ಬೆಂಗಳೂರು: ಬಮುಲ್ ವ್ಯಾಪ್ತಿಯಲ್ಲಿನ ಹಾಲು ಉತ್ಪಾದಕರಿಗೆ ಯುಗಾದಿ ಉಡುಗೊರೆಯಾಗಿ ಪ್ರತಿ ಲೀಟರ್ ಹಾಲಿಗೆ 1 ರೂ. ಹೆಚ್ಚಿನ ಪ್ರೋತ್ಸಹ ಧನ ನೀಡಲಾಗುವುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಗುರುವಾರ ನಗರದ ಬಮುಲ್ ಕಚೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರ ವರೆಗೆ 59,39,78,492 ಲೀಟರ್ ಹಾಲು ಉತ್ಪಾದನೆಯಾಗಲಿದ್ದು, ಈ ಅವಧಿಯಲ್ಲಿ ಹಾಲು ಉತ್ಪಾದಿಸಿದ ಎಲ್ಲಾ ರೈತರಿಗೆ ಒಟ್ಟು 59.39 ಕೋಟಿ ರೂ. ಹಣ ಪಾವತಿಸುತ್ತೇವೆ ಎಂದು ತಿಳಿಸಿದರು.
ಬಮುಲ್ ಒಕ್ಕೂಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 1800 ಗುತ್ತಿಗೆ ಸಿಬ್ಬಂದಿಗೆ ವಾರ್ಷಿಕವಾಗಿ ತಲಾ 5 ಸಾವಿರ ರೂ. ಉಡುಗೊರೆ ನೀಡುವುದಕ್ಕೆ ಒಟ್ಟು 90 ಲಕ್ಷ ರೂ.ಗಳು ಮತ್ತು ಒಕ್ಕೂಟದಲ್ಲಿ 2,294 ಸದಸ್ಯ ಸಂಘಗಳಿದ್ದು, ಪ್ರತಿ ಸಂಘಕ್ಕೆ ತಲಾ 15 ಸಾವಿರ ರೂ.ಗಳಂತೆ ಒಟ್ಟು 3.44 ಕೋಟಿ ರೂ. ನೀಡಲಿದ್ದೇವೆ. ಜುಲೈ 24ರಿಂದ ಬಾಕಿಯಿರುವ 3 ಕಂತುಗಳ ತುಟ್ಟಿಭತ್ಯೆ ಮೂಲ ವೇತನದ ಶೇ.5.75ರಷ್ಟು ಆಗುವ ಮೊತ್ತ 4.68 ಕೋಟಿ ರೂ.ಗಳನ್ನು ಪಾವತಿಸಲಿದ್ದೇವೆ ಎಂದು ತಿಳಿಸಿದರು.
ಕನಿಷ್ಠ 24 ಲಕ್ಷ ಲೀಟರ್ ಹಾಲು ಸಂಗ್ರಹದ ಗುರಿ :
ಬೆಂಗಳೂರು ಹಾಲು ಒಕ್ಕೂಟದಲ್ಲಿ ಪ್ರತಿ ದಿನಕ್ಕೆ 18 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಇದೀಗ ಬೇಸಿಗೆ ಆಗಿದ್ದರಿಂದ ಇದು 16 ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ. ಇನ್ನೊಂದು 2 ತಿಂಗಳು ಕಳೆದು ಮಳೆಗಾಲ ಬಂದರೆ ಕನಿಷ್ಠ 24 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದರು.
500 ಕೋಟಿ ರೂ. ಹೆಚ್ಚುವರಿ ವಹಿವಾಟು:
2024-25ನೇ ಸಾಲಿನಲ್ಲಿ ಒಕ್ಕೂಟದಲ್ಲಿ ಸುಮಾರು 2906 ಕೋಟಿ ರೂ. ವಹಿವಾಟು ಆಗಿತ್ತು. ಪ್ರಸಕ್ತ 2025-26ನೇ ಸಾಲಿನಲ್ಲಿ 3,400 ಕೋಟಿ ರೂ. ವಹಿವಾಟು ಆಗುವ ನೀರಿಕ್ಷೆಯಿದ್ದು, ಈ ಮೂಲಕ ಒಕ್ಕೂಟವು ಸುಮಾರು 500 ಕೋಟಿ ರೂ. ಹೆಚ್ಚುವರಿ ವಹಿವಾಟು ಸಾಧಿಸುವ ಗುರಿ ಹೊಂದಿದ್ದೇವೆ ಎಂದರು.
ಖಾಸಗಿ ಸಂಸ್ಥೆಗಳಿಂದ ಪೈಪೋಟಿ:
1965ರಲ್ಲಿ ಸ್ಥಾಪನೆಯಾದ ಬೆಂಗಳೂರು ಹಾಲು ಒಕ್ಕೂಟವು ಇಂದಿನವರೆಗೂ ತನ್ನದೇ ಆದ ಇತಿಹಾಸ ಮತ್ತು ವಿಶ್ವಾಸ ಕಾಪಾಡಿಕೊಂಡು ಬಂದಿದೆ. ಆದರೆ ಇತ್ತಿಚೇಗೆ ಖಾಸಗಿ ಕಂಪನಿಗಳ ಪೈಪೋಟಿ ಹೆಚ್ಚಾಗಿದೆ. ಈ ಪೈಪೋಟಿ ನಡುವೆಯೂ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಿದೆ. ನಂದಿನಿ ಹಾಲನ್ನು ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಕೊಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ರೈತರಿಗೆ ಶಕ್ತಿ ತುಂಬುವುದೇ ನಮ್ಮ ಗುರಿ:
ಹೊಸ ಆಡಳಿತ ಮಂಡಳಿ ಸ್ಥಾಪನೆಯಾದ ಮೇಲೂ 14.5 ಕೋಟಿ ರೂ. ನಷ್ಟದಲ್ಲಿದ್ದರೂ ಸಹ ಹಾಲು ಉತ್ಪಾದಕರಿಗೆ ಮಳೆಗಾಲದಲ್ಲಿ 2 ರೂ. ಕಡಿಮೆ ಮಾಡುವುದು ಮತ್ತು ಬೇಸಿಗೆಯಲ್ಲಿ ಹೆಚ್ಚಿಸುವುದನ್ನು ಮಾಡುತ್ತಿಲ್ಲ. ರೈತರಿಗೆ ಶಕ್ತಿ ತುಂಬುವುದೇ ನಮ್ಮ ಗುರಿಯಾಗಿದೆ ಎಂದು ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದರು.














