ಬೆಂಗಳೂರು: ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ರಂದು ಹೊರಡಿಸಿರುವ ಸುತ್ತೋಲೆ ಮೂಲಕ ಹೊರಗುತ್ತಿಗೆ ಕಾರ್ಮಿಕರನ್ನು ಟೆಂಡರ್ ಅವಧಿ ಮುಗಿಯುತ್ತಿದ್ದಂತೆ ಬಿಡುಗಡೆ ಮಾಡಬೇಕೆಂಬ ಕ್ರಮ ಸ್ಪಷ್ಟವಾಗಿ ಜೀವವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಯಾಗಿದ್ದು, ಇಂತಹ ಅಮಾನವೀಯ ಕ್ರಮವನ್ನು ಅತ್ಯಂತ ಉಘ್ರವಾಗಿ ಖಂಡಿಸುತ್ತೇವೆ ಎಂದು ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ ಸೋಮಶೇಖರ್ ಹೇಳಿದ್ದಾರೆ.
ರಾಜ್ಯದ ವಿವಿಧ ಇಲಾಖೆ, ಮಂಡಳಿ ಮತ್ತು ನಿಗಮಗಳಲ್ಲಿ ಸುಮಾರು ಮೂರು ಲಕ್ಷ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಅನೇಕರು 15 ರಿಂದ 20 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಾಗಿದ್ದಾರೆ. ಸೇವಾಭದ್ರತೆ ಕುರಿತು ಸರ್ಕಾರ ವಿಶೇಷ ಮಸೂದೆ ತರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ಸಮಯದಲ್ಲಿ, ಈ ಆದೇಶ ಅನಿರೀಕ್ಷಿತ ಬರಸಿಡಿಲಿನಂತೆ ಬಂದು ಅವರ ನಿರೀಕ್ಷೆಗಳನ್ನೇ ಚೂರುಮಾಡಿದೆ, ಕಾರ್ಮಿಕರಿಗೆ ಇದು ಭಾರೀ ಆಘಾತವನ್ನುಂಟು ಮಾಡಿದೆ ಎಂದಿದ್ದಾರೆ.
ಖಾಯಂ ಸ್ವರೂಪದ ಕೆಲಸಗಳು ಮತ್ತು ಅಗತ್ಯ ಸೇವೆಗಳ ಹುದ್ದೆಗಳಲ್ಲಿ ತಾತ್ಕಾಲಿಕ ಹಾಗೂ ಹೊರಗುತ್ತಿಗೆ ನೇಮಕಾತಿ ನಿಷಿದ್ಧವಾಗಿದ್ದರೂ ಅದನ್ನು ಸಂಪೂರ್ಣವಾಗಿ ಕಡೆಗಣಿಸಿ, ಹೊರಗುತ್ತಿಗೆಯಲ್ಲೇ ನೇಮಕ ಮಾಡುವ ಯೋಚನೆ ಅತ್ಯಂತ ಕಾರ್ಮಿಕ ವಿರೋಧಿ ಕ್ರಮವಾಗಿದೆ. ಇದು ಕಾರ್ಮಿಕರ ಹಕ್ಕುಗಳನ್ನು ಮಾತ್ರವಲ್ಲದೆ, ಸಂವಿಧಾನ ಒದಗಿಸಿರುವ ಘನತೆಯಿಂದ ಬದುಕುವ ಹಕ್ಕಿಗೆ ನೇರವಾಗಿ ಧಕ್ಕೆ ಉಂಟುಮಾಡುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ಕೆಲಸದಿಂದ ಬಿಡುಗಡೆ ಮಾಡುವ ಹಾಗೂ ಮರು ನೇಮಿಸುವ ಈ ಪದ್ಧತಿ ಕಾರ್ಮಿಕರನ್ನು ನಿರಂತರ ಅಭದ್ರತೆ ಮತ್ತು ಆತಂಕದ ಪರಿಸ್ಥಿತಿಗೆ ತಳ್ಳುತ್ತದೆ. ಈ ಕ್ರಮವು ಕೇವಲ ಸೇವಾಭದ್ರತೆಯನ್ನು ಕಸಿದುಕೊಳ್ಳುವುದಲ್ಲದೆ, ಕಾರ್ಮಿಕರಿಗೆ ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗುವ, ಸಂಘಗಳನ್ನು ಕಟ್ಟುವ ಮತ್ತು ಹೋರಾಟ ನಡೆಸುವ ಮೂಲಭೂತ ಜನತಾಂತ್ರಿಕ ಹಕ್ಕುಗಳನ್ನೇ ಕಿತ್ತುಕೊಳ್ಳುವ ನೀತಿಯಾಗಿದೆ. ಅಲ್ಲದೇ ಈ ಆದೇಶ ಬಳಸಿಕೊಂಡು ಏಜನ್ಸಿಗಳು ಕಾರ್ಮಿಕರಿಗೆ ಕಿರುಕುಳ ನೀಡುವ, ದುರ್ಬಳಕೆ ಮಾಡಿಕೊಳ್ಳುವ ಅವಕಾಶ ಕಾರಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ನ್ಯಾಯ, ಹಿಂದುಳಿದ ಹಾಗೂ ದಲಿತ ವರ್ಗಗಳ ಬಗ್ಗೆ ಕಳಕಳಿ ಹೊಂದಿರುವರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳ ಕೆಳಗಿರುವ ಆರ್ಥಿಕ ಇಲಾಖೆಯಿಂದ ಇಂತಹ ನಿರ್ದಯ ಕ್ರಮ ಹೊರಬಂದಿರುವುದು ಅತ್ಯಂತ ವಿಷಾದನೀಯ ಮತ್ತು ಖಂಡನೀಯವಾಗಿದೆ. ಬಹುತೇಕ ತುಳಿತಕ್ಕೊಳಗಾದ, ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೇ ಹೊರಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವ ಸಂದರ್ಭದಲ್ಲಿ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರ್ಕಾರದಿಂದ ಇಂತಹ ಕ್ರಮವು ಯಾವುದೇ ರೀತಿಯಿಂದಲೂ ಅನಪೇಕ್ಷಿತವಾಗಿದೆ ಎಂದು ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.















