ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಸಂಬಂಧ ಮಾತನಾಡಿದ ಅವರು, ಈ ಬಜೆಟ್ ಗಮನಿಸಿದರೆ ರಾಜ್ಯ ಸರ್ಕಾರದ ಆರ್ಥಿಕ ಬೌದ್ಧಿಕ ದಿವಾಳಿತನ ಪ್ರದರ್ಶನಗೊಂಡಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ತನ್ನ ರಾಜಕೀಯ ಸಂಧ್ಯಾಕಾಲದಲ್ಲಿರುವ ಈ ಸಂದರ್ಭದಲ್ಲಿ 17ನೇ ಬಜೆಟ್ ಮಂಡಿಸಿದ್ದಾರೆ. ಅವರಿಗೆ ಒಂದು ಸುವರ್ಣಾವಕಾಶ ಇತ್ತು. ತಮ್ಮ ರಾಜಕೀಯ ಜೀವನದ ಸುದೀರ್ಘ ಅನುಭವದ ಆಧಾರದ ಮೇಲೆ ರಾಜ್ಯದ ಸಂಕಷ್ಟಗಳಿಗೆ ನಾಡಿನ ಜನರ ಅಪೇಕ್ಷೆಗೆ ತಕ್ಕಂತೆ ಉತ್ತರ ಕಂಡುಕೊಳ್ಳುವ ಅವಕಾಶ ಇತ್ತು. ಆದರೆ, ಈ ಬಜೆಟ್ ನೋಡಿದಾಗ ಅಸಹಾಯಕರಾಗಿ ಕೈಚೆಲ್ಲಿದ್ದಾರೆಂಬ ಭಾವನೆ ರಾಜ್ಯದ ಜನರಲ್ಲಿ ಮೂಡಿದೆ ಎಂದು ವಿಶ್ಲೇಷಿಸಿದರು.
ಒಟ್ಟಾರೆಯಾಗಿ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರಕ್ಕೆ ಈ ಬಜೆಟ್ಟನ್ನು ಸೀಮಿತ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದಾಯ ಸಂಗ್ರಹದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅತಿ ಹೆಚ್ಚು ಸಾಲ ಮಾಡುವ ಮೂಲಕ ಈ ನಾಡಿನ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಎಂದರು.
ಪದೇಪದೇ ಬೆಲೆ ಏರಿಕೆಯ ಬ್ರಹ್ಮಾಸ್ತ್ರ:
ಸಾಲದ ಭಾರ ಒಂದು ಕಡೆಯಾದರೆ, ಅಸಲು, ಬಡ್ಡಿ ಕಟ್ಟುವುದೇ ರಾಜ್ಯಕ್ಕೆ ದೊಡ್ಡ ಹೊರೆ ಆಗಿದೆ. ವಿತ್ತೀಯ ಕೊರತೆ ಹೆಚ್ಚಾಗಿ ರಾಜ್ಯದ ಜನರ ಮೇಲೆ ಪದೇಪದೇ ಬೆಲೆ ಏರಿಕೆಯ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡುತ್ತಿರುವುದು ಈ ನಾಡಿನ ದುರಂತವಾಗಿದೆ. ಮುಖ್ಯಮಂತ್ರಿಗಳು ಬಜೆಟ್ ಅನ್ನು ಸುದೀರ್ಘವಾಗಿ ಓದುತ್ತಿರುವಾಗ ಆಡಳಿತ ಪಕ್ಷದ ಸದಸ್ಯರನ್ನು ಗಮನಿಸುತ್ತಿದ್ದೆ. ಆಡಳಿತ ಪಕ್ಷದ ಸದಸ್ಯರಿಗೂ ಈ ಬಜೆಟ್ ಬಗ್ಗೆ ಆಸಕ್ತಿ ಇರಲಿಲ್ಲ; ಅವರು ಅಸಹಾಯಕರಾಗಿ ಸದನದಿಂದ ಹೊರಹೋದ ಘಟನೆಯನ್ನೂ ನಾನು ಗಮನಿಸಿದ್ದೇನೆ ಎಂದು ತಿಳಿಸಿದರು.
ಬಜೆಟ್ ಹಸಿ ಸುಳ್ಳಿನಿಂದ ಕೂಡಿದೆ:
ಬಜೆಟ್ ಮಂಡಿಸಿದ ಹಣಕಾಸು ಸಚಿವರು, ಪ್ರಗತಿಶೀಲ ರಾಜ್ಯದ ಜನರ ತೆರಿಗೆ ಹಣಕ್ಕೆ ಪ್ರಮುಖ ಟ್ರಸ್ಟಿಯಾದ ನಾನು ಸರ್ವರ ಏಳಿಗೆಯನ್ನು ಬಯಸಿ 17ನೇ ಆಯವ್ಯಯವನ್ನು ಮಂಡಿಸುತ್ತಿದ್ದೇನೆ. ನಾಡಿನ 7 ಕೋಟಿ ಕನ್ನಡಿಗರ ನಿರೀಕ್ಷೆಗಳನ್ನು ನಾವು ಅರಿತಿದ್ದೇವೆ. ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಾ ಇದೆ. ಈ ಆಯವ್ಯಯವು ನಾಡಿನ ರೈತರು, ದಮನಿತರ, ಮಹಿಳೆಯರ, ಅಶಕ್ತರ, ಅಲ್ಪಸಂಖ್ಯಾತರ, ವಿದ್ಯಾರ್ಥಿ ಯುವಜನರ, ವ್ಯಾಪಾರ ಮತ್ತು ಕೈಗಾರಿಕೋದ್ಯಮದಲ್ಲಿ ತೊಡಗಿಕೊಂಡವರ ಕನಸನ್ನು ಮತ್ತು ಆತ್ಮವಿಶ್ವಾಸವನ್ನು ಪ್ರತಿನಿಧಿಸುವ ಜೀವಂತ ದಾಖಲೆ ಆಗಿದೆ ಎಂದು ಹೇಳಿದ್ದರಷ್ಟೇ. ಆದರೆ ಬಜೆಟ್ ಹಸಿ ಸುಳ್ಳಿನಿಂದ ಕೂಡಿದೆ. ಸರ್ಕಾರದ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಯಲ್ಲಿ ರಾಜ್ಯದ ರಸ್ತೆ, ಸೇತುವೆ, ಕಟ್ಟಡ ನಿರ್ಮಾಣಕ್ಕೂ ನಮ್ಮ ಸರಕಾರ ಆದ್ಯತೆ ನೀಡಿದೆ ಎಂದಿದ್ದಾರೆ. ಹಾಗಿದ್ದರೆ, ಕಳೆದ 3 ವರ್ಷದಲ್ಲಿ ಈ ಸರ್ಕಾರ ಎಷ್ಟು ರಸ್ತೆಗಳನ್ನು ಮಾಡಿದೆ? ಎಷ್ಟು ಸೇತುವೆಗಳನ್ನು ಕಟ್ಟಿದೆ? ಎಷ್ಟು ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಅಭಿವೃದ್ಧಿಯ ಕುರಿತು ಉಲ್ಲೇಖವಿಲ್ಲ:
ಒಂದು ರೀತಿ ಕಟ್ಟುಕಥೆ, ಸುಳ್ಳಿನ ಅಂಶಗಳಿಂದ ಬಜೆಟ್ ಕೂಡಿದೆ. ವಸತಿರಹಿತರಿಗೆ ಮನೆಗಳು, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಗಳನ್ನು ಕಲ್ಪಿಸಿಕೊಡಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇವೆ ಎಂದು ಇನ್ನೊಂದು ಸುಳ್ಳು ಹೇಳಿದ್ದಾರೆ. ಬಜೆಟ್ಟನ್ನು ಸಂಪೂರ್ಣವಾಗಿ ನೋಡುತ್ತ ಹೋದರೆ ಒಂದು ರೀತಿ ಕಟ್ಟುಕಥೆ, ಸುಳ್ಳಿನ ಅಂಶಗಳಿಂದ ಇದು ಕೂಡಿದೆ ಎಂದು ಗಮನ ಸೆಳೆದರು.
ಜಾಹೀರಾತುಗಳಿಂದ ಅಡ್ಡದಾರಿಗೆ ಎಳೆಯುವ ಕೆಲಸ:
ಕಳೆದ ಎರಡ್ಮೂರು ವರ್ಷಗಳಿಂದ ಹಲವಾರು ಬಾರಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ; ನಮ್ಮ ತೆರಿಗೆ ನಮ್ಮ ಹಕ್ಕು- ಈ ವಿಚಾರ ಸಾಕಷ್ಟು ಬಾರಿ ಸದನದಲ್ಲೂ ಪ್ರಸ್ತಾಪ ಆಗಿದೆ. ಸದನದ ಹೊರಗಡೆಯೂ ಪ್ರಸ್ತಾಪ ಆಗಿದೆ. 100 ಬಾರಿ ಹೇಳಿದ್ದಾರೆ. ಜಾಹೀರಾತುಗಳ ಮೂಲಕವೂ ರಾಜ್ಯದ ಜನರನ್ನು ಅಡ್ಡದಾರಿಯಲ್ಲಿ ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದನ್ನು ನೆನಪಿಸಲು ಬಯಸುವುದಾಗಿ ಹೇಳಿದರು.
ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನ:
ಕರ್ನಾಟಕ ರಾಜ್ಯ ಕೇಂದ್ರ ಸರಕಾರಕ್ಕೆ 100 ರೂ. ಕೊಟ್ಟರೆ ಕೇವಲ 15 ರೂಪಾಯಿ ಮಾತ್ರ ನಮ್ಮ ರಾಜ್ಯಕ್ಕೆ ಕೊಡುತ್ತಿದ್ದಾರೆ; ಅನ್ಯಾಯ ಮಾಡುತ್ತಿದ್ದಾರೆ ಎಂದು ವಿಶ್ಲೇಷಣೆ ನಡೆಯುತ್ತಿದೆ. 4.3 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರ ಕಳಿಸಿಕೊಡುವುದಾಗಿ ಹೇಳುತ್ತಿದ್ದಾರೆ. ಆದಾಯ ತೆರಿಗೆ, ಜಿಎಸ್‍ಟಿ ಮತ್ತಿತರ ಮೂಲದಿಂದ ಇದು ಸಂಗ್ರಹ ಆಗುತ್ತಿದೆ. ಆದರೆ, ಇದರಲ್ಲಿ ನೇರ ತೆರಿಗೆ, ಪರೋಕ್ಷ ತೆರಿಗೆ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಮಹಾರಾಷ್ಟ್ರದ ನಂತರದಲ್ಲಿ ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯ ನಮ್ಮದೆಂದು ಒಪ್ಪಿಕೊಳ್ಳುತ್ತೇನೆ. ಆದರೆ, ಇವತ್ತು ಪ್ರತಿಷ್ಠಿತ ಸಂಸ್ಥೆಗಳಾದ ಇನ್‍ಫೋಸಿಸ್, ವಿಪ್ರೋ ಮೊದಲಾದ ಸಂಸ್ಥೆಗಳಿರುವ ಬೆಂಗಳೂರು ಮಹಾನಗರ ಹೆಡ್ ಕ್ವಾರ್ಟರ್ಸ್ ಮಾತ್ರ. ಆದರೆ, ಈ ಕಂಪೆನಿಗಳು ಇಡೀ ದೇಶದಲ್ಲಿ ವ್ಯವಹಾರ ಮಾಡುತ್ತವೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾಡುತ್ತಾರೆ. ನಮ್ಮ ದೇಶದಲ್ಲಿ ವ್ಯವಹರಿಸುವಾಗ ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಗ್ರಾಹಕರು ಹೆಚ್ಚಾಗಿದ್ದಾರೆ. ಕಂಪೆನಿಗಳ ಹೆಡ್ ಕ್ವಾರ್ಟರ್ಸ್ ಇಲ್ಲಿದ್ದರೂ ದೇಶಕ್ಕೇ ಸೇವೆಗಳನ್ನು ಕೊಡುತ್ತಾರೆ. ನಾನಾ ರಾಜ್ಯದಲ್ಲಿ ಅವರಿಗೆ ಗ್ರಾಹಕರಿದ್ದಾರೆ. ಈ ಅಂಶವನ್ನು ಕೂಡ ಗಮನಿಸಬೇಕಿದೆ. ದೇಶದ ಎಲ್ಲ ರಾಜ್ಯಗಳು ಸೇವೆ ಪಡೆಯುವ ಸಂದರ್ಭದಲ್ಲಿ ಇಲ್ಲಿಂದಲೇ ಎಲ್ಲವೂ ಉತ್ಪತ್ತಿ ಆಗುವುದಿಲ್ಲ. ಹೆಡ್ ಕ್ವಾರ್ಟರ್ಸ್‍ನಲ್ಲಿ ಇರುವ ಕಾರಣಕ್ಕಾಗಿ ನಮ್ಮ ರಾಜ್ಯದಿಂದ ಆ ತೆರಿಗೆ ಮೂಲಕ ಹೋಗುವುದನ್ನು ನಾವು ಗಮನಿಸಬೇಕು ಎಂದು ನುಡಿದರು.
ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ತೆರಿಗೆ ವಿನ್ಯಾಸ:
ರಕ್ಷಣಾ ಕ್ಷೇತ್ರದಲ್ಲಿ ಕೇಂದ್ರ ಸರಕಾರ ಎಷ್ಟು ವ್ಯಯ ಮಾಡುತ್ತಿದೆ? ನಮ್ಮ ರಾಜ್ಯದಲ್ಲೂ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕುರಿತ ಅಂಕಿ ಅಂಶಗಳು ಹಲವಾರು ಬಾರಿ ಸದನದಲ್ಲಿ ಚರ್ಚೆ ಆಗಿದೆ. 100ಕ್ಕೆ 15 ರೂ. ಎಂದಾಗ ಇವ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಒಕ್ಕೂಟದ ವ್ಯವಸ್ಥೆ ಬಗ್ಗೆಯೂ ಸಾಕಷ್ಟು ಬಾರಿ ಚರ್ಚೆ ಆಗಿದೆ. ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ಮರು ಹಂಚಿಕೆಯ ತತ್ವದ ಅಡಿಯಲ್ಲಿ ವಿನ್ಯಾಸಗೊಳಿಸಿದ್ದು ಪ್ರತಿಯೊಬ್ಬರಿಗೂ ಗೊತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಅತಿ ಹೆಚ್ಚು ಆದಾಯ ನೀಡುವ ರಾಜ್ಯಗಳಾಗಿದ್ದರೂ ಇಲ್ಲಿ ಬರುವ ಆದಾಯವನ್ನು ಕೇಂದ್ರ ಸರ್ಕಾರ ಮೂಲಕ ಇತರ ರಾಜ್ಯಗಳು ಅತಿ ಹೆಚ್ಚು ಜನಸಂಖ್ಯೆ ಇರುವ- ಅತಿ ಹೆಚ್ಚು ಹಿಂದುಳಿದ ರಾಜ್ಯಗಳಿಗೆ ಇದರ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಭಾರತ ಮುಂಚೂಣಿಯಲ್ಲಿ ಬರಲು ಎಲ್ಲ ರಾಜ್ಯಗಳು ಕೂಡ ಅಭಿವೃದ್ಧಿಯ ಪಥದಲ್ಲಿ ಮುಂದೆ ಸಾಗಬೇಕಿದೆ ಎಂದರು.
ಮಹಾರಾಷ್ಟ್ರಕ್ಕೆ ತೆರೆಗೆ ಜಾಸ್ತಿಯೇನೂ ಸಿಗುತ್ತಿಲ್ಲ:
1951ರಿಂದಲೇ ತೆರಿಗೆ ಹಂಚಿಕೆ ನಿರಂತರವಾಗಿ ನಡೆದಿದೆ. ಹಿಂದೆ ಯುಪಿಎ ಸರಕಾರ ಇದ್ದಾಗ 2014ರಲ್ಲಿ ಕರ್ನಾಟಕ ರಾಜ್ಯವು 1.40 ಲಕ್ಷ ಕೋಟಿಯನ್ನು ಸೆಂಟ್ರಲ್ ಪೂಲ್‍ಗೆ ಕೊಟ್ಟಿತ್ತು. ರಾಜ್ಯಕ್ಕೆ ಆಗ ನಿಧಿ ಹಂಚಿಕೆ ಮೂಲಕ 28 ಸಾವಿರ ಕೋಟಿ ಮಾತ್ರ ಬಂದಿತ್ತು. ಕರ್ನಾಟಕದ ಕುರಿತ ಮಲತಾಯಿ ಧೋರಣೆ ಬಗ್ಗೆ ಮಾತನಾಡುತ್ತಾರಲ್ಲವೇ? ನೆರೆ ರಾಜ್ಯವಾದ ಮಹಾರಾಷ್ಟ್ರವು 6.5 ಲಕ್ಷ ಕೋಟಿಯನ್ನು ಸೆಂಟ್ರಲ್ ಪೂಲ್‍ಗೆ ಕೊಡುತ್ತಿದೆ. ಅವರಿಗೆ ನಿಧಿ ಹಂಚಿಕೆ ಮೂಲಕ ಸಿಗುತ್ತಿರುವುದು 89,726 ಕೋಟಿ ಅಷ್ಟೇ. ಅಲ್ಲಿ ಕೂಡ 13ರಿಂದ 14 ರೂ. ಬರುತ್ತಿದೆ. ಎನ್‍ಡಿಎ ಆಡಳಿತವಿರುವ ರಾಜ್ಯವಾದರೂ ಅವರಿಗೆ 40- 50 ರೂ. ಕೊಡುತ್ತಿಲ್ಲ. ಮಹಾರಾಷ್ಟ್ರಕ್ಕೆ ಕರ್ನಾಟಕಕ್ಕಿಂತ 2 ರೂ. ಕಡಿಮೆ ಬರುತ್ತಿದೆಯೇ ವಿನಾ ಜಾಸ್ತಿ ಬರುತ್ತಿಲ್ಲ ಎಂದು ಮಾಹಿತಿ ನೀಡಿದರು.
ಹೋಲಿಸಿಕೊಳ್ಳುವುದೇ ಅವೈಜ್ಞಾನಿಕ:
ಕರ್ನಾಟಕವನ್ನು ರಾಜಸ್ಥಾನ, ಉತ್ತರಪ್ರದೇಶ ಮೊದಲಾದ ರಾಜ್ಯಗಳನ್ನು ಹೋಲಿಸುವುದೇ ಅವೈಜ್ಞಾನಿಕ. ಮುಂದುವರೆದ ರಾಜ್ಯಗಳು ರಾಜಸ್ಥಾನ, ಬಿಹಾರಕ್ಕೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ. 2014ರ ಯುಪಿಎ ಅವಧಿಯಲ್ಲಿ 19 ಸಾವಿರ ಕೋಟಿ ನಿಧಿ ಹಂಚಿಕೆ ಮೂಲಕ ಬಂದಿದೆ. ಬಿಹಾರಕ್ಕೆ 36 ಸಾವಿರ ಕೋಟಿ ಸಿಕ್ಕಿತ್ತು. ಉತ್ತರ ಪ್ರದೇಶ ಅತಿ ಹೆಚ್ಚು ಜನಸಂಖ್ಯೆ ಇರುವ ರಾಜ್ಯವಾಗಿದ್ದು, 66 ಸಾವಿರ ಕೋಟಿ ಬಂದಿತ್ತು. ಮಹಾರಾಷ್ಟ್ರಕ್ಕೆ 17 ಸಾವಿರ ಕೋಟಿ ಬಂದಿದೆ. ನಮ್ಮ ರಾಜ್ಯಕ್ಕೆ ತೆರಿಗೆ ಹಂಚಿಕೆ ಮೂಲಕ 14 ಸಾವಿರ ಕೋಟಿ ಬಂದಿತ್ತು ಎಂದು ತಿಳಿಸಿದರು.
ತೆರಿಗೆ ಹಂಚಿಕೆಗೂ ಮಾನದಂಡಗಳಿವೆ:
2026ರಲ್ಲಿ ರಾಜಸ್ಥಾನಕ್ಕೆ 94 ಸಾವಿರ ಕೋಟಿ, ಬಿಹಾರ 1.50 ಲಕ್ಷ ಕೋಟಿ ಬಂದಿದೆ. ಉತ್ತರ ಪ್ರದೇಶಕ್ಕೆ 1 ಲಕ್ಷದ 60 ಸಾವಿರ ಕೋಟಿ ಬಂದಿದೆ. ಮಹಾರಾಷ್ಟ್ರಕ್ಕೆ 98 ಸಾವಿರ ಕೋಟಿ, ಕರ್ನಾಟಕಕ್ಕೆ 63 ಸಾವಿರ ಕೋಟಿಗೂ ಹೆಚ್ಚು ಲಭಿಸಿದೆ. ತೆರಿಗೆ ಹಂಚಿಕೆಗೂ ಅದರದ್ದೇ ಆದ ಮಾನದಂಡಗಳಿವೆ. ಆ ಮಾನದಂಡಗಳ ಆಧಾರದಲ್ಲಿ ತೀರ್ಮಾನ ಆಗುತ್ತಿದೆ. ಪದೇಪದೇ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದು, ಇದು ಅರ್ಧ ಸತ್ಯ. ನಮ್ಮ ರಾಜ್ಯದ ಆರ್ಥಿಕತೆಯ ಜಿಎಸ್‍ಟಿಯ ಶೇ 60 ಭಾಗ ಸೇವಾ ಕ್ಷೇತ್ರ, ಕಾರ್ಪೊರೇಟ್ ಕಂಪೆನಿಗಳಿಂದ ಬರುತ್ತಿದೆ. ಇವರ ಸಾಧನೆ ಏನಿದೆ ಇದರಲ್ಲಿ? ಎಂದು ಬಿ.ವೈ.ವಿಜಯೇಂದ್ರ ಕೇಳಿದರು.














