ಪಾರವಾಡ, ಖಾನಾಪುರ ತಾಲೂಕು (ಬೆಳಗಾವಿ ಜಿಲ್ಲೆ): ಜಿಲ್ಲೆಯ ಪಾರವಾಡ ಗ್ರಾಮ ಪಂಚಾಯಿತಿ ಪಿಡಿಒ ವೀರೇಶ ಸಜ್ಜನ ಇವರ ಜಂಗಲ್ ರಾಜ್ ಆಡಳಿತದ ಬಗ್ಗೆ ಈಗ ಎಲ್ಲೆಲ್ಲೂ ಚರ್ಚೆ ಜೋರಾಗಿದೆ. ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಹಗರಣದ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬರುತ್ತಿವೆ. ಈ ಹಗರಣದಲ್ಲಿ ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳ ಪಾಲೆಷ್ಟು ಎಂದು ಜನಸಾಮಾನ್ಯರು ಪ್ರಶ್ನೆಮಾಡುವಂತಾಗಿದೆ.
ಭ್ರಷ್ಟಾಚಾರ ಸರಮಾಲೆ ಭಾಗ – 1: ಪಾರವಾಡ ಗ್ರಾಮವು ಕಾಡಲ್ಲಿನ ಗ್ರಾಮವಾಗಿದೆ. ಇಲ್ಲಿ ಸೂಕ್ತ ರಸ್ತೆಗಳಿಲ್ಲ, ಮೊಬೈಲ್ ಸಂಪರ್ಕ ಇಲ್ಲ. ಇದು ಖಾನಾಪುರ ತಾಲೂಕಿನ ಕೊನೆಯಂಚಿನ ಗ್ರಾಮವಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಇಲ್ಲಿಗೆ ಬಂದು ಮುಟ್ಟುವುದೇ ಇಲ್ಲ. ಇದರ ಲಾಭವನ್ನೇ ಪಡೆಯುತ್ತಿರುವ ಇಲ್ಲಿನ ಗ್ರಾಪಂ ಪಿಡಿಒ ವೀರೇಶ ಸಜ್ಜನರ ತಾಲೂಕಿನಲ್ಲಿಯೇ ಭ್ರಷ್ಟ ನಂ.1 ಪಿಡಿಒ ಎಂದು ಕುಖ್ಯಾತಿ ಗಳಿಸಿದ್ದಾರೆ. ಈ ಬಗ್ಗೆ ಪ್ರಜಾ ನೆರಳು ದಿನಪತ್ರಿಕೆಯು ವರದಿಯ ಸರಮಾಲೆಯನ್ನು ನಿಮ್ಮ ಮುಂದೆ ಇಡುತ್ತಿದೆ.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಿಂಚಿತ್ತಾದರೂ ನಿಯತ್ತಿದ್ದರೆ ತಕ್ಷಣ ಈ ಗ್ರಾಮ ಪಂಚಾಯಿತಿಯ ಆಡಳಿತದ ಬಗ್ಗೆ ಪರಿಶೀಲನೆ ನಡೆಸಲಿ. ಇಲ್ಲವಾದರೆ ಅವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಮೂಡುವುದು ಖಚಿತವಾಗುತ್ತದೆ. ಪಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಜನ ಬಹುತೇಕರು ಕಡು ಬಡವರಾಗಿದ್ದಾರೆ. ಇವರಿಗೆ ಆದಾಯದ ಮೂಲಗಳು ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಹಿಟ್ಟಿನ ಗಿರಣಿ ಕೊಡಿಸುವುದಾಗಿ ಈ ಬಡಜನರಿಂದ ಸದರಿ ಪಿಡಿಒ ದುಪ್ಪಟ್ಟು ಟ್ಯಾಕ್ಸ್ ವಸೂಲಿ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲವಾಗಿದೆ. ಈ ಪಿಡಿಒ ಇಂಥ ದಬ್ಬಾಳಿಕೆಯ ಆಡಳಿತ ನಡೆಸುತ್ತಿರುವುದು ಏಕೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಗ್ರಾಪಂ ಕೈಗೊಳ್ಳುವ ಕೆಲಸಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆಯೋ ಅಥವಾ ಎಲ್ಲಾ ಅಧಿಕಾರ ಪಿಡಿಒ ಗೆ ಮಾತ್ರ ಇರುತ್ತದೆಯೋ ಎಂಬುದನ್ನು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. ಹಿಟ್ಟಿನ ಗಿರಣಿ ಕೊಡಿಸಲು ಈ ಪಿಡಿಒ ವಸೂಲಿ ಮಾಡಿರುವ ದುಪ್ಪಟ್ಟು ಟ್ಯಾಕ್ಸ್ ಹಣ ಸರ್ಕಾರದ ಯಾವ ಖಾತೆಗೆ ಜಮೆಯಾಗಿದೆ ಎಂದು ಅವರೇ ಮಾಹಿತಿ ನೀಡಬೇಕಿದೆ.
ಮತ್ತೊಂದು ಪ್ರಕರಣದಲ್ಲಿ ಪಾರವಾಡ ಗ್ರಾಪಂ ವ್ಯಾಪ್ತಿಗೆ ಬರುವ ಚೋರ್ಲಾ ಗ್ರಾಮಕ್ಕೆ ಮಂಜೂರಾಗಿದ್ದ ಎಂಟು ಶೌಚಾಲಯಗಳಿಗೆ ಮೂರು ವರ್ಷವಾದರೂ ಹಣ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಜನ ಅದೆಷ್ಟೋ ಬಾರಿ ಗ್ರಾಪಂ ಹಾಗೂ ತಾಪಂ ಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ.
ಈ ಹಿಂದೆ ಸದರಿ ಪಿಡಿಒ ಸಜ್ಜನ ಅವರು ಬೈಲೂರ ಗ್ರಾಮ ಪಂಚಾಯಿತಿ ಪಿಡಿಒ ಆಗಿದ್ದರು. ಆಗ ಗ್ರಾಮ ಪಂಚಾಯಿತಿ ವತಿಯಿಂದ ನಡೆದಿದ್ದ ಹರಿಜನ ವಾಡಾದಿಂದ ಪಾವಚೆ ಮಾಳ ವರೆಗಿನ ಸಿಸಿ ರಸ್ತೆ ಮತ್ತು ಬೈಲೂರವಾಡಾ ಸಿಸಿ ರಸ್ತೆ ಕಾಮಗಾರಿಗಳು ಕಳಪೆ ಆಗಿದ್ದರಿಂದ ನರೇಗಾ ಒಂಬುಡ್ಸಮನ್ ಅಧಿಕಾರಿಗಳು 2018-19 ರಲ್ಲಿ ಇವರಿಗೆ 2.5 ಲಕ್ಷ ರೂಪಾಯಿ ದಂಡ ವಿಧಿಸಿದ್ದರು ಎನ್ನುವುದು ಉಲ್ಲೇಖನೀಯವಾಗಿದೆ.
ಮುಂದಿನ ದಿನಗಳಲ್ಲಿ ಪ್ರಜಾ ನೆರಳು ದಿನಪತ್ರಿಕೆಯು ಈ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಲಿದೆ. ಸದ್ಯ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದ ವೇಳೆ ಪತ್ರಿಕೆಯು ಈ ವಿಷಯವನ್ನು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತರಲಿದೆ.













