ಪಾರವಾಡ ಗ್ರಾಪಂ ರಸ್ತೆ, ಎಲೆಕ್ಟ್ರಿಕ್ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ; ಹಿಂದಿನ ಪಿಡಿಒ ಸಜ್ಜನರ ಅಕ್ರಮಗಳಿಂದ ಅಭಿವೃದ್ಧಿ ನೆನೆಗುದಿಗೆ

WhatsApp
Telegram
Facebook
Twitter
LinkedIn

ಪಾರವಾಡ (ಖಾನಾಪುರ ತಾಲೂಕು, ಬೆಳಗಾವಿ ಜಿಲ್ಲೆ): ಚೋರ್ಲಾ ಗ್ರಾಮ ಸಂಪರ್ಕಿಸುವ ರಸ್ತೆ ಸುಧಾರಣೆ ಕಾಮಗಾರಿಯು ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ರಸ್ತೆಯಲ್ಲಿ ಅರ್ಧಂಬರ್ಧ ಕಾಂಕ್ರೀಟ್ ಹಾಕಿ ಹಾಗೆಯೇ ಬಿಡಲಾಗಿದೆ. ಈ ಗ್ರಾಮದಲ್ಲಿನ ಪುರಾತನ ಸ್ವಯಂಭೂ ಶಿವಲಿಂಗ ರಾಮೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಂತೂ ಸಂಪೂರ್ಣ ಹಾಳಾಗಿದೆ. ಈ ರಸ್ತೆಯಲ್ಲಿ ಕಲ್ಲು ಮಣ್ಣು ತುಂಬಿದ್ದು, ಸಂಪೂರ್ಣ ಗುಂಡಿಮಯವಾಗಿದೆ. ಹೀಗಾಗಿ ಭಕ್ತರು ದೇವಸ್ಥಾನಕ್ಕೆ ಹೋಗಲು ಪಡಿಪಾಟಲು ಪಡುತ್ತಿದ್ದಾರೆ. ರಸ್ತೆ ಸುಧಾರಿಸುವಂತೆ ಪಾರವಾಡ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ರಸ್ತೆ ಸುಧಾರಣೆ ಮಾಡಬೇಕಿರುವ ಗ್ರಾಮ ಪಂಚಾಯಿತಿಯವರು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಇದಲ್ಲದೆ ಚೋರ್ಲಾ ಗ್ರಾಮದ ಯಾವುದೇ ಗಟಾರುಗಳನ್ನು ಸ್ವಚ್ಛಗೊಳಿಸಿಲ್ಲ. ಆದರೂ ಗಟಾರುಗಳನ್ನು ಸ್ವಚ್ಛಗೊಳಿಸಿರುವುದಾಗಿ ಹೇಳಿ ಬಿಲ್ ಮಾಡಿ ಹಣ ಎತ್ತಲಾಗಿರುವುದು ವಿಚಿತ್ರವಾಗಿದೆ. ಈ ಗ್ರಾಪಂ ನಲ್ಲಿ ಹಿಂದೆ ಪಿಡಿಒ ಆಗಿದ್ದ ವೀರೇಶ ಸಜ್ಜನರ ಅವರ ಕರ್ಮಕಾಂಡದ ಫಲಶೃತಿಯಿಂದ ಗ್ರಾಮವು ಅಭಿವೃದ್ಧಿಯಿಂದ ವಂಚಿತವಾಗಿದೆ. ಒಟ್ಟಾರೆಯಾಗಿ ಪಾರವಾಡ ಗ್ರಾಪಂ ವ್ಯಾಪ್ತಿಯಲ್ಲಿ ಎಷ್ಟೋ ಕೆಲಸಗಳು ಆಗಿದ್ದರೂ, ಅವು ಕಾಗದದಲ್ಲಿ ಮಾತ್ರ ಎನ್ನುವಂತಿದೆ. ಇಲ್ಲಿ ಹುಡುಕಿದರೂ ಯಾವುದೇ ಅಭಿವೃದ್ಧಿ ಕೆಲಸಗಳು ಕಾಣಿಸದಂತಿದೆ.

ಇನ್ನು ಪರವಾಡ ಗ್ರಾಮದಲ್ಲಿ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಹೊಂಡವೇ ಇಲ್ಲ. ಆದರೂ ಈ ಹೊಂಡ ನಿರ್ಮಾಣ ಮಾಡಿರುವುದಾಗಿ ಹೇಳಿ ಕಾಮಗಾರಿಯ ಬಿಲ್ ತಯಾರಿಸಿ ಹಣ ನುಂಗಲಾಗಿದೆ. ಪಾರವಾಡ ಗ್ರಾಪಂ ಕಚೇರಿ ಕಟ್ಟಡದ ಮೇಲೆ ಹೈಟೆಕ್ ಲೈಬ್ರರಿಯೊಂದನ್ನು ಕಟ್ಟಲಾಗಿದೆ. 25 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಲೈಬ್ರರಿ ನಿರ್ಮಾಣವಾಗಿದ್ದು, ಇದರಲ್ಲಿ ನಾಮ್ ಕೆ ವಾಸ್ತೆ ಪುಸ್ತಕಗಳು ಮಾತ್ರ ಇವೆ. ಈ ಲೈಬ್ರರಿ ನಿರ್ಮಾಣದಲ್ಲಿಯೂ ಸಾಕಷ್ಟು ಹಣಕಾಸಿನ ಗೋಲ್ ಮಾಲ್ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪಾರವಾಡ ಗ್ರಾಪಂ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಕಾಮಗಾರಿಗಳಲ್ಲಿ ಕೂಡ ದೊಡ್ಡ ಮಟ್ಟದ ಭ್ರಷ್ಟಾಚಾರ ನೆಡೆದಿರುವುದು ಬೆಳಕಿಗೆ ಬಂದಿದೆ.

ಈ ಗ್ರಾಮ ಪಂಚಾಯಿತಿ ಕೈಗೊಳ್ಳುವ ಎಲ್ಲಾ ಎಲೆಕ್ಟ್ರಿಕ್ ಕಾಮಗಾರಿಯ ಸರಕುಗಳನ್ನು ಖಾನಾಪುರದ ಒಂದು ಮಳಿಗೆಯಿಂದಲೇ ಖರೀದಿಸಲಾಗಿದೆ. ಇಲ್ಲಿ ಒಂದಕ್ಕೆ ಹತ್ತು ಪಟ್ಟು ಬೆಲೆಗೆ ಸಾಮಾನುಗಳನ್ನು ಖರೀದಿಸಿ ಬಿಲ್ ಮಾಡಲಾಗಿದೆ. ಈ ವಿಷಯದಲ್ಲಿ ಅಂಗಡಿಯವರು ಮತ್ತು ಸಂಬಂಧಿಸಿದ ಪಿಡಿಒಗೆ ಒಳ ಒಪ್ಪಂದ ಆದಂತಿದೆ. ಸದರಿ ಎಲೆಕ್ಟ್ರಿಕ್ ಅಂಗಡಿ, ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕಿದೆ. ಹಿರಿಯ ಅಧಿಕಾರಿಗಳು ಇಲ್ಲಿಗೆ ಬಂದು ತನಿಖೆ ಮಾಡಿದಲ್ಲಿ ಸತ್ಯಾಂಶಗಳು ಹೊರಬರಲಿವೆ. ಪಾರವಾಡ ಗ್ರಾಪಂನ ಹಿಂದಿನ ಪಿಡಿಒ ವೀರೇಶ ಸಜ್ಜನರ ಅವರ ಕಮಿಷನ್ ದಂಧೆ ಬಗ್ಗೆ ಮುಂದಿನ ದಿನಗಳಲ್ಲಿ ಪ್ರಜಾ ನೆರಳು ದಿನಪತ್ರಿಕೆಯು ಮತ್ತಷ್ಟು ವರದಿಗಳನ್ನು ನಿಮ್ಮ ಮುಂದೆ ಇಡಲಿದೆ.

ಅಗತ್ಯ ಪುಸ್ತಕಗಳನ್ನು ಪಂಚಾಯಿತಿಯವರೇ ಖರೀದಿಸಬೇಕು:

ಲೈಬ್ರರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಬೇರೆ ಬೇರೆ ಪುಸ್ತಕಗಳು ಇರಬೇಕು. ಜೊತೆಗೆ ಹಿರಿಯರು ಮತ್ತು ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಇಡಲಾಗುತ್ತದೆ. ಕೆಲ ಪುಸ್ತಕಗಳನ್ನು ಸರ್ಕಾರ ಕೊಡುತ್ತದೆ ಹಾಗೂ ಇನ್ನುಳಿದ ಅಗತ್ಯ ಪುಸ್ತಕಗಳನ್ನು ಪಂಚಾಯಿತಿಯವರೇ ಖರೀದಿಸಬೇಕು- ಶ್ರೀ ಅಡವಿಮಠ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ, ಅಭಿವೃದ್ಧಿ.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon