ಕೃತಕ ಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ

WhatsApp
Telegram
Facebook
Twitter
LinkedIn

ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ಹಂತದ ಆಡಳಿತ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸುರಕ್ಷಿತ, ನೈತಿಕ ಮತ್ತು ಪಾರದರ್ಶಕ ರೀತಿಯಲ್ಲಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವುದಕ್ಕೆ ಕೃತಕ ಬುದ್ಧಿಮತ್ತೆಯ (ಎಐ) ಹೊಣೆಗಾರಿಕೆ ಸಮಿತಿ ರಚಿಸಲಾಗಿದೆ.

ಇನ್ಫೊಸಿಸ್‌ನ ಸಹ-ಸಂಸ್ಥಾಪಕ ಹಾಗೂ ಆಕ್ಸಿಲರ್‌ ವೆಂಚರ್ಸ್‌ನ ಚೇರ್ಮನ್‌ ಕ್ರಿಸ್ ಗೋಪಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ಮತ್ತು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಸಹ-ಅಧ್ಯಕ್ಷತೆಯಲ್ಲಿ ಉದ್ಯಮ, ಶೈಕ್ಷಣಿಕ, ನೀತಿ- ನಿರೂಪಣೆ ಮತ್ತು ಪ್ರಮುಖ ಕಾನೂನು ತಜ್ಞರನ್ನು ಒಳಗೊಂಡ 13 ಸದಸ್ಯರ ಸಮಿತಿ ಇದಾಗಿದೆ.

ಸಮಿತಿಯ ಮೊದಲ ಸಭೆ ಗುರುವಾರ ಬೆಂಗಳೂರಿನಲ್ಲಿ ನಡೆಯಿತು. ತ್ವರಿತವಾಗಿ ಬದಲಾಗುತ್ತಿರುವ ಎಐ ವಲಯ ಮತ್ತು ಎಐ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸಮರ್ಥ ಆಡಳಿತ ಚೌಕಟ್ಟುಗಳನ್ನು ರೂಪಿಸುವುದರ ಅಗತ್ಯವನ್ನು ಹಾಗೂ ಅದರಲ್ಲೂ ವಿಶೇಷವಾಗಿ ನಾಗರಿಕರ ಮೇಲೆ ಪರಿಣಾಮ ಬೀರುವ ವ್ಯವಸ್ಥೆಗಳಲ್ಲಿನ ಎಐ ಪ್ರಭಾವವನ್ನು ಪ್ರಮುಖವಾಗಿ ಚರ್ಚಿಸಲಾಯಿತು.

ಸರ್ಕಾರದ ಆಡಳಿತ ಯಂತ್ರದಾದ್ಯಂತ ನಿಯೋಜಿಸಲಾಗುವ ಎಐ ಸೌಲಭ್ಯಗಳು ಸುರಕ್ಷಿತ, ನ್ಯಾಯಯುತ, ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ನಾವೀನ್ಯತೆ  ಜಾರಿಗೊಳಿಸುವ ಗುರಿ ಹೊಂದಿರುವ ಕರ್ನಾಟಕಕ್ಕಾಗಿ ಜವಾಬ್ದಾರಿಯುತ ಎಐ ನೀತಿ ಮತ್ತು ಅನುಷ್ಠಾನ ಮಾರ್ಗಸೂಚಿಯನ್ನು ಸಮಿತಿಯು ಅಭಿವೃದ್ಧಿಪಡಿಸಲಿದೆ.

ಈ ಉಪಕ್ರಮದ ಕುರಿತು ಮಾತನಾಡಿರುವ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕವು ತನ್ನ ಡೀಪ್‌ಟೆಕ್ ದಶಕವನ್ನು ಪ್ರವೇಶಿಸುತ್ತಿದ್ದಂತೆ, ರಾಜ್ಯವು ಕೃತಕ ಬುದ್ಧಿಮತ್ತೆ ನಾವೀನ್ಯತೆಗೆ ವೇಗ ನೀಡುವುದರ ಜೊತೆಗೆ ಈ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಮತ್ತು ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಉದ್ದೇಶದಿಂದ ನಿಯೋಜಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ಗಮನಹರಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಎಐ ಉತ್ತರದಾಯಿ ಸಮಿತಿಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕರ ನಂಬಿಕೆ  ರಕ್ಷಿಸುವಾಗ ನಾವೀನ್ಯತೆ ಉತ್ತೇಜಿಸುವ ಆಡಳಿತದ ಚೌಕಟ್ಟು ರೂಪಿಸುವುದಕ್ಕೆ ನೆರವಾಗಲು ಉದ್ಯಮ, ಶೈಕ್ಷಣಿಕ ಮತ್ತು ನೀತಿ- ನಿರೂಪಣೆ ವಲಯದ ಪ್ರಮುಖ ತಜ್ಞರ ಸಲಹೆ ಹಾಗೂ ಮಾರ್ಗದರ್ಶನ ಪಡೆಯಲಿದೆ. ಈ ಉಪಕ್ರಮವು ಕರ್ನಾಟಕವು ಅತ್ಯಾಧುನಿಕ ಮತ್ತು ಹೊಣೆಗಾರಿಕೆಯ ಎಐ  ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಮುಂದುವರಿಯಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಸಮಿತಿಯ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಪ್ರತಿಕ್ರಿಯಿಸಿ, ಕೃತಕ ಬುದ್ಧಿಮತ್ತೆ ಕುರಿತು ಈ ಸಮಿತಿಯನ್ನು ರಚಿಸಿರುವುದಕ್ಕಾಗಿ ಕರ್ನಾಟಕ ಸರ್ಕಾರವನ್ನು ಅಭಿನಂದಿಸುತ್ತೇನೆ. ಕೃತಕ ಬುದ್ಧಿಮತ್ತೆ ಅತ್ಯಂತ ಪರಿಣಾಮಕಾರಿ ಹಾಗೂ ವ್ಯಾಪಕ ಬದಲಾವಣೆಗಳನ್ನು ತರಬಲ್ಲ ತಂತ್ರಜ್ಞಾನವಾಗಿದ್ದು, ಇದು ಕರ್ನಾಟಕದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವ ಮಹತ್ತರ ಸಾಮರ್ಥ್ಯವನ್ನು ಈಗಾಗಲೇ ತೋರಿಸುತ್ತಿದೆ. ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಮಗೆ ಸಾಧ್ಯವಾದರೆ, ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಗೆ ಸಮಗ್ರ ಚೌಕಟ್ಟನ್ನು ರೂಪಿಸುವಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ರಾಜ್ಯವಾಗಬಹುದು ಎಂದಿದ್ದಾರೆ.

ಇದರಿಂದ ನಾಗರಿಕರಿಗೆ ಉತ್ತಮ ಸೇವೆಗಳು ದೊರೆಯುವ ಜೊತೆಗೆ 21ನೇ ಶತಮಾನದ ಹೊಸ  ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಮತ್ತು ನಮ್ಮ ನಾವೀನ್ಯತೆ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲಿದೆ. ಕೃತಕ ಬುದ್ಧಿಮತ್ತೆಯನ್ನು ವಿವೇಕಯುತ ಹಾಗೂ ಜವಾಬ್ದಾರಿಯುತ ರೀತಿಯಲ್ಲಿ ಬಳಸಿಕೊಳ್ಳುವುದರಿಂದ ಆರ್ಥಿಕ ಬೆಳವಣಿಗೆಗೆ ಗಣನೀಯವಾಗಿ ವೇಗ ನೀಡಬಹುದು. ಈ ಸಮಿತಿಯನ್ನು ಸ್ಥಾಪಿಸಿ ನಮ್ಮ ಮೇಲೆ ಈ ಮಹತ್ವದ ಜವಾಬ್ದಾರಿಯನ್ನು ವಹಿಸಿರುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

 

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon