ಸರ್ಕಾರದ್ದು. ಕೇಂದ್ರ ಸರಕಾರ ಕೊಟ್ಟ ದುಡ್ಡನ್ನು ರಾಜ್ಯ ಸರಕಾರ ಸರಿಯಾಗಿ ಬಳಸಿಕೊಂಡಿಲ್ಲ.16ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿದ್ದದ್ದು 50,000 ಕೋಟಿ. ಈಗ ಅದನ್ನು 63,000 ಕೋಟಿಗೆ ಏರಿಸಲಾಗಿದೆ. ಇದು ಖಾಲಿ ಚೊಂಬೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ಕಬ್ಬಿಣ, ಉಕ್ಕು ಕಾರ್ಖಾನೆ ಪುನಶ್ಚೇತನ:

ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ 4,000 ರಿಂದ 5,000 ಕೋಟಿ ಹೂಡಿಕೆ ಮಾಡುತ್ತಿದ್ದೇವೆ. ಸೇನೆ ಮತ್ತು ವೈಮಾನಿಕ ಕ್ಷೇತ್ರಕ್ಕೆ ಅತ್ಯಗತ್ಯವಾಗಿ ಬೇಕಿರುವ ಸ್ಪೆಶಾಲಿಟಿ ಸ್ಟೀಲ್‌ ಉತ್ಪಾದನೆಗೆ ಈ ಕಾರ್ಖಾನೆಯಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಹಾಗೆಯೇ ಹೆಚ್.ಎಂ.ಟಿ. ಕಾರ್ಖಾನೆ ಪುನಶ್ಚೇತನಕ್ಕೂ ನಾನು ಕೆಲಸ ಮಾಡುತ್ತಿದ್ದೇನೆ. ಆದರೆ, ರಾಜ್ಯ ಸರ್ಕಾರ ಅದಕ್ಕೂ ಕೊಕ್ಕೆ ಹಾಕಲು ಹೊರಟಿದೆ. ಅರಣ್ಯ ಇಲಾಖೆ ಹೆಚ್.ಎಂ.ಟಿ. ಜಾಗ ನಮ್ಮದು ಎಂದು ತಕರಾರು ತೆಗೆದು ಕೂತಿದ್ದಾರೆ. ನಾನು ಏನು ಮಾಡಲಿ? ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಕೇಂದ್ರವನ್ನು ದೂರುವುದು ತಪ್ಪು:

ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆಗೆ ಬಳ್ಳಾರಿಯ ಸಂಡೂರಿನಲ್ಲಿ ರಾಜ್ಯ ಸರ್ಕಾರವೇ ಗಣಿ ಹಂಚಿಕೆ ಮಾಡಿದೆ. ಇನ್ನೊಂದೆಡೆ ಅಲ್ಲಿ ಆ ಸಂಸ್ಥೆ ಗಣಿಗಾರಿಕೆ ನಡೆಸುವುದಕ್ಕೆ ರಾಜ್ಯ ಸರ್ಕಾರವೇ ಅಡ್ಡಿ ಮಾಡುತ್ತಿದೆ. ನಾನು ಕೇಂದ್ರ ಸಚಿವನಾಗಿ ಒಂದೂವರೆ ವರ್ಷ ಕಳೆದರೂ ಈವರೆಗೆ ರಾಜ್ಯದ ಒಬ್ಬ ಸಚಿವ ನನ್ನನ್ನು ಭೇಟಿ ಮಾಡಿ ಚರ್ಚಿಸಿಲ್ಲ. ಮೊದಲು ಕೇಂದ್ರದ ಜೊತೆ ಒಳ್ಳೆಯ ಸಂಬಂಧ ಬೆಳೆಸಿ ಯೋಜನೆ ಪಡೆಯಲು ಪ್ರಯತ್ನಿಸಿ. ನಿಮ್ಮ ನಡವಳಿಕೆ ಬದಲಿಸಿಕೊಳ್ಳಿ. ಎಲ್ಲಕ್ಕೂ ಕೇಂದ್ರಕ್ಕೆ ಬೆರಳು ಮಾಡುವುದಾದರೆ ರಾಜ್ಯ ಸರ್ಕಾರ ಎನ್ನುವುದು ಏಕೆ ಇರಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಸಮಯ ಬಂದಾಗ ವಾಪಸ್ಸು ಬರುತ್ತೇನೆ:

ರಾಜ್ಯದ ಪರಿಸ್ಥಿತಿ ನೋಡಿದರೆ ಬಹಳ ನೋವಾಗುತ್ತದೆ. ರಾಜ್ಯದ ಸದ್ಯದ ರಾಜಕೀಯ ವಾತಾವರಣ ನೋಡಿದರೆ ನಾನು ಇಲ್ಲಿಯೇ ಇಲ್ಲಿರಬೇಕಿತ್ತು ಎನಿಸುತ್ತಿದೆ. ಸಮಯ ಬಂದಾಗ ವಾಪಸ್ಸು ಬರುತ್ತೇನೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.

ರಾಜ್ಯ ಸರ್ಕಾರದಿಂದ ಸಂಸದರು ಹೇಳಿಸಿಕೊಳ್ಳಬೇಕಿಲ್ಲ:

ರಾಜ್ಯಕ್ಕೆ ಏನೂ ತರಬೇಕು ಎಂಬುದನ್ನು ರಾಜ್ಯ ಸರ್ಕಾರದಿಂದ ಸಂಸದರು ಹೇಳಿಸಿಕೊಳ್ಳುವವರಲ್ಲ. ಎಲ್ಲರಿಗೂ ರಾಜ್ಯದ ಬಗ್ಗೆ ಕಾಳಜಿ, ಕಳಕಳಿ ಇದೆ. ರಾಜ್ಯದ ಯಾರಾದರೂ ಒಬ್ಬರು ಮಂತ್ರಿ ಬಂದು ನನ್ನ ಬಳಿ ರಾಜ್ಯಕ್ಕೆ ಇಂತಹ ಪ್ರಾಜೆಕ್ಟ್ ತರಿಸಿಕೊಡಿ ಎಂದು ಕೇಳಿಲ್ಲ. ನಮ್ಮ ಸರ್ಕಾರ ಬಂದು ಹತ್ತಿರತ್ತರ ಎರಡು ವರ್ಷ ಆಗುತ್ತಾ ಬರುತ್ತಿದೆ. ಒಮ್ಮೆಯಾದರೂ ನಮ್ಮನ್ನು ಕರೆಸಿ ಚರ್ಚಿಸಿಲ್ಲ, ಅವರೂ ಬಂದಿಲ್ಲ. ಕಾಳಜಿ ಯಾರಿಗಿಲ್ಲ ಎನ್ನುವುದಕ್ಕೆ ಇಷ್ಟು ಸಾಕ್ಷ್ಯ ಸಾಕಲ್ಲವೇ ಎಂದು ಪ್ರಶ್ನಿಸಿದರು.

ಮೆಟ್ರೋ ದರ ಏರಿಕೆ ಕೇಂದ್ರದ ಹೊಣೆಯಲ್ಲ:

ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಬೆಲೆ ಏರಿಕೆಗೆ ಕೇಂದ್ರ ಸರಕಾರ ಹೊಣೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಕೇಂದ್ರದ ಜತೆ ಸಂಘರ್ಷ ಯಾಕೆ? ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯದ ನಡುವೆ ಉತ್ತಮ ಬಾಂಧವ್ಯ ಇರಬೇಕು. ಎಲ್ಲದಕ್ಕೂ ಕೇಂದ್ರದ ಕಡೆ ಬೆರಳು ತೋರಿಸುವ ಕೆಲಸವನ್ನು ರಾಜ್ಯ ಸರ್ಕಾರ ಬಿಡಬೇಕು. ಪ್ರಧಾನಮಂತ್ರಿಗಳನ್ನು ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಬೈಯ್ಯೋದು, ಅಮೇಲೆ ಪತ್ರ ಕಳಿಸುವ ವರ್ತನೆಯನ್ನು ರಾಜ್ಯ ಸರ್ಕಾರ ಬದಲಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಿಎಂಗೆ ಕುಮಾರಸ್ವಾಮಿನೇ ಟಾರ್ಗೆಟ್:

ಮುಖ್ಯಮಂತ್ರಿಗಳು ನಿರಂತರವಾಗಿ ಜೆಡಿಎಸ್ ಪಕ್ಷವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಯಾವ ರೀತಿ ದುರುಪಯೋಗ ಮಾಡಿಕೊಂಡರು ಎಂಬುದು ಗೊತ್ತಿದೆ. ಸಿನಿಮಾ ರಂಗದಲ್ಲಿ ದುಡಿದ ದುಡ್ಡಲ್ಲಿ 43 ಎಕರೆ ಖರೀದಿ ಮಾಡಿದ್ದೆ. ನನ್ನ 4 ಎಕರೆ ವಶಪಡಿಸಿಕೊಳ್ಳಲಿಕ್ಕೆ ಎಸ್‌.ಐ.ಟಿ ಬೇರೆ ರಚನೆ ಮಾಡಿದ್ದಾರೆ. ಎಷ್ಟೊಂದು ಕಿರುಕುಳ ನೀಡುತ್ತಿದ್ದಾರೆ ಎಂಬುದು ನನಗಷ್ಟೇ ಗೊತ್ತು. ಇನ್ನು ಎರಡು ಕೇಸ್ ಗಳನ್ನು ಕೋರ್ಟ್ ನಲ್ಲಿ ಎದುರಿಸುತ್ತಿದ್ದೇನೆ. ದೇವೇಗೌಡರ ಜೊತೆ ಬೆಳೆದುಬಂದ ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಗಿಸುತ್ತೇವೆ ಎಂದರೆ ಅದು ಅವರ ಭ್ರಮೆ ಅಷ್ಟೇ. ಲಕ್ಷಾಂತರ ಕಾರ್ಯಕರ್ತರು ಜೆಡಿಎಸ್ ಪಕ್ಷ ಕಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿಯಿಂದ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಟಿಡಿ ನಮ್ಮ ಜೊತೆಯಲ್ಲಿ ಇಲ್ಲ:

ಜಿ.ಟಿ. ದೇವೇಗೌಡ ನಮ್ಮ ಜೊತೆಯಲ್ಲಿ ಇಲ್ಲ. ಅವರ ಬಗ್ಗೆ ನೀವು ಮಾಧ್ಯಮದವರು ಕೇಳುವುದು ಬೇಡ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದು ಇಲ್ಲದವರನ್ನು ನಾವು ಜತೆಯಲ್ಲಿಟ್ಟುಕೊಳ್ಳಬೇಕಾ? ನನ್ನ ಮುಂದೆ ಇನ್ನು ಮುಂದೆ ಪದೇಪದೆ ಅವರ ಹೆಸರು ಪ್ರಸ್ತಾಪ ಮಾಡಬೇಡಿ. ನಮ್ಮನ್ನು ರಾಜೀನಾಮೆ ಕೊಡುತ್ತಾರ ಎಂದು ಕೇಳಿ ಮುಖ್ಯಮಂತ್ರಿಗೆ ಸರ್ಟಿಫಿಕೇಟ್ ಕೊಡುತ್ತಾರೆ ನಮಗೆ ಒಂದು ದಿನವೂ ಸರ್ಟಿಫಿಕೇಟ್ ಕೊಡಲಿಲ್ಲ. ಅಂಥವರನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಕಾ? ಎಂದು ಹೇಳಿದರು.

ಮಾಜಿ ಮಂತ್ರಿ ಸಾ.ರಾ. ಮಹೇಶ್‌, ಸಂಸದ ಯದುವೀರ್‌ ಒಡೆಯರ್‌, ಶಾಸಕರಾದ ಜಿ.ಡಿ. ಹರೀಶ್‌ ಗೌಡ, ಶ್ರೀವತ್ಸ, ಮಾಜಿ ಶಾಸಕ ಅಶ್ವಿನ್‌ ಕುಮಾರ್‌ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon