ಹವಾಮಾನ ಅಪ್ಡೇಟ್: 12 ಜಿಲ್ಲೆಗಳಿಗೆ ಹೀಟ್ ವೇವ್, ಎದುರಾಗಲಿದೆ ಮುಂಗಾರು ಮಳೆ ಕೊರತೆ

WhatsApp
Telegram
Facebook
Twitter
LinkedIn

ಬೆಂಗಳೂರು: ಏಪ್ರಿಲ್ ಮಧ್ಯಂತರದಲ್ಲಿ ರಾಜ್ಯದಲ್ಲಿನ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನ 36 ರಿಂದ 42 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದ್ದು, ಇದರ ನಡುವೆ ಹವಾಮಾನ ಇಲಾಖೆ 12 ಜಿಲ್ಲೆಗಳಿಗೆ ಹೀಟ್ ವೇವ್ ಎಚ್ಚರಿಕೆಯನ್ನು ನೀಡಿದೆ. ಇದರಿಂದ ಮೊದಲೇ ಬೇಸಿಗೆಯ ತಾಪಕ್ಕೆ ಹೈರಾಣಾಗಿದ್ದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಏ.15ರಿಂದ 5 ದಿನ ಹಾಗೂ ಬಾಗಲಕೋಟೆ, ಬೀದರ್,ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಏ.16ರಿಂದ ಏ.19ವರೆಗೆ ಹೀಟ್ ವೇವ್ ಎಚ್ಚರಿಕೆಯನ್ನು ನೀಡಲಾಗಿದೆ.

ಇದೇ ಸಂದರ್ಭದಲ್ಲಿ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಇಂದಿನಿಂದ ಏ.21ರವರೆಗೆ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆಯಲ್ಲಿ ಏ.16ರಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ಬಾರಿ ಮುಂಗಾರು ಕೊರತೆ:

ಈ ಬಾರಿ ನೈಋತ್ಯ ಮಾನ್ಸೂನ್(ಮುಂಗಾರು) ದುರ್ಬಲಗೊಳ್ಳಲಿದೆ. ಈ ಕಾರಣದಿಂದ ಕರ್ನಾಟಕ ಸೇರಿ ದೇಶಾದ್ಯಂತ ಮಾನ್ಸೂನ್ ಅವಧಿಯಲ್ಲಿ ಮಳೆ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನೈಋತ್ಯ ಮಾನ್ಸೂನ್ ಕುರಿತು ಬಿಡುಗಡೆ ಮಾಡಿರುವ ಮೊದಲ ಹಂತದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರೈತರ ಮೇಲೆ ಪರಿಣಾಮ:

ಕರಾವಳಿ, ಮಲೆನಾಡು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವ ಇದೆ. ಮಳೆ ಅಭಾವದಿಂದಾಗಿ ಈ ಬಾರಿ ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ರೈತರು ದಯನೀಯ ಪರಿಸ್ಥಿತಿ ಎದುರಿಸಲಿದ್ದಾರೆ. ಒಟ್ಟು ಮಳೆ ಪ್ರಮಾಣದಲ್ಲಿ ಶೇ.75 ಮಳೆಯು ನೈಋತ್ಯ ಮಾನ್ಸೂನ್‌ನಲ್ಲಿ ಸುರಿಯುತ್ತದೆ. ಆದರೆ, ಈ ಬಾರಿ ನೈಋತ್ಯ ಮಾನ್ಸೂನ್ ಮೇಲೆ ಎಲ್ ನಿನೋ ಪ್ರಭಾವದಿಂದ ಅಧಿಕ ತಾಪಮಾನ ಉಂಟಾಗುವ ಜೊತೆಗೆ ಮತ್ತು ಮಳೆಯ ಪ್ರಮಾಣ ತಗ್ಗಲಿದೆ ಎನ್ನಲಾಗಿದೆ.

ಜುಲೈನಲ್ಲಿ ಎಲ್ ನಿನೋ ಆಗಿ ಬದಲಾವಣೆ:

ಪೆಸಿಫಿಕ್ ಸಾಗರದಲ್ಲಿ ಪ್ರಸ್ತುತ ಲಾ-ನಿನಾ ಸ್ಥಿತಿ ಇದೆ. ಆದರೆ, ಜುಲೈ ವೇಳೆಗೆ ಇದು ಎಲ್ ನಿನೋ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಈ ಬದಲಾವಣೆಯು ಮುಂಗಾರು ಮಳೆ ಮೇಲೆ ನೇರ ಪರಿಣಾಮ ಬೀರಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಎಲ್ ನಿನೊ ತಗ್ಗುವ ಸಂಭವವೂ ಇದೆ:

ಹಿಂದೂ ಮಹಾಸಾಗರದ ದ್ವಿಗುಣ ಪ್ರಭಾವವು ಸಕಾರಾತ್ಮಕವಾಗಿದ್ದರೆ ಎಲ್ ನಿನೊ ಪರಿಣಾಮ ಸ್ವಲ್ಪ ಮಟ್ಟಿಗೆ ತಗ್ಗಲೂಬಹುದು. ಕಳೆದ ವರ್ಷ ಮುಂಗಾರು ಆಶಾದಾಯಕವಾಗಿತ್ತು. ಲಾ-ನಿನಾ ಮತ್ತು  ಹಿಂದೂ ಮಹಸಾಗರದ ದ್ವಿಧ್ರುವಿ ಪರಿಸ್ಥಿತಿ ತಟಸ್ಥವಾಗಿರುವ ಕಾರಣ 2025ರ ಜೂ.1ರಿಂದ ಸೆ.30ರವರೆಗೆ ವಾಡಿಕೆಗಿಂತ ಅಧಿಕ ಮಳೆಯಾಗಿತ್ತು. ಅದರಿಂದ ಅಂದಾಜು 80 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆ ಬೆಳೆಯಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಎರಡು ತಿಂಗಳ ಮಳೆ ಕೃಷಿಗೆ ನಿರ್ಣಾಯಕ:

ಜೂನ್- ಜುಲೈ ತಿಂಗಳುಗಳು ಮಳೆ ಕೃಷಿ ಬೆಳೆಗಳಿಗೆ ನಿರ್ಣಾಯಕ. ಆದರೆ, ಈ ಅವಧಿಯಲ್ಲಿ ದೀರ್ಘಕಾಲದ ಶುಷ್ಕ ಹವಾಮಾನ ಕಂಡುಬಂದರೆ ಕೃಷಿ ಚಟುವಟಿಕೆಗಳಿಗೆ ಹೊಡೆತ ಬೀಳಲಿದೆ. ಮಳೆ ಕೊರತೆ ಎದುರಾಗುವ ಹಿನ್ನೆಲೆಯಲ್ಲಿ ಕಡಿಮೆ ನೀರು ಬಳಸುವ ಮತ್ತು ಹವಾಮಾನ ವೈಪರೀತ್ಯಕ್ಕೆ ತಡೆದುಕೊಳ್ಳುವ ಬೆಳೆಯನ್ನು ಬೆಳೆಯಬೇಕು. ನೀರು ಮತ್ತು ವಿದ್ಯುತ್ ನಿರ್ವಹಣೆಗೆ ಸರ್ಕಾರವು ಸಜ್ಜಾಗಬೇಕು ಎಂದು ಕೃಷಿ ತಜ್ಞರು ತಿಳಿಸಿದ್ದಾರೆ.

ಏನಿದು ಎಲ್ ನಿನೋ ಮತ್ತು ಲಾ-ನಿನಾ?

ಪ್ರತಿ ವರ್ಷ ಎಲ್ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮೇರೆಗೆ ಮುಂಗಾರು ಮಳೆ ನಿರ್ಣಯವಾಗುತ್ತದೆ. ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿ.ಸೆ.ನಿಂದ 1.5 ಡಿ.ಸೆ.ವರೆಗೆ ಹೆಚ್ಚು ದಾಖಲಾದರೆ ಎಲ್ ನಿನೋ ಉಂಟಾಗುತ್ತದೆ. ಆದರೆ ಪೆಸಿಫಿಕ್ ಸಮುದ್ರದ ಪಶ್ಚಿಮ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ ಲಾ-ನಿನಾ ಎಂದು ಕರೆಯಲಾಗುತ್ತಿದೆ. 2023-24ರಲ್ಲಿ ಎಲ್ ನಿನೋ ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿತ್ತು. ಇದರಿಂದ ರಾಜ್ಯದಲ್ಲಿ ತೀವ್ರ ಮಳೆ ಕುಂಠಿತವಾಗಿ ಬರಗಾಲ ಉಂಟಾಗಿತ್ತು. 2024-25 ಮತ್ತು 2025-26ರಲ್ಲಿ ಲಾ-ನಿನಾ ಪರಿಣಾಮದಿಂದ ಉತ್ತಮ ಮಳೆಯಾಗಿತ್ತು.

 

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon