ಅಪ್ಲಾಸ್ಟಿಕ್ ರಕ್ತಹೀನತೆಯಿದ್ದ ಯುವಕನಿಗೆ ಸ್ಟೆಮ್ ಸೆಲ್ ದಾನ ಮಾಡಿ ಜೀವರಕ್ಷಕಿಯಾದ ಮಹಿಳೆ

WhatsApp
Telegram
Facebook
Twitter
LinkedIn

ಬೆಂಗಳೂರು: 19 ವರ್ಷದ ಆನಂದು ಎಂಬ ಯುವಕ ಹಲವು ವರ್ಷಗಳಿಂದ ಗಂಭೀರ ಅಪ್ಲಾಸ್ಟಿಕ್ ರಕ್ತಹೀನತೆಯಿಂದ ಬಳಲುತ್ತಿದ್ದರು. ಇವರಿಗೆ ಬೆಂಗಳೂರಿನ ಸ್ವಾತಿ ಎಂಬ 32 ವರ್ಷದ ಮಹಿಳೆ ಸ್ಟೆಮ್ ಸೆಲ್ (ಕಾಂಡಕೋಶ) ದಾನ ಮಾಡಿ ಆ ಯುವಕನ ಪಾಲಿಗೆ ಜೀವರಕ್ಷಕಿಯಾಗಿದ್ದಾರೆ. ಅದರಲ್ಲೂ ಇದೇ ಮೊದಲ ಬಾರಿಗೆ ಇವರಿಬ್ಬರೂ ಮುಖಾಮುಖಿಯಾಗಿ ಭೇಟಿ ಮಾಡಿ ಪರಸ್ಪರ ಸಂತಸ ಹಂಚಿಕೊಂಡಿದ್ದಾರೆ.

ಆನಂದು ಅವರು 15 ವರ್ಷದವರಿದ್ದಾಗ ಗಂಭೀರ ಸ್ವರೂಪದ ಅಪ್ಲಾಸ್ಟಿಕ್ ರಕ್ತಹೀನತೆ ಇರುವುದಾಗಿ ತಪಾಸಣೆಯಲ್ಲಿ ಧೃಡಪಟ್ಟಿತ್ತು. ಕೋವಿಡ್-19 ಲಸಿಕೆ ಪಡೆದ ಬಳಿಕ ನಿರಂತರವಾಗಿ ಜ್ವರ ಕಾಣಿಸಿಕೊಳ್ಳುತ್ತಿತ್ತು. ಅಪ್ಲಾಸ್ಟಿಕ್ ರಕ್ತಹೀನತೆ ಸಾವಿಗೆ ಕಾರಣವಾಗಬಹುದಾದ ಗಂಭೀರ ಸಮಸ್ಯೆಯಾಗಿದ್ದು, ಇದರಲ್ಲಿ ಬೋನ್ ಮ್ಯಾರೋ ಹೊಸ ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗುತ್ತದೆ. ಈ ಯುವಕನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಾದ ಕೋಝಿಕೋಡ್‌ನ ಬಿಎಂಟಿ ಮತ್ತು ಎಂವಿಆರ್ ಕ್ಯಾನ್ಸರ್ ಸೆಂಟರ್ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ನ ಪೀಡಿಯಾಟ್ರಿಕ್ ಹೆಮಾಟೋ-ಆಂಕಾಲಜಿ ಕನ್ಸಲ್ಟೆಂಟ್ ಡಾ. ವಿ.ಪಿ. ಕೃಷ್ಣನ್, ಕಾಂಡಕೋಶ ಕಸಿ ಮಾಡಿಸಿಕೊಳ್ಳುವುದು ಒಂದೇ ಚಿಕಿತ್ಸಾ ವಿಧಾನವಾಗಿದೆ ಎಂದು ಸಲಹೆ ನೀಡಿದ್ದರು. ಆದ್ದರಿಂದ ಕಾಂಡಕೋಶ ದಾನಿಯನ್ನು ಹುಡುಕುವ ಪ್ರಕ್ರಿಯೆ ಆರಂಭಿಸಲಾಯಿತು.

ಇಂತಹ ಕಠಿಣ ಸಂದರ್ಭದಲ್ಲೇ ಆನಂದು ಅವರ ಕುಟುಂಬವು ಭಾವನಾತ್ಮಕ ಹಾಗೂ ಆರ್ಥಿಕ ಒತ್ತಡವನ್ನು ಎದುರಿಸಿತು. ರಕ್ತ ಕಾಂಡಕೋಶ ಕಸಿ ಅಗತ್ಯವಿರುವ ರೋಗಿಗಳಿಗೆ ಭಾಗಶಃ ಆರ್ಥಿಕ ನೆರವು ನೀಡುವ ಡಿಕೆಎಂಎಸ್ ಪೇಷಂಟ್ ಫಂಡಿಂಗ್ ಪ್ರೋಗ್ರಾಂ ಇಂಡಿಯಾ ಮೂಲಕವೂ ಆರ್ಥಿಕ ಸಹಾಯ ಪಡೆದರು. ಇಂದು ಆನಂದು ಆರೋಗ್ಯಕರ ಜೀವನ ನಡೆಸುತ್ತಿದ್ದು, 12ನೇ ತರಗತಿ ಪರೀಕ್ಷೆಗೂ ಹಾಜರಾಗುತ್ತಿದ್ದಾರೆ. ಅಲ್ಲದೆ ತಮ್ಮ ನೆಚ್ಚಿನ ವಿಡಿಯೋಗ್ರಫಿ ಹಾಗೂ ಫೋಟೋಗ್ರಫಿಯನ್ನೂ ಮುಂದುವರಿಸುತ್ತಿದ್ದಾರೆ.

ಐಟಿ ಕನ್ಸಲ್ಟೆಂಟ್ ಆಗಿರುವ ಸ್ವಾತಿ ಅವರು 2016ರಲ್ಲಿ ಡಿಕೆಎಂಎಸ್ ಸಂಸ್ಥೆ ನಡೆಸಿದ ತಮ್ಮ ಕಾರ್ಯಸ್ಥಳದಲ್ಲಿನ ದಾನಿಗಳ ನೋಂದಣಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. 2022ರಲ್ಲಿ ಡಿಕೆಎಂಎಸ್ ಸಂಸ್ಥೆ ಕರೆ ಮಾಡಿ, ತಮ್ಮ ಕಾಂಡಕೋಶವನ್ನು ದಾನ ಮಾಡುವಂತೆ ಮನವಿ ಮಾಡಿತು. ಯಾವುದೇ ಯೋಚನೆ ಮಾಡದೇ ಅವರು ಸ್ಟೆಮ್ ಸೆಲ್ ದಾನ ಮಾಡಲು ಒಪ್ಪಿಗೆ ನೀಡಿದರು. ಈ ನಿರ್ಧಾರಕ್ಕೆ ಅವರ ಪತಿ ಹಾಗೂ ಕುಟುಂಬ ಸದಸ್ಯರು ಸಹ ಸಂಪೂರ್ಣ ಬೆಂಬಲ ನೀಡಿದರು. ಈ ಮೂಲಕ ಸ್ವಾತಿ ಒಬ್ಬ ವ್ಯಕ್ತಿಯ ಜೀವ ಉಳಿಸಿ ಜೀವರಕ್ಷಕಿಯಾಗಿದ್ದಾರೆ. ಇತ್ತೀಚೆಗೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಚಿಕಿತ್ಸೆಯ ಕುರಿತು ಡಾ. ಕೃಷ್ಣನ್ ಮಾತನಾಡಿದ್ದು, 2022ರಲ್ಲಿ ಆನಂದು ಅವರನ್ನು ಪರೀಕ್ಷಿಸಿದಾಗ ಅವರಿಗೆ ಗಂಭೀರ ಅಪ್ಲಾಸ್ಟಿಕ್ ರಕ್ತಹೀನತೆ ಇರುವುದು ಪತ್ತೆಯಾಯಿತು. ಕಾಂಡಕೋಶ ಕಸಿಗೆ ಬೆಂಬಲ ದೊರಕಿದ ನಂತರ, ಸಂಬಂಧಿಕರಲ್ಲದ ವ್ಯಕ್ತಿಯಿಂದ ಹೊಂದಾಣಿಕೆಯಾಗುವ ಹೆಮಾಟೋಪೊಯೆಟಿಕ್ ಕೋಶವನ್ನು 2023ರಲ್ಲಿ ಕಸಿ ಮಾಡಲಾಯಿತು. ಕಸಿ ಸಮಯದಲ್ಲಿ ಫೆಬ್ರೈಲ್ ನ್ಯೂಟ್ರೋಪೆನಿಯಾ ಮತ್ತು ಮ್ಯುಕೋಸಿಟಿಸ್ ಮುಂತಾದ ಸಂಕೀರ್ಣತೆಗಳನ್ನು ಅವರು ಎದುರಿಸಿದರು. ನಂತರ ಅವರ ಆರೋಗ್ಯದ ಪ್ರಗತಿ ಉತ್ತಮವಾಗಿತ್ತು. ಡಿಕೆಎಂಎಸ್ ಸಂಸ್ಥೆ ಕೇವಲ ಸಂಬಂಧಿಕರಲ್ಲದ ದಾನಿಯನ್ನು ಹುಡುಕುವುದರಲ್ಲಿ ಮಾತ್ರವಲ್ಲ, ಕಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿಯೂ ಮಹತ್ವದ ಪಾತ್ರವಹಿಸಸಿತು. ಇದರಿಂದ ಅವರ ಕುಟುಂಬದ ಆರ್ಥಿಕ ಹೊರೆ ಕೂಡ ಕಡಿಮೆಯಾಯಿತು. ಈಗ ಆನಂದು ಆರೋಗ್ಯವಂತರಾಗಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಸ್ವಾತಿ, ಪೋಷಕರ ನೋವು ಏನೆಂಬುದು ನನಗೆ ತಿಳಿದಿದೆ. ಮಗುವಿಗೆ ಆರೋಗ್ಯ ಸಮಸ್ಯೆ ಎದುರಾದಾಗ ತಾಯಿಗೆ ಎಂತಹ ನೋವು ಆಗುತ್ತದೆ ಎಂಬುದು ನನಗೆ ಅರ್ಥವಾಗಿದೆ. ನಾನು ಮಾಡಿದ ಈ ದಾನ ನನ್ನ ಗಂಡು ಮಗುವನ್ನು ಸ್ವಾಗತಿಸಿದಂತೆಯೇ ಮತ್ತೊಬ್ಬರ ಜೀವನಕ್ಕೂ ಹೊಸ ಅವಕಾಶ ನೀಡಿದಂತಾಗಿದೆ ಎಂದು ಹೇಳಿದ್ದಾರೆ.

ಡಿಕೆಎಂಎಸ್ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ಪ್ಯಾಟ್ರಿಕ್ ಪೌಲ್ ಮಾತನಾಡಿದ್ದು, ಆನಂದು ಮತ್ತು ಸ್ವಾತಿಯ ಕಥೆ ಇನ್ನಷ್ಟು ಜನರು ಸಂಭಾವ್ಯ ಸ್ಟೆಮ್ ಸೆಲ್ ದಾನಿಗಳಾಗಿ ನೋಂದಾಯಿಸಬೇಕಾದ ಅಗತ್ಯವನ್ನು ಹೇಳುತ್ತಿದೆ. ಸ್ವಾತಿಯಂತಹ ದಾನಿಗಳ ಉದಾರತೆಯೇ ಜೀವರಕ್ಷಕ ಕಸಿಗಳನ್ನು ಸಾಧ್ಯವಾಗಿಸುತ್ತದೆ. ಭಾರತದ ಅರ್ಹ ಜನಸಂಖ್ಯೆಯ ಕೇವಲ 0.09% ಜನರು ಮಾತ್ರ ದಾನಿಗಳಾಗಿ ನೋಂದಾಯಿಸಿದ್ದು, ಹೊಂದಾಣಿಕೆ ಹುಡುಕುವ ಸಾಧ್ಯತೆ ಕಡಿಮೆ ಇದೆ. ಇಂತಹ ದೃಷ್ಟಾಂತದ ಮೂಲಕ ಇನ್ನಷ್ಟು ಜನರನ್ನು ನೋಂದಣಿಗೆ ಪ್ರೇರೇಪಿಸಿ, ರಕ್ತ ಕ್ಯಾನ್ಸರ್ ಹಾಗೂ ರಕ್ತ ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬದುಕುವ ಎರಡನೇ ಅವಕಾಶ ನೀಡುವ ಆಶಯವಿದೆ ಎಂದಿದ್ದಾರೆ.

ಬೆಂಗಳೂರು ಸೈಟ್ ಕೇರ್ ಹಾಸ್ಪಿಟಲ್ಸ್ ನ ಹೆಮಾಟೋ-ಆಂಕಾಲಜಿಸ್ಟ್ ಹಾಗೂ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಕನ್ಸಲ್ಟೆಂಟ್ ಡಾ. ಗೋವಿಂದ್ ಎರಿಯಟ್ ಮಾತನಾಡಿದ್ದು, ಗಂಭೀರ ಅಪ್ಲಾಸ್ಟಿಕ್ ರಕ್ತಹೀನತೆ ರೋಗಿಗಳಿಗೆ ಕಾಂಡಕೋಶ ಕಸಿಯೇ ಏಕೈಕ ಚಿಕಿತ್ಸೆಯಾಗಿದೆ. ಆದರೆ ಹೊಂದಾಣಿಕೆಯಾಗುವ ದಾನಿಯನ್ನು ಹುಡುಕುವುದು ದೊಡ್ಡ ಸವಾಲಾಗಿದೆ. ಆನಂದು ಅವರ ಪಯಣ ಗಂಭೀರ ರಕ್ತದ ಅಸ್ವಸ್ಥತೆಗಳನ್ನು ಎದುರಿಸುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳ ಧೈರ್ಯವನ್ನು ತೋರಿಸುತ್ತದೆ. ಅವರ ಸಾಧನೆಯನ್ನು ನಾವು ಮೆಚ್ಚುತ್ತೇವೆ. ಇದೇ ವೇಳೆ ಸ್ವಾತಿಯ ದಾನಶೀಲ ನಿರ್ಧಾರ ಕರುಣೆಯ ಪ್ರತಿಬಿಂಬವಾಗಿದ್ದು, ಒಬ್ಬ ಯುವಕನಿಗೆ ಬದುಕಿನ ಮತ್ತೊಂದು ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon