ಸಮಾಜ ಕಲ್ಯಾಣ ಇಲಾಖೆಯಲ್ಲಿ ನೂರಾರು ಕೋಟಿ ಭ್ರಷ್ಟಚಾರ: ಭೀಮಪುತ್ರಿ ಬ್ರಿಗೇಡ್ ಸಂಸ್ಥಾಪಕಿ ರೇವತಿರಾಜ್

WhatsApp
Telegram
Facebook
Twitter
LinkedIn

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಅಧೀನ ಸಂಸ್ಥೆಯಾದ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ನಿಧಿಯಯಲ್ಲಿ ಬಹಿರಂಗ ಲೂಟಿ ನಡೆಯುತ್ತಿದ್ದು, ಅಧಿಕಾರ ದುರುಪಯೋಗ, ನಕಲಿ ಟೆಂಡರ್ ಮತ್ತಿತರೆ ವಾಮ ಮಾರ್ಗದ ಮೂಲಕ ನೂರಾರು ಕೋಟಿ ರೂ ಅಕ್ರಮ ನಡೆಸಲಾಗಿದೆ.  ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಭೀಮಪುತ್ರಿ ಬ್ರಿಗೇಡ್ ಸಂಸ್ಥಾಪಕಿ ರೇವತಿರಾಜ್ ಆರೋಪಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಎಲ್ಲಾ ಅಕ್ರಮಗಳಿಗೆ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಆಡಳಿತಾಧಿಕಾರಿ ಡಾ. ಕೆ. ಅಂಜುಂ ಹಫೀಜ್ ಕಾರಣಕರ್ತರಾಗಿದ್ದು, ಇವರನ್ನು ಕೂಡಲೇ ಅಮಾನತ್ತಿನಲ್ಲಿಟ್ಟು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅವರು ತಮ್ಮ ಸ್ವಂತ ತಾಯಿಯ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿಕೊಂಡು ಭಾರೀ ಅಕ್ರಮಗಳಿಗೆ ಕಾರಣಕರ್ತರಾಗಿದ್ದಾರೆ. ಜೊತೆಗೆ ಎಲ್ಲಾ ಗುತ್ತಿಗೆಗಳಲ್ಲಿ ಶೇ 40 ರಷ್ಟು ಕಮೀಷನ್ ಪಡೆಯುತ್ತಿದ್ದು, ಕೆಟಿಪಿಪಿ ಕಾಯ್ದೆಯನ್ನು ಗಂಭೀರವಾಗಿ ಉಲ್ಲಂಘಿಸಿದ್ದಾರೆ. ಹೀಗಾಗಿ ಇವರ ಮತ್ತು ಇವರ ಕುಟುಂಬದ ಎಲ್ಲಾ ಬ್ಯಾಂಕ್ ಖಾತೆಯನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಾಫ್ಟವೇರ್ ಹಗರಣ, ಬೋಗಸ್ ತರಬೇತಿ ಕಾರ್ಯಕ್ರಮಗಳು, ಡ್ರೋನ್ ತರಬೇತಿ ಹಗರಣ, ಜಿ.ಎಸ್.ಟಿ. ಅಕ್ರಮ, ಹೀಗೆ ಸಾಲು, ಸಾಲು ಹಗರಣ ಸರಮಾಲೆ ಇರುವ ಡಾ.ಅಂಜುಂ ಹಫೀಜ್ ವಿರುದ್ಧ ಸಿಬಿಐ ತನಿಖೆಯಾಗಬೇಕು. ಇವರು ಸಮಾಜ ಕಲ್ಯಾಣ ಇಲಾಖೆಯ ವೃಂದ ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿದ್ದು, ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ ತೀರ್ಪುಗಳನ್ನು ಧಿಕ್ಕರಿಸಿದ್ದಾರೆ. ಅದೇ ರೀತಿ, ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಖಜಾನೆಯಲ್ಲಿ ಎಲ್ಲವೂ ಆನ್ ಲೈನ್ ಮೂಲಕ ಪಾವತಿಯಾಗಬೇಕಿದ್ದರೂ ಇವರು ವಿಭಾಗೀಯ ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿಕೊಂಡು ದೊಡ್ಡ ಮೊತ್ತವನ್ನು ನೇರವಾಗಿ ಚೆಕ್ ಮೂಲಕ ವಿತರಿಸಿದ್ದಾರೆ. ಸರ್ಕಾರದ ಅನುಮತಿ ಇಲ್ಲದೇ ಕೋಟ್ಯಂತರ ರೂ ಮೊತ್ತವನ್ನು ಮುಂಗಡ ಪಾವತಿಸಿದ್ದಾರೆ. ಕೆಲವು ಚೆಕ್ ಗಳನ್ನು ಡಾ. ಅಂಜುಂ ಹಫೀಜ್ ಏಕಪಕ್ಷೀಯವಾಗಿ ತಮ್ಮ ಸಹಿಯೊಂದಿಗೆ ನೀಡಿದ್ದು, ಇದು ಅಧಿಕಾರದ ದುರುಪಯೋಗವಾಗಿದೆ ಎಂದು ಆರೋಪಿಸಿದರು.

ಡಾ. ಕೆ. ಅಂಜುಂ ಹಫೀಜ್ ವಿರುದ್ಧ ಜನವರಿ 29 ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಇಲಾಖಾ ಆಯುಕ್ತರು ಮತ್ತಿತರೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಇವರ ವಿರುದ್ಧ ದೂರು ನೀಡಿ ಕಾನೂನು ಕ್ರಮಕ್ಕೆ ಮುಂದಾದ ಹಿನ್ನೆಲೆಯಲ್ಲಿ ಡಾ. ಕೆ. ಅಂಜುಂ ಹಫೀಜ್ ತಮ್ಮ ಮೇಲೆ ಸುಲಿಗೆ ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಪೊಲೀಸರ ಮೂಲಕ ತಮ್ಮನ್ನು ಬಂಧಿಸಿ ತಮ್ಮ ಹೋರಾಟವನ್ನು ಹತ್ತಿಕ್ಕಲು ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಜೊತೆಗೆ ಅಕ್ರಮಗಳನ್ನು ಮುಚ್ಚಿ ಹಾಕಲು ತಮ್ಮ ಜೊತೆ ರಾಜೀ ಸಂಧಾನದ ಪ್ರಯತ್ನಕ್ಕೂ ಸಹ ಮುಂದಾಗಿದ್ದರು. ಆದರೆ ತಾವು ಇದಕ್ಕೆ ಸಮ್ಮತಿಸಲಿಲ್ಲ ಎಂದು ರೇವತಿರಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಮುದಾಯದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon